ADVERTISEMENT

ಮೈಸೂರು | ಚುರುಕಾದ ‘ಕಾವೇರಿ 2.0’ ತಂತ್ರಾಂಶ: ಕಚೇರಿಗಳಲ್ಲಿ ಜನಸಂದಣಿ

ಆಸ್ತಿ ದಸ್ತಾವೇಜುಗಳ ನೋಂದಣಿ ಸಮಸ್ಯೆ ಪರಿಹಾರ

ಆರ್.ಜಿತೇಂದ್ರ
Published 11 ಫೆಬ್ರುವರಿ 2025, 4:44 IST
Last Updated 11 ಫೆಬ್ರುವರಿ 2025, 4:44 IST
ಮೈಸೂರು ಉಪ ನೋಂದಣಾಧಿಕಾರಿ ಕಚೇರಿ ಹೊರಗೆ ಸೋಮವಾರ ನೆರೆದ ಸಾರ್ವಜನಿಕರು– ಪ್ರಜಾವಾಣಿ ಚಿತ್ರ
ಮೈಸೂರು ಉಪ ನೋಂದಣಾಧಿಕಾರಿ ಕಚೇರಿ ಹೊರಗೆ ಸೋಮವಾರ ನೆರೆದ ಸಾರ್ವಜನಿಕರು– ಪ್ರಜಾವಾಣಿ ಚಿತ್ರ   

ಮೈಸೂರು: ವಾರಗಳ ನಂತರ ‘ಕಾವೇರಿ 2.0’ ತಂತ್ರಾಂಶ ಚುರುಕಾಗಿದ್ದು, ಜಿಲ್ಲೆಯಲ್ಲಿನ ಉಪ ನೋಂದಣಾಧಿಕಾರಿ ಕಚೇರಿಗಳಿಗೆ ಜೀವಕಳೆ ಬಂದಿದೆ.

ಸೋಮವಾರ ಜಿಲ್ಲೆಯಲ್ಲಿನ ಬಹುತೇಕ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜನಸಂದಣಿ ಕಂಡುಬಂದಿತು. ಮೈಸೂರು ನಗರದ ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿರುವ ಉತ್ತರ ಉಪ ನೋಂದಣಾಧಿಕಾರಿ ಕಚೇರಿ ಹಾಗೂ ರಾಮಕೃಷ್ಣನಗರ, ವಿಜಯನಗರ, ಕಲ್ಯಾಣಗಿರಿಯಲ್ಲಿರುವ ಕಚೇರಿಗಳಲ್ಲೂ ಆಸ್ತಿ ನೋಂದಣಿಗೆ ಜನ ಸಾಲುಗಟ್ಟಿ ನಿಂತಿದ್ದರು. ತಾಲ್ಲೂಕು ಕೇಂದ್ರಗಳಲ್ಲಿನ ಕಚೇರಿಗಳಲ್ಲೂ ಜನರು ನೆರೆದಿದ್ದರು.

ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ದಸ್ತಾವೇಜುಗಳ ನೋಂದಣಿಗೆ ಸರ್ಕಾರವು ‘ಕಾವೇರಿ’ ತಂತ್ರಾಂಶವನ್ನು ಬಳಸುತ್ತಿದೆ. ಆದರೆ ಆಗಾಗ್ಗೆ ಸರ್ವರ್‌ ಸಮಸ್ಯೆಯಿಂದಾಗಿ ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಲೇ ಇದೆ. ಕೆಲವೊಮ್ಮೆ ಇಡೀ ದಿನ ಸರ್ವರ್ ಸಿಗದೇ ಜನರು ವಾಪಸ್ ಆಗಿದ್ದು ಉಂಟು. ಅದರಲ್ಲೂ ಕಳೆದ ಕೆಲವು ವಾರಗಳಿಂದ ‘ಕಾವೇರಿ’ ಬಹುತೇಕ ಬಂದ್‌ ಆಗಿದ್ದು, ಜನರು ಪರದಾಡಿದ್ದರು. ಆನ್‌ಲೈನ್‌ ಹಾಗೂ ಆಫ್‌ಲೈನ್‌ ಮೂಲಕ ಋಣಭಾರ ಪ್ರಮಾಣಪತ್ರ (ಇ.ಸಿ) ನೀಡಿಕೆಯೂ ಬಂದ್ ಆಗಿತ್ತು. ಇದರಿಂದ ಸರ್ಕಾರಕ್ಕೂ ಆದಾಯ ಖೋತಾ ಆಗಿತ್ತು. ಈಗ್ಗೆ ಮೂರ್ನಾಲ್ಕು ದಿನದಿಂದ ಸರ್ವರ್‌ ಹಳಿಗೆ ಮರಳಿದ್ದು, ನೋಂದಣಿ ಕಾರ್ಯಗಳು ಸರಾಗವಾಗಿ ನಡೆದಿವೆ.

ADVERTISEMENT

‘ಪ್ರತಿ ಕಚೇರಿಯಲ್ಲೂ ನಿತ್ಯ ಸರಾಸರಿ 60–80 ಆಸ್ತಿ ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಆನ್‌ಲೈನ್‌ನಲ್ಲೇ ಸಮಯ ನಿಗದಿಪಡಿಸಿಕೊಂಡು ಬರುವುದರಿಂದ ಹಿಂದಿನಂತೆ ಕಾಯುವ ಅಗತ್ಯವಿಲ್ಲ. ಜನಸಂದಣಿಯೂ ಇರುವುದಿಲ್ಲ. ಆದರೆ ಕೆಲವು ವಾರಗಳಿಂದ ತಂತ್ರಾಂಶದಲ್ಲಿನ ಸಮಸ್ಯೆಯಿಂದಾಗಿ ಸಮಯ ನಿಗದಿಪಡಿಸಿಕೊಂಡವರಿಗೂ ನೋಂದಣಿ ಸಾಧ್ಯವಾಗಿರಲಿಲ್ಲ. ಸದ್ಯ ಸಮಸ್ಯೆ ಬಗೆಹರಿದಿದ್ದು, ದಸ್ತಾವೇಜುಗಳ ನೋಂದಣಿ ಎಂದಿನಂತೆ ನಡೆದಿದೆ’ ಎಂದು ಮೈಸೂರು ಉತ್ತರ ನೋಂದಣಾಧಿಕಾರಿ ಕಚೇರಿಯಲ್ಲಿನ ಸಿಬ್ಬಂದಿಯೊಬ್ಬರು ಹೇಳಿದರು.

ಎಲ್ಲೆಲ್ಲಿದೆ ಉಪ ನೋಂದಣಾಧಿಕಾರಿ ಕಚೇರಿ?

* ಮೈಸೂರು ಉತ್ತರ (ಮಿನಿ ವಿಧಾನಸೌಧ)

* ಮೈಸೂರು ದಕ್ಷಿಣ (ರಾಮಕೃಷ್ಣ ನಗರ)

* ಮೈಸೂರು ಪೂರ್ವ (ಡಾ. ರಾಜಕುಮಾರ್ ರಸ್ತೆ)

* ಮೈಸೂರು ಪಶ್ಚಿಮ (ವಿಜಯನಗರ ವಾಟರ್ ಟ್ಯಾಂಕ್‌)

* ಮುಡಾ ಕಚೇರಿ * ಬನ್ನೂರು * ತಿ. ನರಸೀಪುರ * ಎಚ್‌.ಡಿ. ಕೋಟೆ * ಹುಣಸೂರು * ಕೆ.ಆರ್. ನಗರ * ಮಿರ್ಲೆ * ಪಿರಿಯಾಪಟ್ಟಣ * ಬೆಟ್ಟದಪುರ * ನಂಜನಗೂಡು

ಎರಡು ವಾರದ ಹಿಂದೆಯೇ ಆಸ್ತಿ ನೋಂದಣಿಗೆ ಪ್ರಯತ್ನಿಸಿದ್ದು ಸರ್ವರ್ ಸಮಸ್ಯೆಯಿಂದಾಗಿ ಸಾಧ್ಯವಾಗಿರಲಿಲ್ಲ. ಇಂದು ಮತ್ತೆ ಕುಟುಂಬದೊಂದಿಗೆ ಬಂದಿದ್ದು ನೋಂದಣಿ ಮುಗಿಯುವ ವಿಶ್ವಾಸ ಇದೆ
-ಎಚ್‌.ಎಸ್. ರಮೇಶ್ ಮೈಸೂರು ನಿವಾಸಿ
ಮೂರ್ನಾಲ್ಕು ದಿನದಿಂದ ಕಾವೇರಿ ತಂತ್ರಾಂಶ ಸಹಜ ಸ್ಥಿತಿಗೆ ಮರಳಿದೆ. ಸದ್ಯ ಎಂದಿನಂತೆ ನೋಂದಣಿ ಕಾರ್ಯ ನಡೆದಿದ್ದು ಜನಸಂದಣಿ ಇದೆ.
-ಕಚೇರಿ ಸಿಬ್ಬಂದಿ, ಮೈಸೂರು ಉತ್ತರ ಕಚೇರಿ

ಹೆಚ್ಚಿದ ನೋಂದಣಿ: ಆದಾಯವೂ ವೃದ್ಧಿ

ಮೈಸೂರಿನ ಮಿನಿ ವಿಧಾನಸೌಧದ ಆವರಣದಲ್ಲಿ ಇರುವ ಉತ್ತರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವರ್ಷದಿಂದ ವರ್ಷಕ್ಕೆ ನೋಂದಣಿ ಪ್ರಮಾಣ ಹೆಚ್ಚುತ್ತಲೇ ಇದೆ. 2023–24ನೇ ಸಾಲಿನಲ್ಲಿ ಇಲ್ಲಿ ಒಟ್ಟು 14499 ಆಸ್ತಿ ದಸ್ತಾವೇಜುಗಳ ನೋಂದಣಿ ಆಗಿದ್ದು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸೇರಿದಂತೆ ಒಟ್ಟು ₹24.50 ಕೋಟಿ ವರಮಾನ ಸಂಗ್ರಹವಾಗಿದೆ. 2023–23ನೇ ಸಾಲಿನಲ್ಲಿ 13927 ದಸ್ತಾವೇಜುಗಳ ನೋಂದಣಿಯಿಂದ ಒಟ್ಟು ₹14.81 ಕೋಟಿ ಹಾಗೂ 2021–22ರಲ್ಲಿ 11987 ದಸ್ತಾವೇಜುಗಳ ನೋಂದಣಿಯಿಂದ ₹11.91 ಕೋಟಿ ಶುಲ್ಕ ಆದಾಯ ಸಂಗ್ರಹವಾಗಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 14 ಉಪ ಉಪ ನೋಂದಣಾಧಿಕಾರಿ ಕಚೇರಿಗಳಿವೆ. ಇದರಲ್ಲಿ 5 ಮೈಸೂರು ನಗರದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.