ADVERTISEMENT

ಗ್ರಾಮ ಪಂಚಾಯಿತಿ ನೌಕರರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 10:23 IST
Last Updated 25 ಜೂನ್ 2018, 10:23 IST

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪ‍ಂಚಾಯಿತಿ ನೌಕರರು ಸೋಮವಾರ ಇಲ್ಲಿನ ಮಿನಿವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಮೈಸೂರು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ನೌಕರರು ಕನಿಷ್ಠ ವೇತನ ಪಾವತಿಗೆ ಆಗ್ರಹಿಸಿದರು. ಸ್ವಚ್ಛತಾಗಾರರು ಸೇರಿದಂತೆ ಇತರೆ ಸುಮಾರು 17 ಸಾವಿರ ನೌಕರರನ್ನು ಸರ್ಕಾರ ಮುಖ್ಯವಾಹಿನಿಗೆ ತಂದಿಲ್ಲ. ಜತೆಗೆ, 2017ರ ಅಕ್ಟೋಬರ್ 31ಕ್ಕೂ ಹಿಂದೆ ನೇಮಕಗೊಂಡ ಸುಮಾರು 51,114 ನೌಕರರನ್ನು ಇಎಫ್‌ಎಂಎಸ್‌ಗೆ ಸೇರ್ಪಡೆಗೊಳಿಸಿ ವೇತನ ನೀಡಬೇಕು ಎಂದು ಅವರು ಆಗ್ರಹಿಸಿದರು.

ಎಸ್ಸೆಸ್ಸೆಲ್ಸಿ ಪಾಸಾದ 10 ವರ್ಷ ಸೇವೆ ಸಲ್ಲಿಸಿದ ಬಿಲ್ ಕಲೆಕ್ಟರ್‌ಗಳಿಗೆ ಸಿಗುತ್ತಿದ್ದ ಗ್ರೇಡ್–2 ಕಾರ್ಯದರ್ಶಿ ಬಡ್ತಿಯನ್ನು ಪುನಃ ಸಿಗುವಂತೆ ಮಾಡಬೇಕು. ನೌಕರರಿಗೆ ನಿವೃತ್ತಿ ವೇತನ, ವೈದ್ಯಕೀಯ ವೆಚ್ಚ, ಗ್ರಾಜುಯಿಟಿಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

2011ರ ಜನಗಣತಿ ಆಧಾರದ ಮೇಲೆ ಗ್ರಾಮ ಪಂಚಾಯಿತಿಗಳನ್ನು ಗ್ರೇಟ್–2ನಿಂದ ಗ್ರೇಡ್–1 ಆಗಿ ಮೇಲ್ದರ್ಜೆಗೆ ಏರಿಸಬೇಕು. ಎಂ.ಎಸ್.ಸ್ವಾಮಿ ಅವರ ಶಿಫಾರಸ್ಸಿನಂತೆ ಜನಸಂಖ್ಯೆಗೆ ಅನುಗುಣವಾಗಿ ಗ್ರಾಮ ಪಂಚಾಯಿತಿಗಳ ಅವಶ್ಯಕತೆಗಳಿಗೆ ಅನುಗುಣವಾಗಿ ವಿವಿಧ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಅವರು ಮನವಿ ಮಾಡಿದರು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು, ಸಂಘದ ತಾಲ್ಲೂಕು ಅಧ್ಯಕ್ಷ ವರುಣ ನಾಗರಾಜ್, ಪದಾಧಿಕಾರಿ ಬಸವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.