ADVERTISEMENT

ದಸರಾ ಸಾಂಸ್ಕೃತಿಕ ಕಾರ್ಯಕ್ರಮ: ರಾಹುಲ್ ವೆಲ್ಲಾಲ್ ಗಾಯನ ಮೋಡಿ

ಗೀತಾ ರಮಾನಂದ್‌ ವೀಣಾವಾದನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 2:05 IST
Last Updated 20 ಅಕ್ಟೋಬರ್ 2020, 2:05 IST
ಅರಮನೆ ಅವರಣದಲ್ಲಿ ನಡೆಯುತ್ತಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೋಮವಾರ ಗೀತಾ ರಮಾನಂದ್ ಮತ್ತು ತಂಡದವರು ಪಂಚವೀಣೆ ನುಡಿಸಿದರು (ಎಡಚಿತ್ರ). ರಾಹುಲ್ ವೆಲ್ಲಾಲ್ ಕಾರ್ಯಕ್ರಮ ನೀಡಿದರು
ಅರಮನೆ ಅವರಣದಲ್ಲಿ ನಡೆಯುತ್ತಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೋಮವಾರ ಗೀತಾ ರಮಾನಂದ್ ಮತ್ತು ತಂಡದವರು ಪಂಚವೀಣೆ ನುಡಿಸಿದರು (ಎಡಚಿತ್ರ). ರಾಹುಲ್ ವೆಲ್ಲಾಲ್ ಕಾರ್ಯಕ್ರಮ ನೀಡಿದರು   

ಮೈಸೂರು: ಬಾಲಪ್ರತಿಭೆ ರಾಹುಲ್ ವೆಲ್ಲಾಲ್ ಅವರ ಸುಮಧುರ ಗಾಯನವು ಸಂಗೀತಪ್ರಿಯರ ಮನಗೆದ್ದಿತು.

ನಾಡಹಬ್ಬ ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿ ರುವ ಸಾಂಸ್ಕೃತಿಕ ಕಾರ್ಯಕ್ರಮದ3ನೇ ದಿನವಾದ ಸೋಮವಾರ ರಾಹುಲ್ ತಮ್ಮ ಮಧುರ ಕಂಠದ ಗಾಯನದಿಂದ ಎಲ್ಲರನ್ನು ಮೋಡಿ ಮಾಡಿದರು.

ನವರಾತ್ರಿಯ ವಿದ್ಯಾದೇವತೆ ಸರಸ್ವತಿಗೆ ನಮಿಸುತ್ತಾ ಸರಸ್ವತಿ ನಮೋ ಸ್ತುತೆ ಎಂಬ ಜಿ.ಎನ್.ಬಾಲಸುಬ್ರಹ್ಮಣ್ಯಂ ಅವರ ಪ್ರಸಿದ್ಧ ಕೃತಿಯಿಂದ ತಮ್ಮ ಗಾಯನ ಪ್ರಾರಂಭಿಸಿದರು.

ADVERTISEMENT

ಅನ್ನಪೂರ್ಣೆ ವಿಶಾಲಾಕ್ಷಿ ಎಂಬ ಸಾಮಾರಾಗದ ಕೃತಿಯನ್ನು ಮನೋ ಜ್ಞವಾಗಿ ಹಾಡಿದರು. ಆ ಬಳಿಕ ಜಯ ಚಾಮರಾಜೇಂದ್ರ ಒಡೆಯರ್ ಅವರ ಶ್ರೀ ಚಾಮುಂಡೇಶ್ವರಿ ಪಾಲಯಮಾಂ ಎಂಬ ಜನಪ್ರಿಯ ಕೃತಿಯನ್ನು ಪ್ರಸ್ತುತ ಪಡಿಸಿದರು. ನಂತರ ಕೆಲವು ದಾಸರ ಕೀರ್ತನೆಗಳನ್ನು ಇಂಪಾಗಿ ಹಾಡಿದರು.

ಸಹಕಲಾವಿದರಾಗಿ ಪಿಟೀಲು ವಿದ್ವಾಂಸರಾದ ವಿದ್ವಾನ್ ತುಮಕೂರು ಯಶಸ್ವಿ, ಮೃದಂಗದಲ್ಲಿ ವಿದ್ವಾನ್ ಡಾ.ಡಿ.ವಿ‌.ಪ್ರಹ್ಲಾದರಾವ್ ಹಾಗೂ ಮೊರ್ಸಿಂಗ್‌ನಲ್ಲಿ ವಿದ್ವಾನ್ ವಿಕ್ರಮ್ ಭಾರದ್ವಾಜ್ ಸಾಥ್‌ ನೀಡಿದರು.

ದಿನದ 2ನೇ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದುಷಿ ಗೀತಾ ರಮಾನಂದ್ ಮತ್ತು ತಂಡದವರು ಪಂಚವೀಣೆ ನುಡಿಸಿದರು. ಸತತ ಒಂದು ಗಂಟೆ ನಡೆದ ಪಂಚವೀಣಾ ವಾದನವು ಕೇಳುಗರು ತಲೆದೂಗುವಂತೆ ಮಾಡಿತು.

ಕಾಯೋ ಶ್ರೀಗೌರಿ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಿದ ಅವರು ನಂತರ ವಿವಿಧ ರಾಗಗಳನ್ನು ನುಡಿಸಿದರು. ಸಹವಾದಕರು ಹಾಗೂ ಇತರ ಕಲಾವಿದರು ವಿಶಿಷ್ಟವಾಗಿ ಪಂಚವೀಣೆ ನುಡಿಸುವ ಮೂಲಕ ವೀಣೆಪ್ರಿಯರ ಮನಗೆದ್ದರು.

ಸೋಮವಾರ ಸಂಜೆ 7 ರಿಂದ 8ರ ವರೆಗೆ ಅಂಬಯ್ಯ ನುಲಿ ತಂಡದವರಿಂದ ವಚನಗಾಯನ ನಡೆಯಲಿದೆ. ರಾತ್ರಿ 8 ರಿಂದ 9ರ ವರೆಗೆ ಪುತ್ತೂರು ನರಸಿಂಹನಾಯಕ ಮತ್ತು ತಂಡದಿಂದ ದಾಸವಾಣಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.