ADVERTISEMENT

‘ಪತ್ರಿಕಾ ಪ್ರತಿನಿಧಿಗಳು ಅಸಂಘಟಿತ ವಲಯಕ್ಕೆ ಸೇರಲಿ’

ಹಲವು ಸೌಲಭ್ಯ ನೀಡಲು ವಾಸು ಕರೆ, ಶಾಸಕ ನಾಗೇಂದ್ರ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 12:01 IST
Last Updated 25 ಡಿಸೆಂಬರ್ 2020, 12:01 IST
ಮೈಸೂರಿನ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಪತ್ರಿಕಾ ವಿತರಕರಾದ ಸಂತೋಷ್, ಎಂ.ಎನ್.ಪ್ರಕಾಶ್, ಕೆ.ಎಂ.ಸಂತೋಷ್, ಸಂಘದ ಅಧ್ಯಕ್ಷ ಪಿ.ಸುರೇಶ್, ಶಾಸಕ ಎಲ್.ನಾಗೇಂದ್ರ, ಸಂಘದ ಗೌರವ ಅಧ್ಯಕ್ಷ ವಾಸು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಎ.ರವಿ, ನವ್ಯಾ, ಜೆ.ಚಂದ್ರು, ವೆಂಕಟೇಶ್‌ಬಾಬು ಭಾಗವಹಿಸಿದ್ದರು
ಮೈಸೂರಿನ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಪತ್ರಿಕಾ ವಿತರಕರಾದ ಸಂತೋಷ್, ಎಂ.ಎನ್.ಪ್ರಕಾಶ್, ಕೆ.ಎಂ.ಸಂತೋಷ್, ಸಂಘದ ಅಧ್ಯಕ್ಷ ಪಿ.ಸುರೇಶ್, ಶಾಸಕ ಎಲ್.ನಾಗೇಂದ್ರ, ಸಂಘದ ಗೌರವ ಅಧ್ಯಕ್ಷ ವಾಸು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಎ.ರವಿ, ನವ್ಯಾ, ಜೆ.ಚಂದ್ರು, ವೆಂಕಟೇಶ್‌ಬಾಬು ಭಾಗವಹಿಸಿದ್ದರು   

ಮೈಸೂರು: ಪತ್ರಿಕಾ ರಂಗದಲ್ಲಿ ದುಡಿಯುವವರನ್ನು ಅಸಂಘಟಿತ ವಲಯಕ್ಕೆ ಸೇರಿಸಬೇಕು. ಈ ಮೂಲಕ ಇವರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ ಗೌರವ ಅಧ್ಯಕ್ಷ ವಾಸು ಒತ್ತಾಯಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾ ಭವನದಲ್ಲಿ ನಡೆದ ಸಂಘದ 5ನೇ ವಾರ್ಷಿಕೋತ್ಸವ ಹಾಗೂ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದಿಗೂ ಪತ್ರಿಕಾ ರಂಗದಲ್ಲಿ ದುಡಿಯುವವರು ತೀರಾ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಇವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಇವರಿಗೆ ಸಿಗುತ್ತಿಲ್ಲ. ಅಸಂಘಟಿಕ ವಲಯದ ಕಾರ್ಮಿಕರಿಗೆ ನೀಡಲಾಗುವ ಸೌಲಭ್ಯ ನೀಡಬೇಕು ಎಂದರು.

ADVERTISEMENT

ಈಚೆಗೆ ನಿಧನರಾದ ಸಂಘದ ಗೌರವ ಅಧ್ಯಕ್ಷರಾಗಿದ್ದ ಜನಾರ್ದನ್ ಹಾಗೂ ಅಧ್ಯಕ್ಷರಾಗಿದ್ದ ಬಿ.ಎನ್.ನಾಯಕ ಅವರ ಕುಟುಂಬದವರು ಉದಾರವಾಗಿ ಸಂಘದ ಬಡ ಸದಸ್ಯರಿಗೆ ಧನಸಹಾಯ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ‘ಸಂಘದವರು ನಾಗರಿಕ ಸೌಕರ್ಯ ನಿವೇಶನ ಪಡೆಯಲು ಅರ್ಜಿ ಸಲ್ಲಿಸಬೇಕು. ಅಲ್ಲೊಂದು ಭವನ ನಿರ್ಮಿಸಲು ಶಾಸಕರ ನಿಧಿಯಿಂದ ಉದಾರವಾಗಿ ಧನಸಹಾಯ ಮಾಡಲಾಗುವುದು. ಸಂಸದರ ನಿಧಿಯಿಂದಲೂ ಹಣ ದೊರಕಿಸಿಕೊಡಲಾಗುವುದು’ ಎಂದು ಭರವಸೆ ನೀಡಿದರು.

ನಿಜಕ್ಕೂ ಪತ್ರಿಕಾ ವಿತರಕದ ಜವಾಬ್ದಾರಿ ಅತಿ ದೊಡ್ಡದು. ನಸುಕಿನಲ್ಲೇ ಎದ್ದು, ಕೊರೆಯುವ ಚಳಿಯಲ್ಲಿ, ಮನೆಮನೆಗೆ ಪತ್ರಿಕೆ ತಲುಪಿಸುವ ಅವರ ಕಾರ್ಯ ಶ್ಲಾಘನೀಯ. ಆದರೆ, ಅವರು ಸಂಕಷ್ಟದ ಜೀವನ ನಡೆಸುತ್ತಿರುವುದು ಬೇಸರ ತರಿಸಿದೆ. ಅವರ ಶ್ರೇಯೋಭಿವೃದ್ಧಿಗೆ ಸಾಧ್ಯವಿರುವ ಕೆಲಸ ಮಾಡಲಾಗುವುದು ಎಂದರು.

ಈ ವೇಳೆ ಅನಾರೋಗ್ಯದಿಂದ ಬಳಲುತ್ತಿರುವ ಪತ್ರಿಕಾ ವಿತರಕರಾದ ಪುಟ್ಟಸ್ವಾಮಿ, ಸುಂದರ್, ಸಿದ್ದರಾಜು, ಕೆ.ಎಸ್.ಉದಯ್‌ಕುಮಾರ್, ಅಶೋಕ್, ಉದಯಕುಮಾರ್, ರಂಗನಾಥ್ ಅವರಿಗೆ ಧನಸಹಾಯ ವಿತರಿಸಲಾಯಿತು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಪಿ.ಸುರೇಶ್, ಪದಾಧಿಕಾರಿ ಎ.ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.