ADVERTISEMENT

ಇಂದಿನಿಂದ ರಂಜಾನ್‌ ಉಪವಾಸ

ಜಿಲ್ಲಾ ವಕ್ಫ್ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ಮೇ 2019, 20:04 IST
Last Updated 6 ಮೇ 2019, 20:04 IST
ಮೈಸೂರಿನಲ್ಲಿ ಒಣ ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದ ಮುಸ್ಲಿಂ ಮಹಿಳೆಯರು
ಮೈಸೂರಿನಲ್ಲಿ ಒಣ ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದ ಮುಸ್ಲಿಂ ಮಹಿಳೆಯರು   

ಮೈಸೂರು: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್‌ (ಈದ್‌ ಉಲ್‌ ಫಿತ್ರ್) ಮಾಸದ ಉಪವಾಸ ಮೇ 7ರಂದು ಆರಂಭವಾಗಲಿದೆ.

ಮಂಗಳವಾರ ರಂಜಾನ್ ಆಚರಣೆ ಆರಂಭಿಸಲಾಗುವುದು ಎಂದು ಮೈಸೂರು ಜಿಲ್ಲಾ ಮೂನ್ ಕಮಿಟಿ ತಿಳಿಸಿದೆ.

ಮೈಸೂರು ಸರ್ ಖಾಝಿ ಹಜರತ್ ಮೌಲಾನಾ ಮೊಹಮದ್ ಉಸ್ಮಾನ್ ಷರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾ ಮೂನ್ ಕಮಿಟಿ ಸದಸ್ಯರು ಭಾಗಿಯಾಗಿದ್ದರು.

ADVERTISEMENT

ಈ ಬಾರಿ ಕಡು ಬೇಸಿಗೆಯಲ್ಲೇ ಬಂದಿದ್ದು, ಒಂದು ತಿಂಗಳ ವ್ರತಾಚರಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ, ಮಸೀದಿಗಳು ಕೂಡ ಸಜ್ಜಾಗಿವೆ.

ಸೂರ್ಯೋದಯಕ್ಕಿಂತ ಮುನ್ನ, ಸೂರ್ಯಾಸ್ತದ ನಂತರ ಆಹಾರ ಸೇವನೆ ಮಾಡಲಾಗುತ್ತದೆ. ಏಳು ವರ್ಷದೊಳಗಿನ ಮಕ್ಕಳು, ಅನಾರೋಗ್ಯ ಪೀಡಿತರು, ಅಶಕ್ತರಿಗೆ ಮಾತ್ರ ಉಪವಾಸದಿಂದ ವಿನಾಯಿತಿ ಇರುತ್ತದೆ. ‌

ಮಂಗಳವಾರ ಮುಂಜಾನೆ ಆಝಾನ್‌ಗೆ ಮುನ್ನವೇ ಅತ್ತಾಳ ಸೇವಿಸಿ, ಬಳಿಕ ಉಪವಾಸ ಆರಂಭಿಸಲಾಗುವುದು. ಸಂಜೆಯ ಸೂರ್ಯಾಸ್ತದ ಆಝಾನ್‌ ಕೇಳಿದ ಬಳಿಕ ಇಫ್ತಾರ್‌ನೊಂದಿಗೆ ಉಪವಾಸವನ್ನ ಅಂತ್ಯಗೊಳಿಸಲಾಗುತ್ತದೆ. ನಿತ್ಯ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ವಿವಿಧೆಡೆ ಇಫ್ತಾರ್‌ ಕೂಟಗಳನ್ನು ಏರ್ಪಡಿಸಲಾಗುತ್ತದೆ.

ಖರೀದಿ ಜೋರು: ರಂಜಾನ್‌ ಮಾಸದ ಉಪವಾಸ ಹಿನ್ನೆಲೆಯಲ್ಲಿ ಬಗೆಬಗೆಯ ಖರ್ಜೂರದ ಮಾರಾಟ ಜೋರಾಗಿದೆ. ಮುಸ್ಲಿಂ ಸಮುದಾಯದವರು ಸೋಮವಾರ ಮೀನಾ ಬಜಾರ್‌, ಮಂಡಿ ಮೊಹಲ್ಲಾ, ದೇವರಾಜ ಅರಸು ರಸ್ತೆಯ ಅಂಗಡಿಗಳಲ್ಲಿ ಒಣ ಹಣ್ಣು, ಹಣ್ಣು ಹಾಗೂ ಸಿಹಿ ತಿಂಡಿ ಖರೀದಿ ಭರಾಟೆಯಲ್ಲಿ ತೊಡಗಿದ್ದರು. ಮಾರುಕಟ್ಟೆಯಲ್ಲಿ ಖರ್ಜೂರದ ರಾಶಿ ಕಂಡು ಬರುತ್ತಿದೆ.

ಕುಂಬಳಕಾಯಿ ಪೇಡ, ಒಣ ಹಣ್ಣು, ಪಾನೀಯ, ಬಾದಾಮ್‌ ಹಾಲು ಮತ್ತು ಫಲುದಾವನ್ನು ವಿಶೇಷ ತಿನಿಸುಗಳಾಗಿ ಬಳಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.