ADVERTISEMENT

ಪ್ರೌಢ ಶಾಲಾ ಆವರಣ ಜಲಾವೃತ

ಮಳೆಗಾಲದಲ್ಲಿ ತಪ್ಪದ ಸಮಸ್ಯೆ; ನೀರು ನಿಲ್ಲದಂತೆ ಕ್ರಮವಹಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 3:16 IST
Last Updated 9 ಜುಲೈ 2021, 3:16 IST
ಜಯಪುರ ಹೋಬಳಿಯ ಡಿ.ಸಾಲುಂಡಿ ಸರ್ಕಾರಿ ಪ್ರೌಢಶಾಲೆಯ ಆವರಣ ಈಚೆಗೆ ಸುರಿದ ಮಳೆಯಿಂದ ಆವೃತವಾಗಿತ್ತು (ಎಡಚಿತ್ರ). ಡಿ.ಸಾಲುಂಡಿಯ ಸರ್ಕಾರಿ ಪ್ರೌಢಶಾಲೆಯ ಪಕ್ಕದಲ್ಲೇ ಕಸ ಸುರಿಯಲಾಗುತ್ತಿದೆ
ಜಯಪುರ ಹೋಬಳಿಯ ಡಿ.ಸಾಲುಂಡಿ ಸರ್ಕಾರಿ ಪ್ರೌಢಶಾಲೆಯ ಆವರಣ ಈಚೆಗೆ ಸುರಿದ ಮಳೆಯಿಂದ ಆವೃತವಾಗಿತ್ತು (ಎಡಚಿತ್ರ). ಡಿ.ಸಾಲುಂಡಿಯ ಸರ್ಕಾರಿ ಪ್ರೌಢಶಾಲೆಯ ಪಕ್ಕದಲ್ಲೇ ಕಸ ಸುರಿಯಲಾಗುತ್ತಿದೆ   

ಜಯಪುರ (ಮೈಸೂರು): ಹೋಬಳಿಯ ಡಿ.ಸಾಲುಂಡಿ ಮತ್ತು ಕೆಂಚಲಗೂಡು ಗ್ರಾಮಕ್ಕೆ ಹೊಂದಿಕೊಂಡಂತಿರುವ ಸರ್ಕಾರಿ ಪ್ರೌಢಶಾಲೆಯನ್ನು ಕೆರೆ ಜಾಗದಲ್ಲಿ ನಿರ್ಮಿಸಿರುವುದರಿಂದ ಮಳೆಗಾಲದಲ್ಲಿ ಶಾಲಾ ಆವರಣದಲ್ಲಿ ನೀರು ಸಂಗ್ರಹಗೊಳ್ಳುತ್ತಿದೆ.

ಮೂರು ವರ್ಷಗಳ ಹಿಂದೆ ಶಾಲಾ ಕಟ್ಟಡವನ್ನು ನಿರ್ಮಿಸಿದ್ದು, ಒಟ್ಟು 8 ಕೊಠಡಿಗಳಿವೆ. ಧನಗಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಡಿ ಕಾಂಪೌಂಡ್ ನಿರ್ಮಿಸಲಾಗಿದೆ. ಕಳೆದ ಒಂದು ವರ್ಷದಿಂದ ಶಾಲೆ ಆರಂಭವಾಗಿದೆ. ಶಾಲೆಯಲ್ಲಿ 9ರಿಂದ 10ನೇ ತರಗತಿಯ 110 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಶಾಲೆಯಲ್ಲಿ ಎಲ್ಲರಿಗೂ ಒಂದೇ ಶೌಚಾಲಯವಿದೆ. ಇದರಿಂದ ಸಮಸ್ಯೆಯಾಗಿದ್ದು, ಹೆಚ್ಚುವರಿಯಾಗಿ ಶೌಚಾಲಯಗಳನ್ನು ನಿರ್ಮಿಸಬೇಕಿದೆ.

ADVERTISEMENT

ಶಾಲೆಯು ತಗ್ಗು ಪ್ರದೇಶದಲ್ಲಿ ರುವುದರಿಂದ ಮಳೆಗಾಲದಲ್ಲಿ ನೀರು ನಿಲ್ಲುತ್ತಿದೆ. ಶಾಲಾ ಆವರಣ ಕೆರೆಯಂತಾಗಿ ರೂಪುಗೊಳ್ಳುತ್ತದೆ. ಆಟ ವಾಡಲು, ಪ್ರಾರ್ಥನೆ ಮಾಡಲು, ಶಾಲಾ ಕೊಠಡಿಗಳಿಗೆ ತೆರಳಲು ವಿದ್ಯಾರ್ಥಿಗಳು ಪ್ರಯಾಸ ಪಡಬೇಕಾಗಿದೆ.

ಶಾಲೆಯ ಆವರಣದಲ್ಲಿ ನೀರು ನಿಲ್ಲದಂತೆ ಮಾಡಲು ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಶಾಲಾ ಆವರಣದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು ಎಂದು ಡಿ.ಸಾಲುಂಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ನಳಿನಿ ತಿಳಿಸಿದರು.

‘ಡಿ.ಸಾಲುಂಡಿ ಪ್ರೌಢಶಾಲಾ ಆವರಣ ನೀರಿನಿಂದ ಜಲಾವೃತಗೊಂಡಿರುವ ಮಾಹಿತಿ ನನ್ನ ಗಮನಕ್ಕೆ ಬಂದಿದೆ. ಸ್ಥಳೀಯ ಶಾಸಕರ ಗಮನಕ್ಕೆ ತಂದು ಹಾಗೂ ಗ್ರಾಮ ಪಂಚಾಯಿತಿ ವಿಶೇಷ ಅನುದಾನದಲ್ಲಿ ಮಣ್ಣು ತುಂಬಿಸಬೇಕು. ಚರಂಡಿ ಮತ್ತು ಸಮರ್ಪಕ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗುವುದು’ ಎಂದು ಧನಗಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಗೋಪಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲೆ ಪಕ್ಕದಲ್ಲೇ ಕಸದ ರಾಶಿ

ಶಾಲಾ ಆವರಣದ ಪಕ್ಕದಲ್ಲಿಯೇ ಕಸ ಸುರಿಯಲಾಗುತ್ತಿದೆ. ಕಸ ಕೊಳೆತು ಗಬ್ಬು ನಾರುತ್ತಿದೆ. ಇದರಿಂದ ಶಾಲಾ ಪರಿಸರ ಹದಗೆಡುತ್ತಿದೆ. ಇಲ್ಲಿ ಕಸ ಹಾಕದಂತೆ ತಡೆಯಬೇಕು. ಈಗಾಗಲೇ ಸುರಿದಿರುವ ಕಸವನ್ನು ವಿಲೇವಾರಿ ಮಾಡಬೇಕು ಎಂದು ಡಿ.ಸಾಲುಂಡಿ ಗ್ರಾಮಸ್ಥ ಎಚ್.ಬೀರಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.