ADVERTISEMENT

ಸಂಬಳ ಬಂದು 6 ತಿಂಗಳಾಯಿತು ಬದುಕುವುದು ಹೇಗೆ?

ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಹಾಸ್ಟೆಲ್‌ನ ಗುತ್ತಿಗೆ ಸಿಬ್ಬಂದಿಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 10:32 IST
Last Updated 5 ಡಿಸೆಂಬರ್ 2019, 10:32 IST
ಬಾಕಿ ಉಳಿಸಿಕೊಂಡಿರುವ ಆರು ತಿಂಗಳ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂಭಾಗ ಬುಧವಾರ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು
ಬಾಕಿ ಉಳಿಸಿಕೊಂಡಿರುವ ಆರು ತಿಂಗಳ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂಭಾಗ ಬುಧವಾರ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು   

ಮೈಸೂರು: ‘ಸಂಬಳ ಬಂದು 6 ತಿಂಗಳು ಕಳೆಯಿತು. ನಾವು ಬದುಕುವುದಾದರೂ ಹೇಗೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ಸಿಬ್ಬಂದಿ ಪ್ರಶ್ನಿಸಿದರು.

ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಎದುರು ಬುಧವಾರ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಸೇರಿದ ಗುತ್ತಿಗೆ ಆಧಾರದ ಸಿಬ್ಬಂದಿ ಈಗಲಾದರೂ ಸಂಬಳ ನೀಡುವಂತೆ ಮನವಿ ಮಾಡಿದರು.

ಹಿಂದಿನ ಗುತ್ತಿಗೆದಾರರು ಪಿಎಫ್‌ ಹಾಗೂ ಇಎಸ್‌ಐ ನೀಡಿರುವ ಕುರಿತು ಯಾವುದೇ ದಾಖಲೆಗಳನ್ನು ಕಾರ್ಮಿಕರಿಗೆ ನೀಡಿಲ್ಲ. ಇದು ದುರುಪಯೋಗವಾಗಿರುವ ಶಂಕೆ ಇದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ADVERTISEMENT

ಹಿಂದಿನ ಪಿಎಫ್‌ ಹಣವನ್ನು ನೌಕರರಿಗೆ ಪಾವತಿಸಬೇಕು ಇಲ್ಲವೇ ಪಿ.ಎಫ್ ಖಾತೆಗೆ ಜಮಾ ಆಗಿರುವ ಕುರಿತು ದಾಖಲೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿ ತಿಂಗಳು 4 ವೇತನ ಸಹಿತ ವಾರದ ರಜೆ ಹಾಗೂ ಇತರ ರಜೆ ಸೌಲಭ್ಯಗಳ ಕುರಿತು ಸರ್ಕಾರ ಸ್ಪಷ್ಟ ಆದೇಶ ನೀಡಬೇಕು. ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ವೇತನ ಪಾವತಿಯಾಗಬೇಕು ಎಂದು ಒತ್ತಾಯಿಸಿದರು.

ಇಎಸ್‌ಐನ ಗುರುತಿನ ಪತ್ರ, ವೇತನ ಚೀಟಿ, ಪಿಎಫ್ ಖಾತೆಗೆ ಜಮಾ ಆಗಿರುವುದಕ್ಕೆ ದಾಖಲೆ, ಹಿಂಬಾಕಿ ವೇತನವನ್ನು ಕೂಡಲೇ ನೀಡಬೇಕು ಎಂದು ಅವರು ಒಕ್ಕೊರಲಿನಿಂದ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ರವಿ, ಮಹದೇವಮ್ಮ, ಲೋಕೇಶ್, ವಿಜಯ, ಶೋಭಾ ಇತರರಿದ್ದರು.

ಅತ್ಯಾಚಾರದ ವಿರುದ್ಧ ಪ್ರತಿಭಟನೆ
ಮೈಸೂರು:
ಹೈದರಾಬಾದಿನಲ್ಲಿ ಈಚೆಗೆ ನಡೆದ ಸಾಮೂಹಿಕ ಅತ್ಯಾಚಾರದ ವಿರುದ್ಧ ಬುಧವಾರವೂ ನಗರದಲ್ಲಿ ಪ್ರತಿಭಟನೆ ಮುಂದುವರಿದಿದೆ.

ವಿಶ್ವ ಹಿಂದೂ ಪರಿಷತ್ತಿನ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರಗಳು ನಡೆಯುತ್ತಿವೆ. ದೌರ್ಜನ್ಯಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಕೂಡಲೇ ಆರೋಪಿಗಳನ್ನು ಗಲ್ಲಿಗೇರಿಸಬೇಕು. ಪ್ರಕರಣದ ಶೀಘ್ರ ವಿಲೇವಾರಿಗಾಗಿ ತ್ವರಿತಗತಿಯ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಹೆಣ್ಣುಮಕ್ಕಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ಸಂಜೆ ಕೆಲಸ ಬಿಡುವಾಗ ತಡವಾಗುವಂತಹ ಸಂದರ್ಭದಲ್ಲಿ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದರ ಹೊಣೆಯನ್ನು ಆಯಾ ಸಂಸ್ಥೆಯೇ ಹೊರುವಂತೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು. ನಂತರ, ಇವರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಿ.ಬಿ.ಪ್ರದೀಶ್ ಕುಮಾರ್ ಇತರರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.