ಮೈಸೂರು: ಹೆಣ್ಣು ಮಕ್ಕಳಿಗೆ ಈ ತರಹದ ಬಟ್ಟೆ ಹಾಕಬೇಡ, ಅಲ್ಲಿಗೆ ಹೋಗಬೇಡ ಎಂದು ಉಪದೇಶ ಮಾಡುತ್ತಾರೆ. ಆದರೆ, ಗಂಡು ಮಕ್ಕಳಿಗೆ ನೀನು ಸರಿಯಾಗಿ ನೋಡು ಎಂದು ಏಕೆ ಹೇಳುವುದಿಲ್ಲ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ರಾಜೇಶ್ ಪ್ರಶ್ನಿಸಿದರು.
ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳಿಗಿಂತ ಹೆಚ್ಚಾಗಿ ಗಂಡು ಮಕ್ಕಳಿಗೆ ಬಾಲ್ಯದಿಂದಲೇ ಹೆಣ್ಣನ್ನು ಕಂಡರೆ ಗೌರವ ಕೊಡುವಂತೆ ಕಿವಿಮಾತು ಹೇಳಬೇಕು. ಆಗ ಹೆಣ್ಣಿನ ಮೇಲಿನ ಶೋಷಣೆ ಕಡಿಮೆಯಾಗಬಹುದು ಎಂದು ಅಭಿಪ್ರಾಯಪಟ್ಟರು.
ಹೆಣ್ಣು ಭ್ರೂಣದಿಂದಲೇ ಬಹಳ ಗಟ್ಟಿಯಾಗಿರುತ್ತಾಳೆ. ಆಕೆಯ ದನಿಯೂ ಗಂಡಿಗಂತ ಗಟ್ಟಿಯಾದದ್ದು. ನೋವು ತಡೆಯುವ ಶಕ್ತಿಯೂ ಗಂಡಿಗಿಂತ ಹೆಚ್ಚೇ ಆಕೆಯಲ್ಲಿದೆ. ಗಂಡು ಹೆಣ್ಣು ಸರಿಸಮಾನಳು ಎನ್ನುವುದಕ್ಕಿಂತ ಹೆಣ್ಣು ಗಂಡಿಗಿಂತ ಮೇಲು ಎಂಬುದು ವೈಜ್ಞಾನಿಕವಾಗಿ ಸಿದ್ಧವಾಗಿದೆ ಎಂದರು.
ಕಂಪ್ಯೂಟರ್‌ನಲ್ಲಿ ‘ಫಾದರ್ ಬೋರ್ಡ್’ ಎಂದು ಕರೆಯುವುದಿಲ್ಲ. ‘ಮದರ್ ಬೋರ್ಡ್‘ ಎಂದು ಕರೆಯುತ್ತಾರೆ. ತಂತ್ರಜ್ಞನಿಗೂ ಸ್ತ್ರೀಶಕ್ತಿ ಗೊತ್ತಾಗಿದೆ. ಎಲ್ಲವನ್ನೂ ತಾಳಿಕೊಳ್ಳುವ ಗುಣ ಮಹಿಳೆಗೆ ಇದೆ ಎಂದು ಹೇಳಿದರು.
ಸ್ತ್ರೀ ಎಂಬುದೇ ಶಕ್ತಿ
ಭರತನಾಟ್ಯ ಕಲಾವಿದರಾದ ತುಳಸಿ ರಾಮಚಂದ್ರ ಮಾತನಾಡಿ, ‘ಸ್ತ್ರೀ ಎಂಬುದೇ ಒಂದು ದೊಡ್ಡ ಶಕ್ತಿ’ ಎಂದು ತಿಳಿಸಿದರು.
ದೇಶದ ಯಾವುದೇ ಮೂಲೆಗೂ ಹೋದರೂ ಅಲ್ಲಿ ಗ್ರಾಮದೇವತೆಗಳನ್ನು ಪೂಜಿಸಲಾಗುತ್ತದೆ. ನದಿಗಳ ಹೆಸರೂ ಸ್ತ್ರೀಯರದ್ದೇ ಆಗಿದೆ. ಬೇರೆ ದೇಶಗಳಲ್ಲಿ ಇಂತಹ ಗೌರವ ಸಿಕ್ಕುತ್ತಿಲ್ಲ ಎಂದರು.
ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇವುಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
‘ಪ್ರಜಾವಾಣಿ’ ಮೈಸೂರು ಬ್ಯೂರೊ ಮುಖ್ಯಸ್ಥರಾದ ವಿಶಾಲಾಕ್ಷಿ ಅಕ್ಕಿ ಹಾಗೂ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ನಾಗೇಶ್ ವಿ.ಬೆಟ್ಟಕೋಟೆ ಅವರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.