ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಶಾಸಕ ಟಿ.ಎಸ್.ಶ್ರೀವತ್ಸ ನೇತೃತ್ವದಲ್ಲಿ ನಗರ ಬಸ್ ನಿಲ್ದಾಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು
ಮೈಸೂರು: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ, ಅವರ ರಕ್ಷಣೆಗೆ ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ಸದಸ್ಯರು ನಗರದ ವಿವಿಧೆಡೆ ಪ್ರತಿಭಟನೆ ನಡೆಸಿದರು.
ಚಾಮುಂಡಿಪುರಂ ವೃತ್ತ, ವೇದಾಂತ ಹೆಮ್ಮಿಗೆ ವೃತ್ತ, ರಾಮಸ್ವಾಮಿ ವೃತ್ತ, ಗನ್‌ಹೌಸ್ ವೃತ್ತ, ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ, ನಗರ ಬಸ್ ನಿಲ್ದಾಣ ಸೇರಿದಂತೆ ನಗರದ ಪ್ರಮುಖ 30 ವೃತ್ತಗಳಲ್ಲಿ ಭಿತ್ತಿ ಪತ್ರ ಪ್ರದರ್ಶಿಸಿದರು.
ಪ್ರತಿಭಟನೆ ನಂತರ ಸಮಿತಿ ಸಂಚಾಲಕ ರಂಗಸ್ವಾಮಿ, ‘ಬಾಂಗ್ಲಾದೇಶದಲ್ಲಿ ರಾಜಕೀಯ ಕ್ಷಿಪ್ರಕ್ರಾಂತಿ ನಡೆದಿದೆ. ಇದೇ ವೇಳೆ ಮೂಲಭೂತವಾದಿಗಳು ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ಹಿಂಸಾಚಾರ ನಡೆಸುತ್ತಿದ್ದಾರೆ’ ಎಂದು ಹೇಳಿದರು.
‘ಅರಾಜಕತೆ ಉಂಟಾಗಿದ್ದು, ಹಿಂದೂಗಳ ಮನೆ, ಅಂಗಡಿ, ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಅತ್ಯಾಚಾರ, ಹತ್ಯೆ, ಆಸ್ತಿ ನಾಶದಂತಹ ಅಮಾನವೀಯ ಕೃತ್ಯ ಎಸಗಲಾಗುತ್ತಿದೆ. ಅಲ್ಲಿನ ಸೇನೆಯೂ ಇದನ್ನು ತಡೆಯುತ್ತಿಲ್ಲ’ ಎಂದು ದೂರಿದರು.
ಬಿಜೆಪಿ ಮುಖಂಡ ಮಾ.ವಿ.ರಾಂಪ್ರಸಾದ್, ಸಮಿತಿಯ ಸಂಚಾಲಕರಾದ ಮಹೇಶ್, ರಂಗಸ್ವಾಮಿ, ಗಿರೀಶ್, ಸಂತೋಷ್, ವಿಕ್ರಂ ಅಯ್ಯಂಗಾರ್, ಚಂದ್ರು ಕುಮಾರ್, ಬೈರತಿ ಲಿಂಗರಾಜು, ಶ್ರೀನಿವಾಸ್, ಎಸ್.ಎನ್.ರಾಜೇಶ ಹಾಜರಿದ್ದರು.
ಭದ್ರತೆ ನೀಡಿ: ಬಸ್ ನಿಲ್ದಾಣದಲ್ಲಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ನಡೆಯುತ್ತಿದೆ. ಅವರಿಗೆ ಭದ್ರತೆ ಸಿಗಬೇಕು’ ಎಂದರು.
ಮುಖಂಡರಾದ ಸೋಮಸುಂದರ್, ಚೇತನ್, ಜಗದೀಶ್ ಇದ್ದರು.
Highlights - 30 ವೃತ್ತಗಳಲ್ಲಿ ಭಿತ್ತಿ ಪತ್ರ ಪ್ರದರ್ಶನ ಬಾಂಗ್ಲಾದೇಶದಲ್ಲಿ ರಾಜಕೀಯ ಕ್ಷಿಪ್ರಕ್ರಾಂತಿ ಹಿಂದೂ ಸಮುದಾಯದ ಮೇಲೆ ಹಿಂಸಾಚಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.