ADVERTISEMENT

ಹುಣಸೂರು ತಾಲ್ಲೂಕಿನಾದ್ಯಂತ ಮಳೆ: ಮುಳುಗಡೆಯಾದ ಬೆಳೆ, ಕುಸಿದ ಮನೆ

ಸ್ಥಳಕ್ಕೆ ಅಧಿಕಾರಿಗಳ ಭೇಟಿ, ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 3:00 IST
Last Updated 24 ಅಕ್ಟೋಬರ್ 2025, 3:00 IST
ಹುಣಸೂರು ತಾಲ್ಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ಬುಧವಾರ ಬಿದ್ದ ಭಾರಿ ಮಳೆಗೆ ಮೆಣಸಿನಕಾಯಿ ಹೊಲದಲ್ಲಿ ತುಂಬಿದ ಮಳೆ ನೀರನ್ನು ಹೊರ ಕಳುಹಿಸುವಲ್ಲಿ ತೊಡಗಿರುವ ರೈತ ಮಹಿಳೆ ಜಯಮ್ಮ
ಹುಣಸೂರು ತಾಲ್ಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ಬುಧವಾರ ಬಿದ್ದ ಭಾರಿ ಮಳೆಗೆ ಮೆಣಸಿನಕಾಯಿ ಹೊಲದಲ್ಲಿ ತುಂಬಿದ ಮಳೆ ನೀರನ್ನು ಹೊರ ಕಳುಹಿಸುವಲ್ಲಿ ತೊಡಗಿರುವ ರೈತ ಮಹಿಳೆ ಜಯಮ್ಮ   

ಹುಣಸೂರು: ತಾಲ್ಲೂಕಿನಾದ್ಯಂತ ಕಳೆದ ಮೂರು ದಿನದಿಂದ 23.22 ಸೆ.ಮೀ. ಮಳೆಯಾಗಿದ್ದು ತಗ್ಗು ಪ್ರದೇಶದ ಹೊಲದಲ್ಲಿ ಬೆಳೆದ ತರಕಾರಿ ಮತ್ತು ರಾಗಿ ಬೆಳೆಗೆ ಹಾಗೂ ಕೆಲ ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ತಾಲ್ಲೂಕಿನಾದ್ಯಂತ ಎಡಬಿಡದೆ ಸುರಿದ ಮಳೆಯಿಂದ ಗಾವಡಗೆರೆ ಹೋಬಳಿ ಭಾಗದ ಹಿರಿಕ್ಯಾತಹಳ್ಳಿ ಗ್ರಾಮದ ತಗ್ಗು ಪ್ರದೇಶದಲ್ಲಿ ರೈತ ಮಹಿಳೆ ಜಯಮ್ಮ ತಮ್ಮ 3 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ದಪ್ಪ ಮೆಣಸಿನಕಾಯಿ (ಬುಲೆಟ್‌) ಹೊಲದಲ್ಲಿ ಮಳೆ ನೀರು ಸಂಗ್ರಹವಾಗಿ ಕೊಳೆಯುತ್ತಿದೆ.

‘ಮೆಣಸಿನಕಾಯಿ ಹೊಲದಲ್ಲಿ ಪ್ಲಾಸ್ಟಿಕ್‌ ಹೊದಿಕೆ ಬಳಸಿ ಹನಿ ನೀರಾವರಿ ಮೂಲಕ ಬೆಳೆಸಿದ್ದ ಮೆಣಸಿನಕಾಯಿ ಕಠಾವಿಗೆ ಬಂದಿದ್ದು, ಏಕಾಏಕಿ ಬಿದ್ದ ಮಳೆಯಿಂದಾಗಿ ತೇವಾಂಶ ಹೆಚ್ಚಿ ಹೂವು ಉದುರಿದೆ. ಇದರಿಂದ ಅಂದಾಜು ₹1.50 ಲಕ್ಷ ನಷ್ಟವಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ತೋಟಗಾರಿಕೆ ಸಹಾಯದೊಂದಿಗೆ ಬೇಸಾಯ ಮಾಡಿದ್ದು, ಮೆಣಸಿನಕಾಯಿ ಹೊಲದಲ್ಲಿ ಬೀನ್ಸ್‌, ಮಂಗಳೂರು ಸೌತೆ ಬೇಸಾಯವೂ ಮಾಡಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕನಿಷ್ಠ ₹ 3 ರಿಂದ 3.50 ಲಕ್ಷ ಹಣ ಕಾಣಬಹುದಿತ್ತು’ ಎಂದು ಕಣ್ಣೀರು ಹಾಕಿದರು.

ಇವರ ಹೊಲಕ್ಕೆ ಹೊಂದಿಕೊಂಡಂತಿರುವ ಹೊಲದಲ್ಲಿ ರಾಗಿ ಬೇಸಾಯ ಮಾಡಿದ್ದು ಅಲ್ಪಸ್ಪಲ್ಪ ಹಾನಿಯಾಗಿದ್ದು, ದ್ವಿದಳ ಧಾನ್ಯಕ್ಕೆ ಹಾನಿಯಾಗಿಲ್ಲ. ಕಟ್ಟೆಮಳಲವಾಡಿ ಗ್ರಾಮದ ಮಹದೇವಮ್ಮ ಅವರಿಗೆ ಸೇರಿದ ಮನೆ ಭಾಗಷಃ ಕುಸಿದಿದ್ದು, ನಿಲುವಾಗಿಲು ಗ್ರಾಮದ ರತ್ನ ಅವರ ಮನೆಯೂ ಕುಸಿದಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಶ್ರೀವತ್ಸ ಮತ್ತು ರಾಜ್ಯಸ್ವ ನಿರೀಕ್ಷಣಾಧಿಕಾರಿ ಶ್ರೀಧರ್‌ ಭೇಟಿ ನೀಡಿ ಪರಿಶೀಲಿಸಿ ಪರಿಹಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ.

ಮಳೆ ವರದಿ: ತಾಲ್ಲೂಕು ಹವಮಾನ ಮಾಪನ ಇಲಾಖೆ ವರದಿಯಂತೆ ಹುಣಸೂರು ನಗರದ ಹಾರಂಗಿ ನೀರಾವರಿ ಇಲಾಖೆ ಮಾಪನದಲ್ಲಿ ಅ.23ರಂದು 4.36 ಸೆ.ಮೀ. ಮಳೆ ದಾಖಲಾಗಿದೆ ಎಂದು ಇಲಾಖೆ ಅಧಿಕಾರಿ ಚಂದ್ರಶೇಖರ್‌ ತಿಳಿಸಿದ್ದಾರೆ. ತಂಬಾಕು ಸಂಶೋಧನಾ ಕೇಂದ್ರದಲ್ಲಿ 2.4 ಸೆ.ಮೀ. ಚಿಲ್ಕುಂದ 3.9 ಸೆ.ಮೀ. ಬಿಳಿಕೆರೆ ಕೇಂದ್ರದಲ್ಲಿ 5.5 ಸೆ.ಮೀ. ದಾಖಲಾಗಿದೆ. ಅ.22ರಂದು 4.8 ಸೆ.ಮೀ ಆಗಿದೆ.

ತಾಲ್ಲೂಕಿನ ನಿಲುವಾಗಿಲು ಗ್ರಾಮದಲ್ಲಿ ಮಳೆಗೆ ಕುಸಿದ ಮನೆ ಗೋಡೆ ಸ್ಥಳಕ್ಕೆ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಣಾಧಿಕಾರಿ ಶ್ರೀಧರ್ ಮತ್ತು ತಂಡ ಭೇಟಿ ನೀಡಿ ಪರಿಶೀಲಿಸಿದರು