ADVERTISEMENT

ಮರಾಠ ಅಭಿವೃದ್ಧಿ ನಿಗಮ ರದ್ದತಿಗೆ ಆಗ್ರಹಿಸಿ ಜ.9ಕ್ಕೆ ರೈಲು ತಡೆ ಚಳವಳಿ: ವಾಟಾಳ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 10:55 IST
Last Updated 22 ಡಿಸೆಂಬರ್ 2020, 10:55 IST
ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್
ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್    

ಮೈಸೂರು: ಮರಾಠ ಅಭಿವೃದ್ಧಿ ನಿಗಮ ರದ್ದುಗೊಳಿಸಲು ಆಗ್ರಹಿಸಿ ಜ. 9ರಂದು ರಾಜ್ಯದಲ್ಲಿ ರೈಲು ತಡೆ ಹಾಗೂ ಜೈಲ್ ಭರೊ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ತಿಳಿಸಿದರು.

ಸುಮಾರು ಒಂದು ಸಾವಿರ ಕಡೆ ರೈಲು ಹಳಿಗಳ ಮೇಲೆ ಕುಳಿತು ಕನ್ನಡಪರ ಚಳವಳಿಗಾರರು ರೈಲು ತಡೆಯಲಿದ್ದಾರೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಅಂದು ರೈಲಿನಲ್ಲಿ ಸಂಚರಿಸಬಾರದು ಎಂದು ಅವರು ಇಲ್ಲಿ ಮಂಗಳವಾರ ಒತ್ತಾಯಿಸಿದರು.

ಈ ಸಮಯದಲ್ಲಿ ಚಳವಳಿಗಾರರನ್ನು ಪೊಲೀಸರು ಬಂಧಿಸುತ್ತಾರೆ. ಕಾರ್ಯಕರ್ತರು ಇದಕ್ಕೆ ಅಂಜುವುದಿಲ್ಲ. ಜೈಲ್ ಭರೊ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಲಿದ್ದಾರೆ ಎಂದರು.

ADVERTISEMENT

ಖಾಸಗಿ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಕರಣಕ್ಕೆ ಆಗ್ರಹ

ತರಗತಿ ನಡೆಸದೇ ಇದ್ದರೂ ಶುಲ್ಕ ವಸೂಲು ಮಾಡುವುದು ಹಾಗೂ ಶುಲ್ಕ ಪಾವತಿಸದೇ ಹೋದರೆ ಆನ್‌ಲೈನ್‌ ಕ್ಲಾಸ್‌ನಿಂದ ತೆಗೆಯುವುದು ದರೋಡೆ ಮಾಡುವುದಕ್ಕೆ ಸಮ ಎಂದು ಹರಿಹಾಯ್ದ ಅವರು, ಸರ್ಕಾರ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸುವುದೊಂದೇ ಸದ್ಯದ ಬಿಕ್ಕಟ್ಟಿಗೆ ಪರಿಹಾರ ಎಂದು ಹೇಳಿದರು.

ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರಸ್ವಾಮೀಜಿ ಅವರಿಗೆ ಗಣರಾಜ್ಯೋತ್ಸವದ ಒಳಗೆ ಭಾರತ ರತ್ನ ಪ್ರಶಸ್ತಿ ನೀಡದೇ ಹೋದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದರು ರಾಜೀನಾಮೆ ನೀಡಬೇಕು. ಮುಂಬರುವ ದಿನಗಳಲ್ಲಿ ಮಠಾಧೀಶರನ್ನೆಲ್ಲ ಒಟ್ಟಾಗಿ ಸೇರಿಸಿ ದೊಡ್ಡಮಟ್ಟದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.