ADVERTISEMENT

ಆರು ಮಂದಿಗೆ ರಾಜ್ಯೋತ್ಸವ ಗೌರವ

ಶಿಕ್ಷಣ ತಜ್ಞ, ಕಲಾವಿದ, ಕ್ರೀಡಾಪಟು, ಪತ್ರಕರ್ತನಿಗೂ ಪುರಸ್ಕಾರದ ಮನ್ನಣೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 6:35 IST
Last Updated 31 ಅಕ್ಟೋಬರ್ 2025, 6:35 IST
ಎಂ.ಯೋಗೇಂದ್ರ
ಎಂ.ಯೋಗೇಂದ್ರ   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಆರು ಹಿರಿಯರಿಗೆ 70ನೇ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಶಿಕ್ಷಣ ತಜ್ಞ, ಕಲಾವಿದರು, ಕ್ರೀಡಾಪಟು ಹಾಗೂ ಪತ್ರಕರ್ತರೂ ಈ ಸಾಧಕರ ಪಟ್ಟಿಯಲ್ಲಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಎನ್.ಎಸ್. ರಾಮೇಗೌಡ, ಕ್ರೀಡಾ ಕ್ಷೇತ್ರದಲ್ಲಿ ಹಿರಿಯ ಅಥ್ಲೀಟ್‌ ಎಂ. ಯೋಗೇಂದ್ರ, ಮಾಧ್ಯಮ ಕ್ಷೇತ್ರದಲ್ಲಿ ಅಂಶಿ ಪ್ರಸನ್ನಕುಮಾರ್, ಕರಕುಶಲ ಕ್ಷೇತ್ರದಲ್ಲಿ ಹೇಮಾ ಶೇಖರ್, ನೃತ್ಯ ಕ್ಷೇತ್ರದಲ್ಲಿ ರಾಮಮೂರ್ತಿರಾವ್‌, ಜನಪದ ಕ್ಷೇತ್ರದಿಂದ ನಂದಿಧ್ವಜ ಕಲಾವಿದ ಮಹದೇವಪ್ಪ ಉಡಿಗಾಲ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಕಳೆದ ಮೂರ್ನಾಲ್ಕು ದಶಕಗಳಿಂದ ಮೈಸೂರಿನಲ್ಲೇ ನೆಲೆಸಿರುವ, ರಂಗಾಯಣದ ನಿವೃತ್ತ ಕಲಾವಿದ ಮೈಮ್‌ ರಮೇಶ್‌ ಅವರಿಗೂ ಪ್ರಶಸ್ತಿ ದೊರೆತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕೋಟಾದಲ್ಲಿ ಅವರಿಗೆ ಪುರಸ್ಕಾರ ಘೋಷಿಸಲಾಗಿದೆ.

ADVERTISEMENT

ಹಿರಿಯ ಅಥ್ಲೀಟ್‌:

ಹಲವು ಅಂತರರಾಷ್ಟ್ರೀಯ ಅಥ್ಲೆಟಿಕ್‌ ಕೂಟಗಳಲ್ಲಿ ಭಾರತದ ಪತಾಕೆ ಹಾರಿಸಿದ ಕೀರ್ತಿ ಎಂ. ಯೋಗೇಂದ್ರ ಅವರದ್ದು. ದೂರದ ಓಟಗಾರರಾಗಿ ಗುರುತಿಸಿಕೊಂಡಿರುವ ಯೋಗೇಂದ್ರ, ಕಳೆದ 46 ವರ್ಷಗಳಿಂದ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿ 60ಕ್ಕೂ ಹೆಚ್ಚು ಚಿನ್ನ, 50 ಬೆಳ್ಳಿ ಹಾಗೂ 48 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

2016ರಲ್ಲಿ ಚೀನಾದಲ್ಲಿ ನಡೆದ 20ನೇ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 2 ಕಂಚು, 2014ರಲ್ಲಿ ಜಪಾನ್‌ನಲ್ಲಿ ನಡೆದ 19ನೇ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ರಿಲೇನಲ್ಲಿ ಕಂಚಿನ ಪದಕ ಸಾಧನೆ ಮಾಡಿದ್ದಾರೆ. 62ರ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಾಗಿದ್ದಾರೆ.  

ವಿಜಯನಗರ ನಿವಾಸಿ ಯೋಗೇಂದ್ರ ಎಂ.ಎಸ್ಸಿ ಪದವೀಧರರಾಗಿದ್ದು, ಕೇಂದ್ರ ತೆರಿಗೆ ಮತ್ತು ಸುಂಕ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರಿಗೆ ಪತ್ನಿ ರೇಣುಕಾದೇವಿ ಹಾಗೂ ನಾಲ್ವರು ಮಕ್ಕಳಿದ್ದು, ಪುತ್ರ ಭರತ್‌ ಭಾರತೀಯ ಸೇನೆಯಲ್ಲಿ ಮೇಜರ್ ಹುದ್ದೆಯಲ್ಲಿದ್ದಾರೆ. ಮೈಸೂರು ಅಥ್ಲೆಟಿಕ್ಸ್ ಕ್ಲಬ್‌ನ ಸಂಸ್ಥಾಪಕ ಕಾರ್ಯದರ್ಶಿ ಸೇರಿದಂತೆ ಹಲವು ಸಂಘ–ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

‘ಹಿರಿಯ ಅಥ್ಲೀಟ್ ಪ್ರತಿಭೆಯನ್ನು ಗುರುತಿಸಿ ಸರ್ಕಾರ ಈ ಗೌರವ ನೀಡಿದ್ದಕ್ಕೆ ಬಹಳ ಖುಷಿಯಾಗುತ್ತಿದೆ. ಐದು ದಶಕದಿಂದ ಕ್ರೀಡಾ ಕ್ಷೇತ್ರದಲ್ಲಿದ್ದು, ದೂರದ ಓಟಗಾರನಾಗಿ ಹಲವು ಪದಕ ಗೆದ್ದಿದ್ದೇನೆ. ಮುಂದೆಯೂ ಕ್ರೀಡಾಭ್ಯಾಸದ ಜೊತೆಗೆ ಕ್ರೀಡೆಯನ್ನು ಪ್ರೋತ್ಸಾಹಿಸುವ ಕಾರ್ಯ ಮುಂದುವರಿಸುತ್ತೇನೆ’ ಎಂದು ಯೋಗೇಂದ್ರ ಖುಷಿ ಹಂಚಿಕೊಂಡರು.

ಕಿರಿಯರಿಗೆ ಮಾರ್ಗದರ್ಶಕ:

ಅಂಶಿ ಪ್ರಸನ್ನಕುಮಾರ್‌

ಮಾಧ್ಯಮ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದಿರುವ ‘ಕನ್ನಡಪ್ರಭ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್ ಮೈಸೂರಿನ ಕಿರಿಯ ತಲೆಮಾರಿನ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದಾರೆ.

1983ರಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸತ್ಯದೇವ್ ಕೊಲೆ ಪ್ರಕರಣ, ವೀರಪ್ಪನ್ ಕುರಿತ ವರದಿಗಳ ಮೂಲಕ ಹೆಸರು ಮಾಡಿದ್ದ ಅವರು, ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯ, ಕೃಷಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ವರದಿ ಮಾಡಿದ್ದಾರೆ. ಮೈಸೂರು ಭಾಗದ ಸಾಕ್ಷಿಪ್ರಜ್ಞೆಯಾಗಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಈವರೆಗೆ 75 ಪ್ರಶಸ್ತಿಗಳು ಅವರಿಗೆ ಸಂದಿವೆ. 300ಕ್ಕೂ ಹೆಚ್ಚು ಸಂಘ–ಸಂಸ್ಥೆಗಳು ಸನ್ಮಾನಿಸಿವೆ. ಲೇಖಕರಾಗಿಯೂ ಗುರುತಿಸಿಕೊಂಡಿರುವ ಅಂಶಿ, 'ಅನ್ನದಾತರ ಆತ್ಮಕಥೆ', 'ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ', 'ಮೈಸೂರು ರಾಜರು ಮತ್ತು ದಸರಾ' ಸೇರಿದಂತೆ 26 ಕೃತಿಗಳನ್ನು ರಚಿಸಿದ್ದಾರೆ.

‘ಈ ಬಾರಿ ಯಾವುದೇ ಅರ್ಜಿ ಆಹ್ವಾನಿಸದೇ, ಆಯ್ಕೆ ಸಮಿತಿಯೇ ನೇರವಾಗಿ ಅರ್ಹರನ್ನು ಗುರುತಿಸಿರುವುದು, ಮುಖ್ಯಮಂತ್ರಿಗಳ ನೇತೃತ್ವದ ಉನ್ನತ ಸಮಿತಿಯು ಅದನ್ನು ಪುರಸ್ಕರಿಸಿರುವುದು ಅತ್ಯುತ್ತಮ ನಡೆ. ಈ ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆಯಲ್ಲದೇ ಮತ್ತಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ’ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ದೂರಶಿಕ್ಷಣ ತಜ್ಞ:

ಮೂಲತಃ ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿಯವರಾದ 84 ವರ್ಷ ವಯಸ್ಸಿನ ಶಿಕ್ಷಣ ತಜ್ಞ ಎನ್‌.ಎಸ್. ರಾಮೇಗೌಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದವರು.

ಕನಕಪುರದ ರೂರಲ್‌ ಕಾಲೇಜಿನಲ್ಲಿ 1964ರಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ರಾಮೇಗೌಡ, ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕರಾಗಿ ಹಾಗೂ 1999ರಿಂದ 2003ರವರೆಗೆ ಕೆಎಸ್‌ಒಯು ಕುಲಪತಿ ಸೇರಿದಂತೆ ವಿವಿಧ ಹಂತಗಳಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದಾರೆ. ಶಿಕ್ಷಣ ತಜ್ಞರಾಗಿ ವಿವಿಧ ದೇಶಗಳಿಗೆ ಭೇಟಿ ಕೊಟ್ಟು ಜ್ಞಾನ ಹಂಚಿಕೊಂಡಿದ್ದಾರೆ. 2010ರಿಂದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೆಎಸ್‌ಒಯು ಕುಲಪತಿಯಾಗಿದ್ದಾಗ ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಪಠ್ಯ ಸಿದ್ಧಪಡಿಸಿದ್ದಲ್ಲೇ ಇಂಗ್ಲಿಷ್‌ ಮಾಧ್ಯಮದವರಿಗೂ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡಿದವರು. ಹಲವು ಸಂಘ–ಸಂಸ್ಥೆ, ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

‘ದೂರ ಶಿಕ್ಷಣ ಎಲ್ಲರಿಗೂ ಸಿಗಬೇಕು. ಮನೆಬಾಗಿಲಿಗೆ ಉನ್ನತ ಶಿಕ್ಷಣ ತಲುಪಬೇಕೆಂಬ ಆಶಯದಲ್ಲೇ ಕೆಲಸ ಮಾಡಿಕೊಂಡು ಬಂದಿದ್ದೇನೆ. ಇದೀಗ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಖುಷಿಯಾಗಿದೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ನೃತ್ಯ– ಸಂಗೀತ ಸಂಘಟಕ  

‘ಬಿಡಾರಂ ಕೃಷ್ಣಪ್ಪ ಭವನದಲ್ಲಿ 70ನೇ ವರ್ಷದಲ್ಲಿ ಬರೆದ ಗಮಕ ಪರೀಕ್ಷೆಯ ಪ್ರಮಾಣ ಪತ್ರ ಸ್ವೀಕರಿಸಲು ಬಂದಿದ್ದೆ. ಶೇ 87 ಅಂಕ ಬಂದಿತ್ತು. ಆ ಖುಷಿಯಲ್ಲಿದ್ದಾಗ ಸ್ನೇಹಿತರೊಬ್ಬರು ಫೋನ್ ಮಾಡಿ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ ಎಂದರು. ಈಗ ಡಬಲ್ ಖುಷಿ’

ನೃತ್ಯ– ಸಂಗೀತ ಸಂಘಟಕ ಪ್ರೊ.ಕೆ.ರಾಮಮೂರ್ತಿ ರಾವ್‌  ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡಿದ್ದು ಹೀಗೆ. 

‘ಸಂಗೀತ– ನೃತ್ಯದ ಎಲ್ಲ ಪ್ರಕಾರಗಳನ್ನು ಮತ್ತಷ್ಟು ಅರಿಯುವ ವಿದ್ಯಾರ್ಥಿ ಎಂದೇ ಹೇಳಬಯಸುವೆ. ನೆಚ್ಚಿನ ‘ಪ್ರಜಾವಾಣಿ’ಗೆ 12 ವರ್ಷ ‘ಸಂಗೀತ ನೃತ್ಯ’ ಅಂಕಣ ಬರಹಗಳನ್ನು ಬರೆದಿರುವೆ. ಕಾರ್ಯಕ್ರಮಗಳನ್ನು ಆಯೋಜಿಸುವ, ಕಾರ್ಯಕರ್ತನಾಗಿ ಕೆಲಸ ಮಾಡುವಲ್ಲೇ ತೃಪ್ತಿಯಿದೆ’ ಎಂದರು. 

ಉಡುಪಿ ಜಿಲ್ಲೆಯ ಕುಕ್ಕಿಕಟ್ಟೆ ಗ್ರಾಮದಲ್ಲಿ ಜನಿಸಿದ ‍ರಾಮಮೂರ್ತಿ ರಾವ್, ಓದಿದ್ದು ಸಾಂಸ್ಕೃತಿಕ ನಗರಿಯಲ್ಲಿ. ಜೆಎಸ್‌ಎಸ್‌ ವಿದ್ಯಾಪೀಠದ ವಿವಿಧ ಕಾಲೇಜುಗಳಲ್ಲಿ ವಾಣಿಜ್ಯಶಾಸ್ತ್ರ ಅಧ್ಯಾಪಕರಾಗಿ ಮಕ್ಕಳಿಗೆ ಪಾಠ ಹೇಳಿದ್ದಾರೆ.  ಎಂ.ವಿಷ್ಣು ದಾಸ್ ಅವರಿಂದ ಭರತನಾಟ್ಯ ಕಲಿತ ಅವರು, ಕಳೆದ ‘ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್’ ಆರಂಭಿಸಿ ಕಳೆದ 40 ವರ್ಷಗಳಿಂದ ನಾಡಿನಾದ್ಯಂತ ಸಂಚರಿಸಿ ನೃತ್ಯಪಾಠ ಮಾಡಿದ್ದಾರೆ.  

‘ನಾಟ್ಯ ಸರಸ್ವತಿ ಜೆಟ್ಟಿತಾಯಮ್ಮ’, ‘ಮಾಸದ ಮಾತು’, ‘ಕಲಾಚಿಂತನ’, ‘ನೃತ್ಯ ನೂಪುರ’, ‘ನೃತ್ಯ ದರ್ಪಣ’ ಕೃತಿಗಳನ್ನು ಬರೆದಿದ್ದು, ‘ನೃತ್ಯಶಾಸ್ತ್ರ ಮಂಜರಿ’ ಕೃತಿಗೆ 2022ರ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ದೊರತಿದೆ.  

ನಂದಿಧ್ವಜದ ‘ಜೀವ’ 

ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಆರಂಭವಾಗುವುದೇ ‘ನಂದಿಧ್ವಜ’ ಪೂಜೆ, ಕುಣಿತದೊಂದಿಗೆ. ಜಯಚಾಮರಾಜೇಂದ್ರ ಒಡೆಯರ್‌ ಅಂಬಾರಿಯಲ್ಲಿ ಕೂರುತ್ತಿದ್ದಾಗಿನಿಂದಲೂ ಎಲ್‌.ಮಹಾದೇವಪ್ಪ ಉಡಿಗಾಲ ಅವರು ನಂದಿಧ್ವಜದೊಂದಿಗೆ ಜೀವ ಬೆಸೆದುಕೊಂಡಿದ್ದಾರೆ. 

‘14 ವರ್ಷದವನಿದ್ದಾಗ ಮೊದಲು ಧ್ವಜದ ಕಂಬ ಹೊತ್ತಿದ್ದೆ. ಜಯಚಾಮರಾಜೇಂದ್ರ ಒಡೆಯರ್‌ ಕಾಲದ ದಸರೆಯದು. ನನಗೀಗ 83 ವರ್ಷ. 66 ವರ್ಷದಿಂದಲೂ ದಸರೆಯನ್ನು ತಪ್ಪಿಸಿಲ್ಲ. ಕೆಲವು ವರ್ಷದ ಹಿಂದಿನಿಂದಷ್ಟೇ ಕಂಬ ಹೊತ್ತಿಲ್ಲವಷ್ಟೇ. ಕಲಾವಿದನೆಂದು ಗುರುತಿಸಿ ಸರ್ಕಾರ ಪ್ರಶಸ್ತಿ ಕೊಟ್ಟಿರುವುದು ಖುಷಿ ತಂದಿದೆ’ ಎಂದು ಮಹದೇವಪ್ಪ ಹೇಳಿದರು. 

ಚಾಮರಾಜನಗರದ ಉಡಿಗಾಲದವರಾದ ಎಲ್‌.ಮಹಾದೇವಪ್ಪ 5 ದಶಕದಿಂದಲೂ ಮೈಸೂರಿನಲ್ಲೇ ನೆಲೆಸಿದ್ದಾರೆ. ಗೌರಿಶಂಕರನಗರ ನಂದಿಧ್ವಜ ಸಂಘ ಸ್ಥಾಪಿಸಿ, ಅಧ್ಯಕ್ಷರಾಗಿ ಕಲಾವಿದರನ್ನು ರೂಪಿಸಿದ್ದಾರೆ. 

ನಶಿಸುವ ಕಲೆ ಉಳಿಸಿದ ಪ್ರವೀಣೆ 

ಹೇಮಾಶೇಖರ್

ನಂಜನಗೂಡಿನ ಕಲಾವಿದೆ ಹೇಮಾಶೇಖರ್ ಅವರಿಗೆ ಮದುವೆ ನಂತರ ಚಿತ್ರ ಬರೆಯುವ ಆಸೆ ಮೊಳೆಯಿತು. ಪ್ರಕೃತಿ, ಪ್ರಾಣಿ, ಪಕ್ಷಿಗಳನ್ನು ಬರೆಯುತ್ತಿದ್ದ ಅವರು, ಅರಮನೆ ಕಲಾವಿದರಾದ ಸೂಫಿ ಹಾಗೂ ರಾಮನರಸಯ್ಯ ಅವರ ಬಳಿ ಮೈಸೂರು ಶೈಲಿಯ ವರ್ಣಚಿತ್ರ ಕಲೆಯನ್ನು ಕಲಿತರು. ನಶಿಸುತ್ತಿದ್ದ ‘ಬಾಟಿಕ್‌ ಮತ್ತು ಟೈ ಅಂಡ್‌ ಡೈ’ ಕಲೆಯಲ್ಲಿ ಪ್ರಾವಿಣ್ಯತೆ ಸಾಧಿಸಿದರು. 

73 ವರ್ಷದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು, ಕರಕುಶಲ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. 

‘ಕಲಾವಿದೆ ಆಗುತ್ತೇನೆಂದುಕೊಂಡಿರಲಿಲ್ಲ. ರವೀಂದ್ರನಾಥ ಟ್ಯಾಗೋರ್ ಅವರ ಶೈಲಿಯ ಚಿತ್ರಕಲೆ ನೋಡಿ ಆಸಕ್ತಿ ಬೆಳೆಯಿತು. ದೇವರಸನಹಳ್ಳಿಯ ಹೆಣ್ಣುಮಕ್ಕಳಿಗೆ ಕಲಿತದ್ದನ್ನು ಹೇಳಿಕೊಡಲು ಆರಂಭಿಸಿದೆ. ಅದು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಪ್ರಶಸ್ತಿ ಸಿಕ್ಕಿದ್ದು ಸಂತಸ ತಂದಿದೆ’ ಎಂದು ಹೇಮಾಶೇಖರ್ ಹೇಳಿದರು. 

ರಾಜ್ಯ ಸರ್ಕಾರದ ‘ವಿಶ್ವ’, ಕೇಂದ್ರ ಸರ್ಕಾರದ ‘ಗುರುಶಿಷ್ಯ ಪರಂಪರೆ’ ಯೋಜನೆಯಡಿ ನೂರಾರು ಹೆಣ್ಣುಮಕ್ಕಳಿಗೆ ಹೇಮಾಶೇಖರ್ ಅವರು ಉಡುಪುಗಳಲ್ಲಿ ಚಿತ್ರಿಸುವ ‘ಟೈ ಅಂಡ್‌ ಡೈ’ ಕಲೆಯನ್ನು ಹೇಳಿಕೊಟ್ಟಿದ್ದು, ಸ್ವಾವಲಂಬಿ ಜೀವನ ಕಟ್ಟಿಕೊಡಲು ನೆರವಾಗಿದ್ದಾರೆ. ಅವರಿಗೆ ಹತ್ತಾರು ಪ್ರಶಸ್ತಿಗಳು ಸಂದಿವೆ. 

ಎನ್‌.ಎಸ್. ರಾಮೇಗೌಡ
ಪ್ರೊ.ಕೆ.ರಾಮಮೂರ್ತಿ ರಾವ್
ಎಲ್‌.ಮಹದೇವಪ್ಪ ಉಡಿಗಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.