ADVERTISEMENT

ಹುಣಸೂರು | ಹಕ್ಕಿಪಿಕ್ಕಿ ಸಮುದಾಯಕ್ಕೆ ಮೂಲಸೌಲಭ್ಯ ಕಲ್ಪಿಸಿ– ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 6:14 IST
Last Updated 27 ಫೆಬ್ರುವರಿ 2026, 6:14 IST
ಹುಣಸೂರು ತಾಲ್ಲೂಕಿನ ಹಕ್ಕಿಪಿಕ್ಕಿ ಸಮುದಾಯದವರು ಬುಧವಾರ ಮೂಲಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು
ಹುಣಸೂರು ತಾಲ್ಲೂಕಿನ ಹಕ್ಕಿಪಿಕ್ಕಿ ಸಮುದಾಯದವರು ಬುಧವಾರ ಮೂಲಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು   

ಹುಣಸೂರು: ‘ಶಂಕರಪುರ ಗ್ರಾಮದಲ್ಲಿ ಮೂಲಸೌಲಭ್ಯ ಇಲ್ಲದೆ ಜೀವನ ಅತಂತ್ರವಾಗಿದ್ದು, ಸರ್ಕಾರದ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಯೋಜನೆ ರೂಪಿಸಬೇಕು’ ಎಂದು ಆಗ್ರಹಿಸಿ ಹಕ್ಕಿಪಿಕ್ಕಿ ಸಮುದಾಯದವರು ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.

‘ತಾಲ್ಲೂಕಿನ ಪಕ್ಷಿರಾಜಪುರ, ಶಾಂತಿಪುರ ಗ್ರಾಮದಲ್ಲಿ ನೆಲೆ ಕಟ್ಟಿಕೊಂಡಿದ್ದು, ಸಾಂಪ್ರದಾಯಕ ಗಿಡಮೂಲಿಕೆ ಔಷಧಿ ಮತ್ತು ಕೂದಲು ಎಣ್ಣೆ ಸಿದ್ದಪಡಿಸಿ ವ್ಯಾಪಾರ ವಹಿವಾಟು ನಡೆಸಿ ಬದುಕು ನಡೆಸುತ್ತಿದ್ದು, ಇತ್ತೀಚಿನ ಕಾನೂನುಗಳಿಂದಾಗಿ ಅರಣ್ಯದಲ್ಲಿ ಲಭ್ಯವಿರುವ ಗಿಡಮೂಲಿಕೆ ಸಿಗದೆ ವ್ಯವಹಾರ ಇಲ್ಲವಾಗಿದೆ. ಶಾಂತಿಪುರ ಗ್ರಾಮದಲ್ಲಿ ವಾಸಿಸುತ್ತಿರುವ 65 ಕುಟುಂಬದವರಲ್ಲಿ 13 ಕುಟುಂಬಕ್ಕೆ ತಲಾ 1 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಉಳಿದ ಕುಟುಂಬದವರಿಗೆ ಭೂಮಿ ಇಲ್ಲ’ ಎಂದು ಕರ್ನಾಟಕ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣ ಸಮಿತಿ ರಾಜ್ಯಾಧ್ಯಕ್ಷ ಜಗ್ಗು ಹೇಳಿದರು.

‘ಸಮುದಾಯದವರಿಗೆ ಪಡಿತರ ಚೀಟಿ, ಜಾತಿ ಪ್ರಮಾಣಪತ್ರ, ಆದಾಯ ಹಾಗೂ ಚುನಾವಣಾ ಗುರುತಿನ ಚೀಟಿ ಇಲ್ಲವಾಗಿದ್ದು, ಸರ್ಕಾರದ ಯಾವುದೇ ಸವಲತ್ತು ಪಡೆಯಲು ಅನರ್ಹರಾಗಿದ್ದೇವೆ. ಸರ್ವೆ ನಂ. 12ರಲ್ಲಿ ಸಮಾಜದ 20 ಕುಟುಂಬಗಳಿಗೆ ಕೃಷಿಭೂಮಿ ಮಂಜೂರಾಗಿದ್ದು, ಉಳಿದ 20 ಕುಟುಂಬಗಳಿಗೆ ನೀಡಿದ ಭೂಮಿಯು ಆನೆ ಕಂದಕಕ್ಕೆ ಹೊಂದಿಕೊಂಡಿದ್ದು, ಅರಣ್ಯ ಇಲಾಖೆಯವರು ಬೇಸಾಯ ಮಾಡಲು ಆಕ್ಷೇಪಿಸುತ್ತಿದ್ದು, ಪರ್ಯಾಯ ಭೂಮಿ ನೀಡಬೇಕು’ ಎಂದರು.

ADVERTISEMENT

‘2ನೇ ಪಕ್ಷಿರಾಜಪುರ ಗ್ರಾಮದಲ್ಲಿ 700 ಕುಟುಂಬಗಳು ವಾಸಿಸುತ್ತಿದ್ದು, 100 ಕುಟುಂಬಗಳಿಗೆ ವಸತಿ ಇಲ್ಲದೆ ಜೋಪಡಿಯಲ್ಲಿ ವಾಸಿಸುತ್ತಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರು, ಸೌರಶಕ್ತಿ ಬೀದಿ ದೀಪ ಸೇರಿದಂತೆ ಮೂಲಸೌಲಭ್ಯ ಇಲ್ಲವಾಗಿದೆ. ಈ ಎಲ್ಲವನ್ನು ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ನಂಜುಂಡಸ್ವಾಮಿ, ಕುಮುದ, ರಾಮ್‌ ಬಾಬು, ಅನಿಲ್‌ ಕುಮಾರ್‌, ಹೀವನ್‌ ರಾಜ್‌, ದಿವಾಕರ್‌, ಗುರುವಯ್ಯ, ದಿಲೀಪ್‌, ವೆಂಕಟೇಶ್‌, ರಾಜಪುತ್ರ, ಶ್ಯಾಮಿ, ಸೋನಿ, ಸುರೇಂದ್ರ, ನೀಮಾ ಶ್ರೀನಿವಾಸ್‌, ಮೀನು, ಶ್ರೀಧರ್‌, ಶೀನುಬಾಬು, ಸುಭಾಷ್‌, ಧರಣಿಕುಮಾರ್‌, ಗೋಪಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.