ಮೈಸೂರು: ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಸೋಮವಾರ ಇಳಿ ಮಧ್ಯಾಹ್ನ ಮಳೆಯ ನಡುವೆಯೇ ಬಂದಿಳಿದರು.
ಮಳೆಯ ನಡುವೆಯೇ ಪೊಲೀಸರು ಭದ್ರತಾ ಜವಾಬ್ದಾರಿ ನಿರ್ವಹಿಸಿದರು. ಅವರು ಓಡಾಡುವ ರಸ್ತೆಗಳಲ್ಲಿ ಭದ್ರತೆಯ ದೃಷ್ಟಿಯಿಂದ ಅಂಗಡಿ– ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದು, ನಗರದಲ್ಲಿ ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಗಿತ್ತು.
ರಾಷ್ಟ್ರಪತಿ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬಂಡಿಪಾಳ್ಯ, ವರ್ತುಲ ರಸ್ತೆ, ಬೋಗಾದಿ ರಸ್ತೆ, ಜೆ.ಸಿ ಕಾಲೇಜು ರಸ್ತೆಯ ಮೂಲಕ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್) ತಲುಪಿದರು. ಅಲ್ಲಿ ವಜ್ರಮಹೋತ್ಸವದಲ್ಲಿ ಭಾಗಿಯಾಗಿ ನಂತರ ಕುಕ್ಕರಹಳ್ಳಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್‌ಹೌಸ್ ವೃತ್ತದ ಮೂಲಕ ರ್‍ಯಾಡಿಸನ್ ಬ್ಲೂ ಹೋಟೆಲ್‌ಗೆ ತೆರಳಿದರು.
ರಾಷ್ಟ್ರಪತಿ ಭದ್ರತಾ ಪಡೆಯ ಬ್ಲೂ ಬುಕ್ ನಿಯಮದಂತೆ ನಗರ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಬೆಳಿಗ್ಗೆ 11ರಿಂದಲೇ ಅಗತ್ಯ ವಸ್ತುಗಳ ಮಳಿಗೆ ಹೊರತುಪಡಿಸಿ ಉಳಿದ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಿದರು. ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಅಂಗಡಿಗಳು ಸಂಪೂರ್ಣವಾಗಿ ಮುಚ್ಚಿದ್ದವು. ಬೆರಳೆಣಿಕೆಯ ಜನರಷ್ಟೇ ಓಡಾಡುತ್ತಿದ್ದರು.
ರಸ್ತೆಯ ಇಕ್ಕೆಲಗಳಲ್ಲೂ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಈ ರಸ್ತೆಗಳಲ್ಲಿ ಪ್ರತಿ ನೂರು ಮೀಟರ್‌ಗೆ ಒಬ್ಬ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ದ್ರೌಪದಿ ಮುರ್ಮು ಅವರು ಬಂದ ಸಮಯದಲ್ಲಿ ಜೋರು ಮಳೆ ಸುರಿದಿತ್ತು. ಪ್ರಮುಖ ವೃತ್ತಗಳಲ್ಲಿ ಇನ್‌ಸ್ಪೆಕ್ಟರ್‌ಗಳು ಭದ್ರತೆಯ ಜವಾಬ್ದಾರಿ ನಿರ್ವಹಿಸಿದರು.
ಪರದಾಡಿದ ಸವಾರರು: ರಾಷ್ಟ್ರಪತಿ ಓಡಾಡುವ ರಸ್ತೆಗೆ ಸಂಪರ್ಕ ಕಲ್ಪಿಸುವ, ಸುತ್ತಲಿನ ರಸ್ತೆಗಳಲ್ಲೂ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ಸವಾರರು ಸುತ್ತು ಬಳಸಿ ಸಂಚರಿಸಬೇಕಾಯಿತು.
ಒಳ ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದರಿಂದ, ವಾಹನ ಚಾಲಕರು ಮುಖ್ಯ ರಸ್ತೆ ಸೇರಿದರು. ಇದರಿಂದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟನೆ ಹೆಚ್ಚಾಯಿತು. ಉದ್ದೇಶಿತ ಸ್ಥಳ ತಲುಪಲು ಸುತ್ತು ಬಳಸಿಕೊಂಡು ಸಾಗಬೇಕಾಯಿತು. ಸಿಗ್ನಲ್‌ಗಳಲ್ಲಿ ಸಿಲುಕಿಕೊಂಡು ತೊಂದರೆ ಅನುಭವಿಸಿದರು. ಅನೇಕರು ಮೈಸೂರು– ಹುಣಸೂರು ರಸ್ತೆಯನ್ನು ಬಳಸಿದ್ದರಿಂದ ಅಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಕೆಎಸ್‌ಆರ್‌ಟಿಸಿ ಬಸ್‌ಗಳೂ ಪಥ ಬದಲಾಯಿಸಿ ಸಂಚರಿಸಿದವು.
ರಾಗಿ ಮುದ್ದೆ ಸವಿದ ಮುರ್ಮು:
ರ್‍ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಸೋಮವಾರ ರಾತ್ರಿ ದ್ರೌಪದಿ ಮುರ್ಮು ರಾಗಿ ಮುದ್ದೆ ಉಪ್ಸಾರು ಸವಿದು ಖುಷಿ ಪಟ್ಟರು. ಮೈಸೂರಿನ ಪಾರಂಪರಿಕ ಊಟ ನೀಡುವಂತೆ ಹೋಟೆಲ್ ಸಿಬ್ಬಂದಿಗೆ ರಾಷ್ಟ್ರಪತಿಗಳ ತಂಡ ತಿಳಿಸಿತ್ತು. ‘ದಕ್ಷಿಣ ಭಾರತೀಯ ಆಹಾರವನ್ನು ತಯಾರಿಸಿದ್ದು ಅವರ ಇಷ್ಟದಂತೆ ಸ್ಥಳೀಯ ತಿಂಡಿಗಳನ್ನು ಉಣಬಡಿಸಿದ್ದೇವೆ. ದರ್ಬಾರ್ ಕೊಠಡಿಯನ್ನು ನೀಡಿದ್ದು ವಿಶೇಷ ಆತಿಥ್ಯ ನೀಡಲಾಗಿದೆ’ ಎಂದು ಹೋಟೆಲ್ ವ್ಯವಸ್ಥಾಪಕ ವಿಜಯ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.