ADVERTISEMENT

ಮೈಸೂರು: ಸಕ್ಕರೆ ಕಾರ್ಖಾನೆ ಆರಂಭಿಸದಿದ್ದರೆ ಪ್ರತಿಭಟನೆ -ಸುನಯ್‌ಗೌಡ ಎಚ್ಚರಿಕೆ

ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 16:04 IST
Last Updated 5 ಏಪ್ರಿಲ್ 2021, 16:04 IST

ಮೈಸೂರು: ‘ಕೆ.ಆರ್.ನಗರ ತಾಲ್ಲೂಕಿನ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವು ನಿರಾಣಿ ಶುಗರ್ಸ್‌ ಲಿಮಿಟೆಡ್‌ಗೆ ವಹಿಸದೇ ಸರ್ಕಾರ ಕಾಲ ವಿಳಂಬ ಮಾಡುತ್ತಿದೆ. ಕಾರ್ಖಾನೆ ‍ಪುನರ್‌ ಆರಂಭವಾಗುವ ನಿರೀಕ್ಷೆಯಲ್ಲಿ ಕಬ್ಬು ನಾಟಿ ಮಾಡಿರುವ ಬೆಳೆಗಾರರು ಇದೀಗ ಆತಂಕದಲ್ಲಿ ಇದ್ದಾರೆ’ ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಳೇಮಿರ್ಲೆ ಸುನಯ್‌ಗೌಡ ಹೇಳಿದರು.

‘ಸರ್ಕಾರವು ತಿಂಗಳ ಒಳಗೆ ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ’ ಎಂದು ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ಸರ್ಕಾರವು ಖರೀದಿ ಕೇಂದ್ರದಲ್ಲಿ ರೈತರಿಂದ ಖರೀದಿಸಿದ ಬೆಳೆಗೆ ಸಕಾಲದಲ್ಲಿ ಹಣ ನೀಡುತ್ತಿಲ್ಲ. ಬೆಳೆ ತೂಕದಲ್ಲೂ ಮೋಸವಾಗುತ್ತಿದೆ. ವಿದ್ಯುತ್‌ ವ್ಯತ್ಯಯದಿಂದಾಗಿ ಕಬ್ಬು ಸೇರಿದಂತೆ ಬೆಳೆಗಳು ಒಣಗುತ್ತಿವೆ. ವಿದ್ಯುತ್‌ ಸಂಪರ್ಕ ಪಡೆಯಲು ತಿಂಗಳುಗಟ್ಟಲೇ ರೈತರು ಕಚೇರಿಗಳಿಗೆ ಅಲೆಯಬೇಕಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಒಗ್ಗಟ್ಟಾಗಬೇಕು: ರೈತ ಸಂಘಟನೆಗಳಲ್ಲಿ ಒಗ್ಗಟ್ಟಿನ ಕೊರತೆಯ ಲಾಭವನ್ನು ಸರ್ಕಾರಗಳು ಪಡೆದು ರೈತ ಹೋರಾಟವನ್ನು ಸಂಪೂರ್ಣ ಕಡೆಗಣಿಸಿವೆ. ರೈತ ಮುಖಂಡರು ಬಣ ರಾಜಕೀಯ ಬಿಡಬೇಕು ಎಂದು ಸಲಹೆ ನೀಡಿದರು.

ಸಾಲಿಗ್ರಾಮದ ರೈತ ರಮೇಶ್‌ ಮಾತನಾಡಿ, ‘ಅಕ್ಕಿ ಗಿರಣಿ ಮಾಲೀಕರು ಕ್ವಿಂಟಲ್‌ಗೆ 5ರಿಂದ 9ಕೆ.ಜಿ. ಭತ್ತವನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳುತ್ತಿದ್ದಾರೆ. ಚೀಲಕ್ಕೆ ಒಂದರಿಂದ ಎರಡು ಕೆ.ಜಿ. ಕಳೆಯಲಾಗುತ್ತಿದೆ. ಈ ವಂಚನೆ ಬಗ್ಗೆ ತಹಶೀಲ್ದಾರ್‌ ಅವರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.