ADVERTISEMENT

ಹುಣಸೂರು: 18 ಸಾವಿರ ಮಕ್ಕಳಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 13:34 IST
Last Updated 3 ಮಾರ್ಚ್ 2024, 13:34 IST
ಹುಣಸೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಂಜುನಾಥ್ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು
ಹುಣಸೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಂಜುನಾಥ್ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು   

ಹುಣಸೂರು: ‘ಪಲ್ಸ್ ಪೋಲಿಯೊ ಲಸಿಕೆಯನ್ನು ಕಡ್ಡಾಯವಾಗಿ 5 ವರ್ಷದೊಳಗಿನ ಮಕ್ಕಳಿಗೆ ನೀಡುವುದರಿಂದ ಮಕ್ಕಳನ್ನು ಪೋಲಿಯೊಗೆ ತುತ್ತಾಗದಂತೆ ರಕ್ಷಿಸಬಹುದು’ ಎಂದು ತಹಶೀಲ್ದಾರ್ ಮಂಜುನಾಥ್ ಹೇಳಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನಕ್ಕೆ ಲಸಿಕೆ ಹಾಕಿ ಚಾಲನೆ ನೀಡಿ ಅವರು ಮಾತನಾಡಿದರು.

‘ವಿಶ್ವಸಂಸ್ಥೆ ಮತ್ತು ರೋಟರಿ ಅಂತರರಾಷ್ಟ್ರೀಯ ಸಂಸ್ಥೆ ಸಹಕಾರದೊಂದಿಗೆ ಆರಂಭವಾದ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನ ಇಂದು ವಿಶ್ವದ ಅನೇಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ವರವಾಗಿದೆ. ಭಾರತ ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದು, ಇದನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಹೆಗಲಿಗಿದೆ’ ಎಂದರು.

ADVERTISEMENT

‘ಹುಣಸೂರು ತಾಲ್ಲೂಕಿನಲ್ಲಿ 18,288 ಮಕ್ಕಳಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ಪಟ್ಟಿ ಸಿದ್ಧಪಡಿಸಿದ್ದು, 208 ಬೂತ್ ಸ್ಥಾಪಿಸಿದೆ. ಇದಲ್ಲದೆ ಬಸ್ ನಿಲ್ದಾಣದಲ್ಲಿಯೂ ಬೂತ್ ತೆರೆದು ಪ್ರಯಾಣಿಸುವ ಮಕ್ಕಳಿಗೆ ಲಸಿಕೆ ಹಾಕಿಸಲು ಸಹಕಾರಿಯಾಗಿದೆ. ಕ್ಷೇತ್ರದಲ್ಲಿ ಲಸಿಕೆ ಅಭಿಯಾನ ನಡೆಸಲು 800 ಸಿಬ್ಬಂದಿ ಏಕಕಾಲಕ್ಕೆ ತೊಡಗಿದ್ದಾರೆ’ ಎಂದರು.

ಲಸಿಕೆ ಅಭಿಯಾನದಲ್ಲಿ ನೋಡಲ್ ಅಧಿಕಾರಿ ಡಾ.ಬೃಂದ, ಡಾ.ಮಹದೇವಪ್ಪ, ಡಾ.ಕೀರ್ತಿಕುಮಾರ್, ನಗರಸಭೆ ಪೌರಾಯುಕ್ತೆ ಶರ್ಮಿಳಾ, ರಾಜೇಶ್ವರಿ, ವಿಶ್ವನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.