ತಿ.ನರಸೀಪುರ: ಶಿಕ್ಷಣ, ಆರೋಗ್ಯ ಹಾಗೂ ಅಕ್ಷರ ದಾಸೋಹ ನಾಡಿನ ಜನತೆಗೆ ಉಣಬಡಿಸಿದ ಕೀರ್ತಿ ಸುತ್ತೂರು ಶ್ರೀಮಠ ಹಾಗೂ ರಾಜೇಂದ್ರ ಶ್ರೀಗಳಿಗೆ ಸಲ್ಲುತ್ತದೆ ಎಂದು ಸಮಾಜಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಶಿವರಾತ್ರಿ ರಾಜೇಂದ್ರ ಸ್ವಾಮಿಗಳವರ ಸೇವಾ ಪ್ರತಿಷ್ಠಾನದಡಿ ಪಟ್ಟಣದ ವಿದ್ಯೋದಯ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆದ ಸುತ್ತೂರು ವೀರಸಿಂಹಾಸನ ಮಠದ ಜಗದ್ಗುರು ಲಿಂಗೈಕ್ಯ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಶತೋತ್ತರ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ಸಂಪನ್ಮೂಲಗಳಿಲ್ಲದ ಕಾಲದಲ್ಲಿ 300ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಬಹು ದೊಡ್ಡ ಸಾಧನೆಯನ್ನು ಮಾಡಿರುವ ರಾಜೇಂದ್ರ ಶ್ರೀಗಳ ಸೇವೆಯ ಅವಿಸ್ಮರಣೀಯ. ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಲಿಂಗಾಯಿತ ಮಠಗಳ ಕೊಡುಗೆ ಅಪಾರವಾಗಿದೆ’ ಎಂದು ಹೇಳಿದರು.
ಜಯದೇವ ಹೃದ್ರೋಗ ಸಂಸ್ಥೆಯ ನೂತನ ನಿರ್ದೇಶಕ ಡಾ.ಬಿ. ದಿನೇಶ್ ಮಾತನಾಡಿ, ‘ಸಾರ್ವಜನಿಕರು ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಿಯಮಿತ ಆಹಾರ ಸೇವನೆ, ವಾಕಿಂಗ್, ವ್ಯಾಯಾಮ ಮಾಡಬೇಕು ಹಾಗೂ ಯುವ ಜನತೆ ದುಶ್ಚಟ ಮುಕ್ತರಾಗಬೇಕು’ ಎಂದು ಕರೆ ನೀಡಿದರು.
ಗುಂಡ್ಲುಪೇಟೆ ಶಾಸಕ ಎಂ. ಗಣೇಶ್ ಪ್ರಸಾದ್, ವೀರಶೈವ ಮಹಾಸಭಾ ರಾಜ ಕಾರ್ಯದರ್ಶಿ ರೇಣುಕಾ ಪ್ರಸನ್ನ ಹನೂರಿನ ಯುವ ಮುಖಂಡ ನಿಶಾಂತ್ ಮಾತನಾಡಿದರು
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ತುಮಕೂರು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವ ಸಿದ್ದೇಶ್ವರ ಸ್ವಾಮೀಜಿ, ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಮ್ಮತಹಳ್ಳಿ ಪಾಂಡುಮಟ್ಟಿ ಮಠದ ಗುರುಬಸವ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿದ್ಯೋದಯ ಶಿಕ್ಷಣ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ, ಮದ್ಗಾರಲಿಂಗಯ್ಯನ ಹುಂಡಿ ವಿರಕ್ತಮಠದ ಗೌರಿಶಂಕರ ಸ್ವಾಮೀಜಿ, ಹಲವಾರ ಮಠದ ಷಡಕ್ಷರ ದೇಶೀಕೇಂದ್ರ ಸ್ವಾಮೀಜಿ, ಬೊಮ್ಮನಹಳ್ಳಿ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ವಿರಕ್ತಮಠದ ಬಸವಲಿಂಗದೇಶಿ ಕೇಂದ್ರ ಸ್ವಾಮೀಜಿ ವಿವಿಧ ಮಠಾಧೀಶರು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಬಜ್ಜಿಲಿಂಗಪ್ಪ, ಮಾಯಪ್ಪ, ಪರಮೇಶ್ ಪಟೇಲ್, ಕುರುಬೂರು ಶಿವು, ದೊಡ್ಡನಹುಂಡಿ ನಂಜುಂಡಸ್ವಾಮಿ, ಎಸ್.ಕೆ.ಕಿರಣ್ ಇದ್ದರು.
ಸ್ವಾತಂತ್ರ ಪಡೆದ ಅವಧಿಯಲ್ಲಿ ಇದ್ದ 35 ಕೋಟಿ ಜನಸಂಖ್ಯೆಯಲ್ಲಿ ಶೇ 8ರಷ್ಟು ವಿದ್ಯಾವಂತರಿದ್ದರು. ಸಂವಿಧಾನದ ಮೂಲಕ ಶಿಕ್ಷಣದ ಹಕ್ಕಿನಿಂದಾಗಿ ಇಂದು ಶೇ75ರಷ್ಟು ಸಾಕ್ಷರತೆ ಸಾಧಿಸಿದ್ದೇವೆ.– ಡಾ.ಎಚ್.ಸಿ.ಮಹದೇವಪ್ಪ, ಸಮಾಜಕಲ್ಯಾಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.