ADVERTISEMENT

‘ಸೇವ್ ಮೈಸೂರು ಸಿಲ್ಕ್‌’ ಹೋರಾಟ: ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 12:44 IST
Last Updated 27 ಫೆಬ್ರುವರಿ 2026, 12:44 IST
<div class="paragraphs"><p>ಆರ್. ಅಶೋಕ</p></div>

ಆರ್. ಅಶೋಕ

   

ತಿ.ನರಸೀಪುರ (ಮೈಸೂರು ಜಿಲ್ಲೆ): ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕಾಗಿ ಇಲ್ಲಿನ ಕೆಎಸ್‌ಐಸಿ ಕಾರ್ಖಾನೆಯ ಜಾಗ ನೀಡಬಾರದೆಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಶುಕ್ರವಾರ ಪಾಲ್ಗೊಂಡರು.

ಈ ವೇಳೆ ಮಾತನಾಡಿದ ಅವರು, ‘2ಸಾವಿರ ಮಂದಿಗೆ ಉದ್ಯೋಗ ನೀಡಿರುವ ಸಂಸ್ಥೆ ಇದು. ಬಹಳ ಬೇಡಿಕೆ ಇರುವುದೇ ಹೊರತು, ಮುಚ್ಚಿ ಹೋಗುವಂಥದ್ದಲ್ಲ. ಕ್ರೀಡಾಂಗಣವನ್ನು ಈ ಜಾಗದಲ್ಲೇ ಮಾಡಬೇಕು ಎಂದೇನಿದೆ?’ ಎಂದು ಕೇಳಿದರು.

ADVERTISEMENT

‘ಈ ಘಟಕದಲ್ಲಿ ಬಾಯ್ಲರ್‌ಗಳಿವೆ. ರೇಷ್ಮೆ ಹುಳವನ್ನೆಲ್ಲಾ ಬೇಯಿಸಿದ ನಂತರ ವಾಸನೆ ಬರುತ್ತದೆ. ಇದರ ತಡೆಗೆಂದೇ ಸುತ್ತಲೂ ಗಿಡ–ಮರಗಳನ್ನು ಬೆಳೆಸಿದ್ದಾರೆ. ಕ್ರೀಡಾಂಗಣ ಮಾಡಲು 430 ಮರಗಳನ್ನು ಕತ್ತರಿಸಬೇಕಾಗುತ್ತದೆ. ಬಾಯ್ಲರ್‌ ಪಕ್ಕದಲ್ಲಿ ಮೈದಾನ ಮಾಡುವುದು ಎಷ್ಟು ಸರಿ? ಅದಕ್ಕೆ ಅನುಮತಿ ಕೊಟ್ಟವರಾರು? ಮುಂದೆ ಏನಾದರೂ ಅನಾಹುತವಾದರೆ ಹೊಣೆ ಯಾರು’ ಎಂದು ಪ್ರಶ್ನಿಸಿದರು.

‘ಆ ಕಾಲದಲ್ಲೆ ಗುಣಮಟ್ಟದ ನೀರಿಗಾಗಿ ಪೈಪ್‌ಲೈನ್ ಮಾಡಿದ್ದಾರೆ. ಅದೆಲ್ಲವೂ ಹಾಳಾಗುತ್ತದೆ. ಘಟಕವನ್ನೇ ನಂಬಿರುವ ಕಾರ್ಮಿಕರಿದ್ದಾರೆ. ಯಾರೋ ಒಬ್ಬ ಕಾಂಗ್ರೆಸ್ ಗುತ್ತಿಗೆದಾರನಿಗಾಗಿ, ₹ 12 ಕೋಟಿಗಾಗಿ ತರಾತುರಿಯಲ್ಲಿ ಅಲ್ಲೇ ಮೈದಾನಕ್ಕೆ ಹಟ ಹಿಡಿದಿದ್ದಾರೆ. ಬೇಗ ನಡೆದರೆ ಶೇ 60ರಷ್ಟು ಕಮಿಷನ್ ತಾನೆ? ಅಲ್ಲೇ ಡ್ರಾ ಅಲ್ಲೇ ಬಹುಮಾನಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ₹ 6ಕೋಟಿಯಿಂದ ₹ 7 ಕೋಟಿ ದುಡ್ಡು ಬರುತ್ತದೆ. ಹೀಗಾಗಿ ಒತ್ತಡ ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕ್ರೀಡಾಂಗಣಕ್ಕೆ ನಮ್ಮ ಬೆಂಬಲವಿದೆ. ಅದಕ್ಕೆ ಪ್ರಶಸ್ತವಾದ ಜಾಗ ಕೊಡಿ. ವಾಹನ ನಿಲುಗಡೆ ಜಾಗ ಸೇರಿದಂತೆ 10ರಿಂದ 12 ಎಕರೆ ಜಾಗ ಬೇಕು’ ಎಂದರು.

‘ಕಾಂಗ್ರೆಸ್‌ನ ದೊಡ್ಡ ನಾಯಕರೊಬ್ಬರದ್ದು ನೂಲು ತಯಾರಿಕಾ ಮಿಲ್‌ ಇದೆಯಂತೆ. ಕೆಎಸ್‌ಐಸಿ ಘಟಕವನ್ನು ಮುಳುಗಿಸಿದರೆ ಸುಲಭವಾಗಿ ರೇಷ್ಮೆ ನೂಲು ಪೂರೈಸಬಹುದು ಎಂಬುದು ಆ ನಾಯಕರ ಕುತಂತ್ರ’ ಎಂದು ಆರೋಪಿಸಿದರು. ‘ಆದರೆ, ನಾವು ಮೈಸೂರು ರೇಷ್ಮೆ ಉಳಿಸಿ ಹೋರಾಟ ನಡೆಸುತ್ತೇವೆ’ ಎಂದರು.

‘ಕೆಎಸ್‌ಐಸಿಗೆ ಈ ವರ್ಷ ₹ 96 ಕೋಟಿ ಲಾಭ ಬಂದಿದೆ. ಬೇಡಿಕೆಗೆ ಅನುಗುಣವಾಗಿ ಸೀರೆ ಉತ್ಪಾದನೆ ಆಗುತ್ತಿಲ್ಲ. ಚನ್ನಪಟ್ಟಣ ಘಟಕದಲ್ಲಿ ತಿಂಗಳಿಗೆ 1,200 ಸೀರೆ ಉತ್ಪಾದನೆ ಆಗುತ್ತಿದೆ. ಆದರೆ ಬೇಡಿಕೆ ಇರುವುದು 10ಸಾವಿರ ಸೀರೆಗೆ. ಹೀಗಿರುವಾಗ, ಘಟಕಕ್ಕೆ ಧಕ್ಕೆ ತರುವುದು ಎಷ್ಟು ಸರಿ?’ ಎಂದು ಕೇಳಿದರು.

‘ಮತಾಂಧರು ಹಸುವಿವ ಕೆಚ್ಚಲು ಕೊಯ್ಯುವಂತೆ ಕೆಎಸ್‌ಐಸಿ ಕಾರ್ಖಾನೆಯನ್ನು ಮುಚ್ಚಲು ಸರ್ಕಾರ ಸಿದ್ಧವಾಗಿದೆ’ ಎಂದು ಆರೋಪಿಸಿದರು.

ಮಾಜಿ ಸಂಸದ ಪ್ರತಾಪ ಸಿಂಹ, ಮುಖಂಡರಾದ ಎನ್.ಮಹೇಶ್, ಸಿ.ರಮೇಶ್, ಎಸ್. ಬಾಲರಾಜು ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.