ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ಅಂಗವಿಕಲರ ಪ್ರತಿಭಟನಾ ಜಾಥಾ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 17:29 IST
Last Updated 3 ಡಿಸೆಂಬರ್ 2018, 17:29 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಕಲಚೇತನ ಅಭ್ಯುದಯ ವೇದಿಕೆಯ ನೇತೃತ್ವದಲ್ಲಿ ಅಂಗವಿಕಲರು ಮೈಸೂರಿನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಕಲಚೇತನ ಅಭ್ಯುದಯ ವೇದಿಕೆಯ ನೇತೃತ್ವದಲ್ಲಿ ಅಂಗವಿಕಲರು ಮೈಸೂರಿನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.   

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಕಲಚೇತನ ಅಭ್ಯುದಯ ವೇದಿಕೆಯ ನೇತೃತ್ವದಲ್ಲಿ ಅಂಗವಿಕಲರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ತ್ರಿಚಕ್ರ ವಾಹನದಲ್ಲಿ ಹೊರಟ ಪ್ರತಿಭಟನಾಕಾರರು ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ತಲುಪಿ ಮನವಿ ಪತ್ರ ಸಲ್ಲಿಸಿದರು.

ಸಂಘದ ಅಧ್ಯಕ್ಷ ಪ್ರಭುಸ್ವಾಮಿ ಮಾತನಾಡಿ, ‘ನಗರದಲ್ಲಿ 4 ಸಾವಿರಕ್ಕೂ ಹೆಚ್ಚು ಅಂಗವಿಕಲರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಸ್ವಂತ ಸೂರು ಕಲ್ಪಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಅಂಗವಿಕಲರ ಮೇಲೆ ನಿರಂತರವಾದ ದೌರ್ಜನ್ಯಗಳು ನಡೆಯುತ್ತಿವೆ. ಹಲವು ಮಂದಿ ಜೀವನ ನಿರ್ವಹಣೆ ಮಾಡುವುದಕ್ಕೆ ಪರದಾಡುತ್ತಿದ್ದಾರೆ. ಹೀಗಾಗಿ, ಸರ್ಕಾರ ಕೂಡಲೇ ಅಂಗವಿಕಲರ ಮನವಿಯನ್ನು ಆಲಿಸಬೇಕು ಎಂದು ಆಗ್ರಹಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪ್ರತ್ಯೇಕ ಬಡಾವಣೆಯನ್ನು ಅಂಗವಿಕಲರಿಗಾಗಿಯೇ ನಿರ್ಮಿಸಬೇಕು. ನಿವೇಶನಗಳನ್ನು ಕೇವಲ ಅರ್ಹ ಅಂಗವಿಕಲರಿಗೆ ಮಾತ್ರ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣಕ್ಕೆ ಬಂದ ಪ್ರತಿಭಟನಾಕಾರರು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ವೇದಿಕೆಯ ಅಧ್ಯಕ್ಷ ಎಂ.ಪ್ರಭುಸ್ವಾಮಿ, ಸಂಚಾಲಕ ದಿಲೀಪ್, ಕಾರ್ಯದರ್ಶಿ ಅಜ್ಗರ್‌ಪಾಷಾ ಪ್ರತಿಭಟನೆಯಲ್ಲಿದ್ದರು.

ಪ್ರಮುಖ ಬೇಡಿಕೆಗಳು:

* 2016ರ ವಿಕಲಚೇತನರ ಕಾಯ್ದೆಯನ್ನು ರಾಜ್ಯದಲ್ಲಿ ಕೂಡಲೇ ಅನುಷ್ಠಾನಕ್ಕೆ ತರಬೇಕು

* ಬುದ್ದಿಮಾಂದ್ಯ ಮತ್ತು ಬಹುವಿಧದ ಅಂಗವಿಕಲರಿಗೆ ಪಾಲಿಕೆಯಿಂದ ಥೆರಪಿ ಸೆಂಟರ್‌ಗಳನ್ನು ಮತ್ತು ಯೋಗಕ್ಷೇಮ ಕೇಂದ್ರಗಳನ್ನು ತೆರೆದು ಸರ್ಕಾರವೇ ನಿರ್ವಹಣೆ ಮಾಡಬೇಕು.

* ಮೈಸೂರಿನಲ್ಲಿ ಅಂಗವಿಕಲರ ಸಬಲೀಕರಣ ಇಲಾಖೆ ವತಿಯಿಂದ ಪೆಟ್ಟಿಗೆ ಅಂಗಡಿಗಳನ್ನು ನೀಡುತ್ತಿದ್ದು, ಸ್ವಯಂ ಉದ್ಯೋಗ ಮಾಡಲು ಪಾಲಿಕೆಯಿಂದ ಪರವಾನಗಿ ನೀಡಿ, ಯಾವುದೇ ತೊಂದರೆ ಕೊಡದಂತೆ ನಿರ್ದೇಶನ ನೀಡಬೇಕು.

* ಅಂಗವಿಕಲರು ಸಭೆ, ಸಮಾರಂಭಗಳನ್ನು ಮಾಡಲು ನಗರದಲ್ಲಿ ಸಮುದಾಯ ಭವನ ನಿರ್ಮಿಸಿಕೊಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.