ADVERTISEMENT

ನಗರದೆಲ್ಲೆಡೆ ರಾಜ್ಯೋತ್ಸವ ಸಂಭ್ರಮ

ಮಕ್ಕಳಿಂದ ಧ್ವಜಾರೋಹಣ, ಸಿಹಿ ವಿತರಣೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 10:21 IST
Last Updated 2 ನವೆಂಬರ್ 2019, 10:21 IST
ಮೈಸೂರಿನ ಎನ್‌ಟಿಎಂಎಸ್‌ ಶಾಲೆಯಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವವವನ್ನು ಸಾಮಾಜಿಕ ಹೋರಾಟಗಾರ ಕೊ.ಸು.ನರಸಿಂಹಮೂರ್ತಿ ಉದ್ಘಾಟಿಸಿದರು. ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರವಿಂದ್ ಶರ್ಮ, ಮುಖಂಡ ಧನಪಾಲ್ ಕುರುಬಾರಹಳ್ಳಿ, ಕರುಣಾಕರ್ , ಶ್ರೀನಿವಾಸ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹೊಸಕೋಟೆ ಬಸವರಾಜು, ಇತಿಹಾಸ ಪಿ.ವಿ.ನಂಜರಾಜಅರಸ್ ಇದ್ದಾರೆ
ಮೈಸೂರಿನ ಎನ್‌ಟಿಎಂಎಸ್‌ ಶಾಲೆಯಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವವವನ್ನು ಸಾಮಾಜಿಕ ಹೋರಾಟಗಾರ ಕೊ.ಸು.ನರಸಿಂಹಮೂರ್ತಿ ಉದ್ಘಾಟಿಸಿದರು. ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರವಿಂದ್ ಶರ್ಮ, ಮುಖಂಡ ಧನಪಾಲ್ ಕುರುಬಾರಹಳ್ಳಿ, ಕರುಣಾಕರ್ , ಶ್ರೀನಿವಾಸ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹೊಸಕೋಟೆ ಬಸವರಾಜು, ಇತಿಹಾಸ ಪಿ.ವಿ.ನಂಜರಾಜಅರಸ್ ಇದ್ದಾರೆ   

ಮೈಸೂರು: ನಗರದ ಹಲವು ಭಾಗಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.

ರಾಮಕೃಷ್ಣ ನಗರದ ಶ್ರೀರಾಮಕೃಷ್ಣ ಸೇವಾ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಹೋರಾಟಗಾರ ಎಂ.ರಾಮಮೂರ್ತಿ ಅವರು ಕನ್ನಡ ಬಾವುಟ ಸಿದ್ಧಪಡಿಸಿದ ಬಗೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಸಂಘದ ಅಧ್ಯಕ್ಷ ಎಂ.ಪಾಪೇಗೌಡ, ಕಾರ‌್ಯನಿರ್ವಾಹಕ ಅಧಿಕಾರಿ ಕೆ.ಪಿ.ಮಹದೇವಪ್ಪ, ಪ್ರಾಂಶುಪಾಲ ಪ್ರೊ.ಕೆ.ಎಂ.ಮಹದೇವಪ್ಪ, ಮುಖ್ಯಶಿಕ್ಷಕ ಜಿ.ಎನ್.ವಿಶ್ವನಾಥ್, ವೀಣಾ ಇದ್ದರು.

ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮುಖ್ಯ ಕಾರ‌್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಧ್ವಜಾರೋಹಣ ಮಾಡಿದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪ್ರಾಂಶುಪಾಲರಾದ ಪ್ರೊ.ಎಂ.ಮಹದೇವಪ್ಪ, ಎಸ್.ಸೋಮಶೇಖರ್, ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್.ಸುದೀಪ್ ಇದ್ದರು.

ADVERTISEMENT

ಕನ್ನಡ ಹೃದಯದ ಭಾಷೆಯಾಗಬೇಕು– ವೈ.ಡಿ.ರಾಜಣ್ಣ

ಇಲ್ಲಿನ ಸಿದ್ಧಾರ್ಥನಗರದಲ್ಲಿರುವ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ ನಡೆದ ರಾಜ್ಯೋತ್ಸವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಕರ್ನಾಟಕದ ಏಕೀಕರಣ ಕುರಿತು ಮಾತನಾಡಿದರು.

‘ಕನ್ನಡ ಭಾಷೆ ಹೃದಯದ ಭಾಷೆಯಾಗಬೇಕು. ನಾವು ಬರೀ ನವೆಂಬರ್ ಕನ್ನಡಿಗರಾಗದೇ ನಂಬರ್ 1 ಕನ್ನಡಿಗರಾಗಬೇಕು’ ಎಂದು ಕರೆ ನೀಡಿದರು. ವಿವಿಧ ತಂಡಗಳ ಸಮೂಹ ನೃತ್ಯವು ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಶಾಲೆಯ ಪ್ರಾಂಶುಪಾಲರಾದ ಬಿ.ಲತಾ, ಉಪ ಪ್ರಾಂಶುಪಾಲರಾದ ನಾಗೇಂದ್ರ ಇದ್ದರು.

ಸರಸ್ವತಿಪುರಂ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳ ಸಮುಚ್ಛಯದಲ್ಲಿ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕನ್ನಡ ನಾಡು-ನುಡಿ ಕುರಿತಂತೆ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರಾದ ಎಂ.ಮಹೇಶ್, ಎಚ್.ಪಿ.ಶೈಲಜಾ, ಜೆಎಸ್‍ಎಸ್ ಮಹಿಳಾ ಪ್ರಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ವೈ.ಎನ್.ಬಸವರಾಜು, ಪ್ರೌಢಶಾಲೆ ಮುಖ್ಯಶಿಕ್ಷಕ ಎಂ.ಷಣ್ಮುಖ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವೆಂಕಟಾಚಲಯ್ಯ ಮತ್ತು ಸಹನಾ ಶಾಲೆಯ ಮುಖ್ಯಶಿಕ್ಷಕ ಎಂ.ಡಿ.ಶಿವಬಸಪ್ಪ, ಮಹಿಳಾ ವಸತಿ ನಿಲಯಗಳ ಮುಖ್ಯನಿಲಯಪಾಲಕರಾದ ಮಮತಾ ಸುರೇಶ್ ಇದ್ದರು.

ಜಾಥಾ

ಸರ್ವಜನಾಂಗ ಹಿತರಕ್ಷಣಾ ವೇದಿಕೆಯಿಂದ ಜಾಥಾ ನಡೆಸುವ ಮೂಲಕ ಕನ್ನಡದ ಕುರಿತು ಜಾಗೃತಿ ಮೂಡಿಸಲಾಯಿತು. ಭುವನೇಶ್ವರಿ ತಾಯಿಯ ಭಾವಚಿತ್ರವನ್ನು ತೆರೆದ ವಾಹನದಲ್ಲಿಟ್ಟು ಮೆರವಣಿಗೆ ನಡೆಸಿದ್ದು, ಗಮನ ಸೆಳೆಯಿತು. ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವೇಣುಗೋಪಾಲ್, ಪದಾಧಿಕಾರಿಗಳಾದ ಜಯರಾಮ್, ಸೋಮಸುಂದರ್, ಅಕ್ಷಯ್, ಅಕ್ರಂಪಾಷಾ, ಗೌರಿ ಇದ್ದರು.

ಮಹಿಳಾ ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲರಾದ ಡಾ.ಧರಣದೇವಿ ಮಾಲಗತ್ತಿ ಅವರು ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ಪೊಲೀಸ್ ಬಡಾವಣೆಯ ನೇತಾಜಿ ಉದ್ಯಾನದಲ್ಲಿ ಶುಕ್ರವಾರ ಸಮಾನ ಮನಸ್ಕರ ವೇದಿಕೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ಥಾಮಸ್, ಪದಾಧಿಕಾರಿಗಳಾದ ಜಯಪಾಲನ್, ಮನುಕುಮಾರ್, ಮೋಹನ್ ಕುಮಾರ್, ನಂಜಯ್ಯ, ಶೋಭಾ ಧನಂಜಯ, ವೀಣಾಕಾಮತ್, ಸಿದ್ದರಾಜೇಗೌಡ ಇದ್ದರು.

ಚೌಡೇಶ್ವರಿ ಶಾಂತಿನಿಕೇತನ ಟ್ರಸ್ಟ್‌ ವತಿಯಿಂದ ಕುವೆಂಪುನಗರದ ಗಂಡಬೇರುಂಡ ಉದ್ಯಾನದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಚಿತ್ರಕಲಾ ಸ್ಪ‍ರ್ಧೆ ನಡೆಯಿತು. ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿ, ರೋಟರಿ ಪ್ಯಾಲೇಸ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಒಂದು ದಿನದ ಉಚಿತ ಆತ್ಮರಕ್ಷಣೆ ಮತ್ತು ಕುಮಿತೆ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಕಾರ‌್ಯಕ್ರಮ ಆಯೋಜಿಸಲಾಯಿತು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮಧುರಗಾನ ಕಲಾವೃಂದದ ವತಿಯಿಂದ ‘ಎರಡು ನಕ್ಷತ್ರಗಳ ಅಪೂರ್ವ ಸಂಗಮ’ ರಸಸಂಜೆಯು ರಂಜಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.