ADVERTISEMENT

ಸಚಿವ, ಶಾಸಕರ ಕಾರಿಗೆ ನಿವೇಶನ ಫಲಾನುಭವಿಗಳ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 10:29 IST
Last Updated 24 ಜನವರಿ 2022, 10:29 IST
ವಸತಿ ಸಚಿವ ವಿ. ಸೋಮಣ್ಣ ಹಾಗೂ  ಶಾಸಕ ಎಲ್‌. ನಾಗೇಂದ್ರ ಅವರಿಗೆ ಮುತ್ತಿಗೆ
ವಸತಿ ಸಚಿವ ವಿ. ಸೋಮಣ್ಣ ಹಾಗೂ  ಶಾಸಕ ಎಲ್‌. ನಾಗೇಂದ್ರ ಅವರಿಗೆ ಮುತ್ತಿಗೆ   

ಮೈಸೂರು: ಮೈಸೂರು ರಿಂಗ್‌ ರಸ್ತೆ ಬಳಿ ಇರುವ ಅಯ್ಯಜಯ್ಯನಹುಂಡಿ ಮತ್ತು ಕೇರ್ಗಳ್ಳಿಯಲ್ಲಿ 2002ರಲ್ಲಿ ನಿವೇಶನ ಮಂಜೂರಾಗಿದ್ದು, ಇನ್ನೂ ನೋಂದಣಿ ಮಾಡಿಕೊಡದ ಸಂಬಂಧ ಫಲಾನುಭವಿಗಳು ವಸತಿ ಸಚಿವ ವಿ. ಸೋಮಣ್ಣ ಹಾಗೂ ಶಾಸಕ ಎಲ್‌. ನಾಗೇಂದ್ರ ಅವರಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು.

ಸೋಮವಾರ ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ವಸತಿ ಇಲಾಖೆ ಪರಿಶೀಲನೆ ಸಭೆ ಮುಗಿಸಿ ಹೊರ ಬಂದ ಸಚಿವರ ಕಾರು ಸುತ್ತುವರಿದು ಆಕ್ರೋಶ ವ್ಯಕ್ತಪಡಿಸಿದರು.

ಉದ್ದೇಶಿತ ಜಾಗದ ಸಂಬಂಧ ಕಾನೂನು ತೊಡಕು ಉಂಟಾಗಿದ್ದು, ಪರ್ಯಾಯ ಜಾಗದ ವ್ಯವಸ್ಥೆ ಮಾಡಿಕೊಡುವುದಾಗಿ ಸಚಿವರು ಭರವಸೆ ನೀಡಿದರೂ ಫಲಾನುಭವಿಗಳ ಆಕ್ರೋಶ ನಿಲ್ಲಲಿಲ್ಲ.

ADVERTISEMENT

ರಾಜೀವ್‌ ಗಾಂಧಿ ವಸತಿ ಯೋಜನೆಯಡಿ ನಿವೇಶನಕ್ಕಾಗಿ 19 ವರ್ಷಗಳ ಹಿಂದೆ ಅರ್ಜಿ ಹಾಕಿದ್ದರು. ಕೇರ್ಗಳ್ಳಿ ಸರ್ವೆ ನಂ.5 ಹಾಗೂ ಅಯ್ಯಜಯ್ಯನಹುಂಡಿ ಸರ್ವೆ ನಂ.17ರಲ್ಲಿ 475 ಮಂದಿಗೆ 20x30 ಅಳತೆಯ ನಿವೇಶನ ಮಂಜೂರಾಗಿತ್ತು. 475ರ ಪೈಕಿ ಇಬ್ಬರಿಗೆ ನೋಂದಣಿ ಮಾಡಿಕೊಡಲಾಯಿತು. ಉಳಿದ 473 ಫಲಾನುಭವಿಗಳಿಗೆ ನೋಂದಣಿ ಮಾಡುವ ಹೊತ್ತಿಗೆ ನಿವೇಶನ ಸಿಗದ ಕೆಲವರು ನ್ಯಾಯಾಲಯ ಮೊರೆ ಹೋದರು. ಆದರೆ, ಜಿಲ್ಲಾಡಳಿವು ಉದ್ದೇಶಿತ ನಿವೇಶನವಿರುವುದು ಕೆರೆ ಸೀಮಿತ ಪ್ರದೇಶವೆಂದು ಘೋಷಿಸಿದೆ.

‘ಹಣ ಪಾವತಿಸಿದ್ದು, ಇದುವರೆಗೆ ನೋಂದಣಿ ಆಗಿಲ್ಲ. ಬೇರೆ ಕಡೆಯೂ ಜಾಗ ಕಲ್ಪಿಸಿಲ್ಲ. ಬಾಡಿಗೆ ಮನೆಯಲ್ಲಿ ಜೀವನ ಮಾಡುತ್ತಾ, ನಿವೇಶನದ ನಿರೀಕ್ಷೆಯಲ್ಲೇ ಹಲವು ಫಲಾನುಭವಿಗಳು ಮರಣ ಹೊಂದಿದ್ದು, ಇನ್ನೂ ಕೆಲವರು ಕಾಯಿಲೆಯಿಂದ ನರಳುತ್ತಿದ್ದಾರೆ. ಅವರ ಕುಟುಂಬಗಳು ಚಿಂತಾಜನಕ ಸ್ಥಿತಿಯಲ್ಲಿವೆ. ನ್ಯಾಯಾಲಯದ ತೀರ್ಪು ಕೂಡ ಫಲಾನುಭವಿಗಳ ಪರವಾಗಿಯೇ ಇದೆ. ಆದ್ದರಿಂದ ನಮಗೆ ಹಕ್ಕುಪತ್ರ ಕೊಡಿಸಿ’ ಎಂದು ನೊಂದ ಫಲಾನುಭವಿಗಳು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.