ADVERTISEMENT

ಹೋಟೆಲ್‌ಗಳು ಕೋವಿಡ್‌ ಆರೈಕೆ ಕೇಂದ್ರ: ಜಿಲ್ಲಾಡಳಿತ ಚಿಂತನೆ

ಸೋಂಕು ಲಕ್ಷಣ ಗೋಚರಿಸದವರಿಗೆ ಹೋಟೆಲ್‌ಗಳಲ್ಲಿ ಚಿಕಿತ್ಸೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 2:25 IST
Last Updated 18 ಜುಲೈ 2020, 2:25 IST
ಅಭಿರಾಂ ಜಿ.ಶಂಕರ್‌
ಅಭಿರಾಂ ಜಿ.ಶಂಕರ್‌   

ಮೈಸೂರು: ನಗರದ ಕೆಲವು ಹೋಟೆಲ್‌ಗಳು ಮುಂದಿನ ದಿನಗಳಲ್ಲಿ ಕೋವಿಡ್‌ ಆರೈಕೆ ಕೇಂದ್ರಗಳಾಗಿ ಪರಿವರ್ತನೆಯಾಗಲಿವೆ. ಸೋಂಕು ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ವ್ಯಕ್ತಿಗಳಿಗೆ ಹೋಟೆಲ್‌ಗಳಲ್ಲಿ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಖಾಸಗಿ ಆಸ್ಪತ್ರೆಗಳು ವಿವಿಧ ದರ್ಜೆಗಳ ಹೋಟೆಲ್‌ಗಳ ಜತೆ ಹೊಂದಾಣಿಕೆ ಮಾಡಿಕೊಂಡು ಇಂತಹ ಪ್ರಸ್ತಾವವೊಂದನ್ನು ಜಿಲ್ಲಾಡಳಿತದ ಮುಂದಿಟ್ಟಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಒಂದೆರಡು ದಿನಗಳಲ್ಲಿ ಸ್ಪಷ್ಟಚಿತ್ರಣ ಲಭಿಸಲಿದೆ.

ಈಗ ಕೋವಿಡ್‌ ರೋಗಿಗಳಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಲಕ್ಷಣಗಳು ತೋರಿಸದ ರೋಗಿಗಳಿಗೆ ಮನೆಗಳಲ್ಲೇ ಐಸೊಲೇಷನ್‌ಗೆ ವ್ಯವಸ್ಥೆ ಮಾಡಲಾಗಿದೆ. ಮನೆ ಮತ್ತು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯಲು ಬಯಸದವರಿಗೆ ಹೋಟೆಲ್‌ಗಳಲ್ಲಿ ಆರೈಕೆ ಪಡೆಯಬಹುದು.

ADVERTISEMENT

ಹೋಟೆಲ್‌ಗಳ ಸಾಮರ್ಥ್ಯದ ಅನುಸಾರ ಹಾಸಿಗೆಗಳನ್ನು ಸಜ್ಜುಗೊಳಿಸ ಲಾಗುತ್ತದೆ. ಊಟ–ತಿಂಡಿ ಹಾಗೂ ಇತರ ಸೌಲಭ್ಯಗಳನ್ನು ಹೋಟೆಲ್‌ಗಳ ವತಿಯಿಂದ ಒದಗಿಸಲಾಗುವುದು. ರೋಗಿಯ ಆರೈಕೆ, ವೈದ್ಯರು, ಶುಶ್ರೂಷಕರು, ಆಂಬುಲೆನ್ಸ್ ಮತ್ತು ಇತರ ವೈದ್ಯಕೀಯ ನೆರವನ್ನು ಆಸ್ಪತ್ರೆಗಳು ನೀಡಲಿವೆ.

‘ಹೋಟೆಲ್‌ಗಳನ್ನು ಕೋವಿಡ್‌ ಆರೈಕೆ ಕೇಂದ್ರಗಳಾಗಿ ಪರಿವರ್ತಿಸುವ ಸಂಬಂಧ ಚರ್ಚೆ ನಡೆದಿದೆ. ಕೆಲವು ಹೋಟೆಲ್‌ಗಳ ಮಾಲೀಕರು ಈ ಬಗ್ಗೆ ಖಾಸಗಿ ಆಸ್ಪತ್ರೆಗಳ ಜತೆ ಚರ್ಚೆ ನಡೆಸಿದ್ದಾರೆ. ದರ ನಿಗದಿ ಹಾಗೂ ಜವಾಬ್ದಾರಿ ಹಂಚಿಕೆ ಕುರಿತು ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಜಂಟಿಯಾಗಿ ಪ್ರಕಟಣೆ ಹೊರಡಿಸ ಲಾಗುವುದು’ ಎಂದು ಮೈಸೂರು ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿದರು.

‘ಖಾಸಗಿ ಆಸ್ಪತ್ರೆಗಳು ಮತ್ತು ಹೋಟೆಲ್‌ಗಳಿಂದ ಇಂತಹ ಪ್ರಸ್ತಾವ ಬಂದಿದ್ದು, ಅದನ್ನು ಜಾರಿಗೊಳಿಸಲು ಜಿಲ್ಲಾಡಳಿತ ಸಿದ್ಧವಿದೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಲಿದೆ’ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.