ADVERTISEMENT

ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 8:50 IST
Last Updated 29 ಡಿಸೆಂಬರ್ 2021, 8:50 IST
ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ   

ಮೈಸೂರು: ರಂಗಾಯಣದ ಗೇಟಿನ ಒಂದು ಬದಿಯಲ್ಲಿ ಕೋಮುವಾದಿಗಳಿಗೆ ಧಿಕ್ಕಾರ ಎಂಬ ಘೋಷಣೆಗಳು ಮೊಳಗಿದರೆ, ಮತ್ತೊಂದು ಬದಿಯಲ್ಲಿ ಡೋಂಗಿ ಪ್ರಗತಿಪರರಿಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಕಾರ್ಯಕರ್ತರು ಮೊಳಗಿಸಿದರು. ಇದರಿಂದ ಬುಧವಾರ ಕೆಲಕಾಲ ಉದ್ವಿಗ್ನ ಸ್ಥಿತಿ ಇಲ್ಲಿನ ರಂಗಾಯಣದಲ್ಲಿ ಉಂಟಾಗಿತ್ತು.

ರಂಗಾಯಣ ಉಳಿಸಿ ಹೋರಾಟ ಸಮಿತಿ ಮುಖಂಡರು ಕುಕ್ಕರಹಳ್ಳಿ ಕೆರೆಯಿಂದ ಮೆರವಣಿಗೆ ಬಂದು ರಂಗಾಯಣದ ಗೇಟಿನ ಮುಂದೆ ಕುಳಿತು, ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ವಜಾಕ್ಕೆ ಆಗ್ರಹಿಸಿದರು.

ಇದಕ್ಕೆ ಪ್ರತಿಯಾಗಿ ಮೈಸೂರು ರಕ್ಷಣಾ ವೇದಿಕೆ ಹಾಗೂ ಮತ್ತಿತ್ತರೆ ಸಂಘಟನೆಗಳ ಸದಸ್ಯರು ಅಡ್ಡಂಡ ಕಾರ್ಯ‍ಪ್ಪ ಅವರನ್ನು ಮುಂದುವರಿಸಬೇಕು. ಅವರ ಕರ್ತವ್ಯಕ್ಕೆ ಹಾಗೂ ರಂಗಾಯಣದ ಚಟುವಟಿಕೆಗಳಿಗೆ ಅಡ್ಡಿಪಡಿಸಬಾರದು ಎಂದು ಒತ್ತಾಯಿಸಿ ಗೇಟಿನ ಪಕ್ಕದಲ್ಲೆ ಧರಣಿ ಕುಳಿತರು.

ADVERTISEMENT

ಎರಡೂ ಕಡೆಯ ಘೋಷಣೆಗಳು ಹೆಚ್ಚಾಗುತ್ತಿದ್ದಂತೆ ಇಬ್ಬರ ಮಧ್ಯೆ ಬ್ಯಾರಿಕೇಡ್‌ಗಳನ್ನು ಪೊಲೀಸರು ಇರಿಸಿ, ಸ್ಥಳದಿಂದ ತೆರಳುವಂತೆ ಹಲವು ಬಾರಿ ಎಚ್ಚರಿಕೆ ನೀಡಿದರು. ಅಂತಿಮವಾಗಿ ಎಸಿಪಿ ಶಶಿಧರ್ ಬಂಧಿಸುವ ಎಚ್ಚರಿಕೆ ನೀಡಿ ಪೊಲೀಸ್ ವಾಹನವನ್ನು ಸ್ಥಳಕ್ಕೆ ಕರೆಸುತ್ತಿದ್ದಂತೆ ರಂಗಾಯಣ ಉಳಿಸಿ ಹೋರಾಟ ಸಮಿತಿಯ ಸದಸ್ಯರು ತಮ್ಮ ಪ್ರತಿಭಟನೆಯ ಅವಧಿ ಮುಗಿಯಿತೆಂದು ಹೊರಟರು.

‘ಮತ್ತೆ ಗುರುವಾರ ಇಲ್ಲಿ ಪ್ರತಿಭಟನೆ ನಡೆದರೆ, ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿ ಕಾರ್ಯಪ್ಪ ಅವರನ್ನು ಬೆಂಬಲಿಸಿ ಧರಣಿ ನಡೆಸಲಿದ್ದಾರೆ’ ಎಂದು ಕಾರ್ಯಪ್ಪ ಪರವಾಗಿ ಪ್ರತಿಭಟನೆ ಮಾಡುತ್ತಿದ್ದವರು ಹೇಳಿ ಸ್ಥಳದಿಂದ ನಿರ್ಗಮಿಸಿದರು.

ಜಿಲ್ಲಾಧಿಕಾರಿ ಕಚೇರಿ ಹಾಗೂ ಪುರಭವನದ ಮುಂದೆ ಪ್ರತಿಭಟನೆ ನಡೆಸಬಹುದು. ರಂಗಾಯಣದ ಮುಂದೆ ಯಾರೂ ಪ್ರತಿಭಟನೆ ನಡೆಸಬಾರದು ಎಂದು ಈಗಾಗಲೇ ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಅವರು ಸೂಚಿಸಿದ್ದಾರೆ. ಆದರೂ, ಪ್ರತಿಭಟನೆಗಳು ಮುಂದುವರಿದಿವೆ.

ರಂಗಾಯಣ ಉಳಿಸಿ ಹೋರಾಟ ಸಮಿತಿಯ ಪರವಾಗಿ ಹೋರಾಟಗಾರರಾದ ಪ.ಮಲ್ಲೇಶ್, ಬಿ.ಪಿ.ಮಹೇಶ್‌ಚಂದ್ರಗುರು, ಅರವಿಂದ ಮಾಲಗತ್ತಿ ಇದ್ದರು.

ಅಡ್ಡಂಡ ಕಾರ್ಯಪ್ಪ ಪರ ಪಾಲಿಕೆ ಸದಸ್ಯ ಸುಬ್ಬಯ್ಯ, ಮೈ.ಕಾ.ಪ್ರೇಮಕುಮಾರ್, ವಿಕ್ರಂ ಅಯ್ಯಂಗಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.