ADVERTISEMENT

ನಿಲ್ಲದ ಮಳೆಗೆ ಜನಜೀವನ ಹೈರಾಣು

ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತ, ದ್ವೀಪಗಳಾಗುತ್ತಿರುವ ಹಳ್ಳಿಗಳು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 19:41 IST
Last Updated 9 ಆಗಸ್ಟ್ 2019, 19:41 IST
ವರುಣಾ ಸಮೀಪದ ಸುತ್ತೂರು ಕಬಿನಿ ನದಿ ಸೇತುವೆ ಶುಕ್ರವಾರ ಸಂಪೂರ್ಣವಾಗಿ ಮುಳುಗಡೆಯಾಯಿತು
ವರುಣಾ ಸಮೀಪದ ಸುತ್ತೂರು ಕಬಿನಿ ನದಿ ಸೇತುವೆ ಶುಕ್ರವಾರ ಸಂಪೂರ್ಣವಾಗಿ ಮುಳುಗಡೆಯಾಯಿತು   

ಮೈಸೂರು: ಜಿಲ್ಲೆಯಲ್ಲಿ ಶುಕ್ರವಾರವೂ ದಿನವಿಡೀ ಮಳೆ ಸುರಿದಿದ್ದರಿಂದ ಸಾರ್ವಜನಿಕರು ಅಕ್ಷರಶಃ ಹೈರಾಣಾದರು. ಕಬಿನಿಗೆ 1.20 ಲಕ್ಷ ಕ್ಯುಸೆಕ್‌ ನೀರನ್ನು ಹೊರಬಿಡುತ್ತಿರುವುದರಿಂದ ನಂಜನಗೂಡು, ಹುಣಸೂರು, ಎಚ್.ಡಿ.ಕೋಟೆ ತಾಲ್ಲೂಕಿನ ಹಲವು ಭಾಗಗಳು ಜಲಾವೃತಗೊಂಡಿವೆ. ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.

ಈಗಾಗಲೇ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಹಾಡಿಯಲ್ಲಿ ಗೋಡೆ ಕುಸಿದು ಗಣೇಶ್ (36) ಎಂಬುವವರು ಸ್ಥಳದಲ್ಲೇ ಮೃತಪಟ್ಟಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಸುತ್ತೂರು ಸೇತುವೆ ಮುಳುಗಡೆ

ADVERTISEMENT

ವರುಣಾ: ಇಲ್ಲಿಗೆ ಸಮೀಪದ ಸುತ್ತೂರು ಸೇತುವೆ ಮುಳುಗಡೆಯಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ತಾಯೂರು, ನಂಜನಗೂಡು ಇಲ್ಲವೇ ತಿ.ನರಸೀಪುರದ ಮೂಲಕ ಪರ್ಯಾಯ ಮಾರ್ಗದಲ್ಲಿ ತೆರಳಬೇಕಿದೆ. ಪ್ರವಾಹದಿಂದ ಬಿಳುಗಲಿ ಗ್ರಾಮದಿಂದ ಜಿ.ಮರಳ್ಳಿ ರಸ್ತೆ ಕೂಡ ಬಂದಾಗಿದ್ದು ಗೆಜ್ಜನಹಳ್ಳಿ ಮೂಲಕ ಬರುವ ಸ್ಥಿತಿ ನಿರ್ಮಾಣವಾಗಿದೆ. ಬಿಳುಗಲಿ ಗ್ರಾಮದ ಲಕ್ಷ್ಮಮ್ಮ ವಾಸದ ಮನೆ ಗುರುವಾರ ರಾತ್ರಿ ಕುಸಿದು ಬಿದ್ದಿದೆ.

ಹುಣಸೂರು ವರದಿ

ತಾಲ್ಲೂಕಿನಲ್ಲಿ ಲಕ್ಷ್ಮಣತೀರ್ಥ ನದಿಯಲ್ಲಿ ಉಂಟಾದ ಪ್ರವಾಹದಿಂದ 10 ಗ್ರಾಮಗಳ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಹನಗೋಡು ಹೋಬಳಿ ಬಹುತೇಕ ನೀರಿನಲ್ಲಿ ಮುಳುಗಡೆಯಾಗಿದ್ದು, ಕಿರಂಗೂರು, ಹನಗೋಡು, ಬಿಲ್ಲೇನಹೊಸಹಳ್ಳಿ, ಕೋಣನಹೊಸಹಳ್ಳಿ ಶಿಂಡೇನಹಳ್ಳಿ ಗ್ರಾಮಗಳಿಂದ 56 ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಇದೀಗ ಕೋಣನಹೊಸಹಳ್ಳಿ, ನೇಗತ್ತೂರು, ಬಲ್ಲೇನಹೊಸಹಳ್ಳಿ, ಅಬ್ಬೂರು ಸಂಪೂರ್ಣ ಜಲಾವೃತ್ತಗೊಂಡಿದೆ .

ಹುಣಸೂರು– ಹನಗೋಡು ರಸ್ತೆ ಸಂಚಾರ ಶುಕ್ರವಾರವೂ ಬಂದ್ ಆಗಿದೆ. ಪಟ್ಟಣದ ಶಾಸ್ತ್ರಿ ಸ್ಕೂಲ್‌ ಹಾಗೂ ನೆರೆಯ ಬಡಾವಣೆಯಲ್ಲಿ ನೀರು ಹರಿದು ಕೆರೆಯಾಗಿದ್ದು, ಬಡಾವಣೆಯ 6 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಪಿರಿಯಾಪಟ್ಟಣ ವರದಿ

ತಾಲ್ಲೂಕಿನ ಕುಶಾಲನಗರ ಮತ್ತು ಪಿರಿಯಾಪಟ್ಟಣ ನಡುವಿನ ಹೆದ್ದಾರಿ ಸಂಚಾರ ಬಂದ್ ಆಗಿದೆ. ಕೊಪ್ಪ, ಆವರ್ತಿ, ಮುತ್ತಿನ ಮುಳ್ಳುಸೋಗೆ, ದಿಂಡಗಾಡು,ಸೂಳೆಕೋಟೆ, ಶಾನುಭೋಗನಹಳ್ಳಿ ಮತ್ತಿತರ ಕಾವೇರಿ ತೀರದ ಪ್ರದೇಶಗಳಲ್ಲಿ ನದಿಯ ನೀರು ಜಮೀನುಗಳಿಗೆ ನುಗ್ಗಿದೆ. ಕೊಪ್ಪ ಗ್ರಾಮದಲ್ಲಿ 25ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ. ಹೆದ್ದಾರಿ ಬದಿಯಲ್ಲಿನ 50ಕ್ಕೂ ಹೆಚ್ಚು ಮಳಿಗೆಗಳಿಗೆ ನೀರು ನುಗ್ಗಿದೆ. ಕೊಪ್ಪದಿಂದ ಆವರ್ತಿಗೆ ತೆರಳುವ ರಸ್ತೆ, ಕೊಪ್ಪದಿಂದ ಗೋಲ್ಡನ್ ಟೆಂಪಲ್‌ಗೆ ತೆರಳುವ ರಸ್ತೆ ಸಂಚಾರ ಬಂದ್‍ ಆಗಿದೆ.

ಹಂಪಾಪುರ

ಕಬಿನಿ ತಾರಕ ಮತ್ತು ಹೆಬ್ಬಳ್ಳ ಜಲಾಶಯಗಳಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಹಂಪಾಪುರ ಹೋಬಳಿಯಾದ್ಯಂತ ಜನರು ಆತಂಕಕ್ಕೀಡಾಗಿದ್ದಾರೆ.

ಹೈರಿಗೆ– ಮಟಕೆರೆ, ಚಕ್ಕೂರು– ಮಾದಾಪುರ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿದೆ. ಬೆಳಗನಹಳ್ಳಿ ಸಮೀಪ ತಾರಕ ನದಿ ಪಾತ್ರದಲ್ಲಿರುವ ಒಂಬತ್ತು ಮನೆಗಳು ಮುಳುಗಡೆಗೊಂಡಿವೆ. ಮುಳುಗಡೆಗೊಂಡ ಕಾರಣ ಮನೆಯ ಸದಸ್ಯರನ್ನು ಹೊಸತೊರವಳಿ ಗ್ರಾಮಸ್ಥರು ರಕ್ಷಣೆ ಮಾಡಿ ಪರಿಹಾರ ಕೇಂದ್ರಕ್ಕೆ ತಲುಪಿಸಿದ್ದಾರೆ. ಮೈಸೂರು- ಮಾನಂದವಾಡಿ- ಎಚ್.ಡಿ.ಕೋಟೆ ಸಂಪರ್ಕ ಕಳೆದುಕೊಂಡಿರುವುದರಿಂದ ಬದಲಿ ಮಾರ್ಗವಾಲ್ಲಿ ವಾಹನಗಳು ಚಲಿಸುತ್ತಿವೆ.

ತಿ.ನರಸೀಪುರ

ಜಲಾಶಯಗಳಿಂದ ನೀರು ಹೊರ ಬರುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ, ಕಪಿಲಾ ನದಿ ಪಾತ್ರದ ಗ್ರಾಮಗಳಲ್ಲಿ ಹಾಗೂ ಪಟ್ಟಣದ ತ್ರಿವೇಣಿ ಸಂಗಮದಲ್ಲಿ ಮುಂಜಾಗ್ರತಾ ಸೂಚನೆಗಳನ್ನು ತಾಲ್ಲೂಕಿನ ವಿವಿಧ ಇಲಾಖೆಗಳಿಗೆ ತಾಲ್ಲೂಕು ಆಡಳಿತ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.