ADVERTISEMENT

ತಲಕಾಡು: ದಸರಾ ಬಳಿಕ ಪಂಚಲಿಂಗ ದರ್ಶನಕ್ಕೆ ಸಿದ್ಧತೆ

ತಿ.ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ಡಿಸೆಂಬರ್‌ 14ರಂದು ನಡೆಯಲಿರುವ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 3:55 IST
Last Updated 21 ಅಕ್ಟೋಬರ್ 2020, 3:55 IST
ತಲಕಾಡಿನಲ್ಲಿರುವ ಕೀರ್ತಿ ನಾರಾಯಣ ಸ್ವಾಮಿ ದೇವಾಲಯ
ತಲಕಾಡಿನಲ್ಲಿರುವ ಕೀರ್ತಿ ನಾರಾಯಣ ಸ್ವಾಮಿ ದೇವಾಲಯ   

ತಲಕಾಡು: ಡಿಸೆಂಬರ್‌ 14ರಂದು ನಡೆಯಲಿರುವ ಪಂಚಲಿಂಗ ದರ್ಶನಕ್ಕೆ ಇನ್ನೂ ಸಿದ್ಧತೆಗಳು ಆರಂಭವಾಗಿಲ್ಲ, ಆದರೆ ದಸರಾ ನಂತರ ಮತ್ತೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಕರೆದು ತಯಾರಿ ನಡೆಸುವುದಾಗಿ ಶಾಸಕ ಎಂ. ಅಶ್ವಿನ್ ಕುಮಾರ್ ತಿಳಿಸಿರುವುದು ಭಕ್ತರಲ್ಲಿ ಕೊಂಚ ಸಂತಸ ತಂದಿದೆ.

ತಲಕಾಡು ಪಂಚಲಿಂಗ ದರ್ಶನವು ಇದುವರೆಗೂ ಐದು, ಏಳು, ಒಂಬತ್ತು ಹಾಗೂ 12 ವರ್ಷ‌ಗಳಿಗೊಮ್ಮೆ ಅದ್ಧೂರಿಯಾಗಿ ಆಚರಿಸಲಾಗಿದೆ.

ಮಹೋತ್ಸವ ಸಂಬಂಧ ಕಳೆದ ಜೂನ್‌ ತಿಂಗಳಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಆಗಿನ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಶಾಸಕ ಎಂ.ಅಶ್ವಿನ್ ಕುಮಾರ್ ಇನ್ನಿತರೆ ಅಧಿಕಾರಿಗಳು ಭಾಗವಹಿಸಿದ್ದರು.

ADVERTISEMENT

ಮಹೋತ್ಸವದ ಹಿನ್ನೆಲೆಯಲ್ಲಿ ಇದುವರೆಗೂ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

‘ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವುದರಿಂದ ಪಂಚಲಿಂಗ ದರ್ಶನ ಮಹೋತ್ಸವವನ್ನು ಸರಳವಾಗಿ ಆಚರಿಸಲು ಚಿಂತಿಸಲಾಗಿದೆ. ದಸರಾ ಬಳಿಕ ಉಸ್ತುವಾರಿ ಸಚಿವರ ಸಭೆ ನಡೆಸಿ ಅಗತ್ಯ ತಯಾರಿ ಮಾಡಿಕೊಳ್ಳಲಾಗುವುದು’ ಎಂದು ಶಾಸಕ ಎಂ. ಅಶ್ವಿನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಂಚಲಿಂಗ ದರ್ಶನಕ್ಕೆ ಸಂಬಂಧಿಸಿದಂತೆ ಜೂನ್‌ ನಂತರ ಯಾವುದೇ ಪೂರ್ವಭಾವಿ ಸಭೆ ನಡೆದಿಲ್ಲ’ ಎಂದು ತಹಶೀಲ್ದಾರ್‌ ಡಿ.ನಾಗೇಶ್ ಹೇಳಿದರು.

‘ಈ ಬಾರಿಯ ಪಂಚಲಿಂಗ ದರ್ಶನ ಮಹೋತ್ಸವಕ್ಕೆ ಇದುವರೆಗೂ ಯಾವುದೇ ಕೆಲಸಗಳು ಆರಂಭವಾಗಿಲ್ಲ. ಇರುವ ಕಡಿಮೆ ಅವಧಿಯಲ್ಲಿ ಏನು ಮಾಡುತ್ತಾರೋ ನೋಡಬೇಕು’ ಎಂದು ಟೀ ಅಂಗಡಿ ಮಾಲೀಕ ಸತೀಶ್ ಪ್ರತಿಕ್ರಿಯಿಸಿದರು.

‘ಸಭೆಯ ನಂತರ ದೇವಸ್ಥಾನ ಅಭಿವೃದ್ಧಿ ಕಾರ್ಯ ಮಾಡಲಾಗುವುದು. ರಸ್ತೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಭೂಮಿಪೂಜೆ ನೆರವೇರಿಸಿದರೆ ಶೀಘ್ರ ಪೂರ್ಣಗೊಳಿಸುತ್ತೇವೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ಶಿವರಾಜ್ ತಿಳಿಸಿದರು.

2013ರ ಬಳಿಕ ಪಂಚಲಿಂಗ ದರ್ಶನ ನಡೆಯುತ್ತಿದ್ದು, ಈ ಬಾರಿ ಅಮಾವಾಸ್ಯೆಯಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.