ಮೈಸೂರು: ‘ತಂತ್ರಜ್ಞಾನ ಯುಗದಲ್ಲಿ ಅವಕಾಶದ ಜೊತೆಯಲ್ಲಿಯೇ ಸಮಸ್ಯೆಗಳೂ ಸೃಷ್ಟಿಯಾಗಿವೆ. ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಳ್ಳುವ ಬದಲು ಪರಿಹಾರ ಕಂಡುಕೊಳ್ಳಲು ಚಿಂತನೆ ನಡೆಸಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಕೆಎಸ್‌ಒಯು ಹಾಗೂ ಮೈಸೂರು ವಿ.ವಿ ಸಮಾಜಕಾರ್ಯ ಅಧ್ಯಯನ ವಿಭಾಗಗಳು ಗುರುವಾರ ಆಯೋಜಿಸಿದ್ದ ‘ಸಮಾಜ ಕಾರ್ಯದಲ್ಲಿ ಹೊಸನೋಟಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
‘ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಹೊಸ ಸಾಧ್ಯತೆಗಳತ್ತ ದೃಷ್ಟಿ ನೆಟ್ಟರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು’ ಎಂದರು.
‘ಯಾವುದೇ ಸಾಧನೆ ತೋರಬೇಕಾದರೆ ನಿರಂತರ ಶ್ರಮ ಅವಶ್ಯ. ಯಾವಾಗಲೋ ಒಮ್ಮೆ ಪ್ರಯತ್ನ ನಡೆಸಿದರೆ ಯಶಸ್ಸು ದೊರಕದು. ಆತ್ಮವಿಶ್ವಾಸ, ನಂಬಿಕೆ ಹಾಗೂ ಸತತ ಪರಿಶ್ರಮದ ಅಗತ್ಯವಿದೆ’ ಎಂದು ಹೇಳಿದರು.
ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಅಂತರರಾಷ್ಟ್ರೀಯ ಸಮಾಜ ಕಾರ್ಯ ಒಕ್ಕೂಟದ ಖಜಾಂಚಿ ಎಂ.ವಿ.ಶ್ರೀಗಣೇಶ್, ಟಿಐಎಸ್‌ಎಸ್‌ನ ಪ್ರೊ ಮನೀಶ್ ಕುಮಾರ್ ಝಾ, ನಿಮ್ಹಾನ್ಸ್‌ನ ಪ್ರೊ.ಐ.ಎ.ಶರೀಫ್, ಪ್ರೊ. ವೈ.ಎಸ್. ಸಿದ್ದೇಗೌಡ, ಪ್ರೊ.ಕೆ.ಬಿ.ಪ್ರವೀಣ, ಪ್ರೊ.ಬಿ.ರಮೇಶ್, ಪ್ರೊ.ಕೆ.ಜಿ.ಪರಶುರಾಮ, ಪ್ರೊ.ಆರ್.ಶಿವಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.