ಮೈಸೂರು: ಆನ್‌ಲೈನ್ ಶಿಕ್ಷಣವನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳು ನಿತ್ಯ 2ರಿಂದ 3 ಗಂಟೆಗಳ ಕಾಲ ನಿರಂತರವಾಗಿ ಮೊಬೈಲ್ ಬಳಕೆ ಮಾಡುವುದರಿಂದ ಕಣ್ಣಿಗೆ ಮತ್ತು ಮಿದುಳಿನ ಭಾಗಗಳಿಗೆ ಹಾನಿಯಾಗುತ್ತದೆ. ವಿಶ್ವಸಂಸ್ಥೆಯೂ ಆನ್‌ಲೈನ್ ಶಿಕ್ಷಣದಿಂದಾಗುವ ಮಾರಕ ಪರಿಣಾಮಗಳನ್ನು ಕುರಿತು ಎಚ್ಚರಿಕೆ ನೀಡಿದೆ. ಹೀಗಿರುವಾಗ, ಆನ್‌ಲೈನ್ ಶಿಕ್ಷಣ ಪದ್ಧತಿ ಜಾರಿಗೊಳಿಸುವುದು ಸರಿಯಲ್ಲ ಎಂದು ಕಾರ್ಯಕರ್ತರು ಹರಿಹಾಯ್ದರು.
ನಿತ್ಯ ಮಕ್ಕಳನ್ನು ವೈದ್ಯರಿಂದ ತಪಾಸಣೆ ನಡೆಸಿ, ನಿರ್ದಿಷ್ಟ ಸಂಖ್ಯೆಯ ಮಕ್ಕಳಿಗೆ ನೇರವಾಗಿಯೇ ಶಿಕ್ಷಣ ನೀಡಬಹುದು. ಪರ್ಯಾಯ ಮಾರ್ಗಗಳನ್ನು ಹುಡುಕಬೇಕು. ಇದನ್ನು ಬಿಟ್ಟು ಏಕಾಏಕಿ ಆನ್‌ಲೈನ್ ಶಿಕ್ಷಣವನ್ನು ಜಾರಿಗೊಳಿಸಬಾರದು ಎಂದು ಕಿಡಿಕಾರಿದರು.
ಆನ್‌ಲೈನ್ ಶಿಕ್ಷಣಕ್ಕೆ ಒತ್ತಾಯಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಮುಖಂಡರಾದ ಕಿರಗಸೂರು ಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.