ADVERTISEMENT

Rameshwaram Cafe Blast | ಮಾಸ್ಕ್, ಟೋಪಿ ಹಾಕಿದ್ದ ವ್ಯಕ್ತಿಯಿಂದ ಕೃತ್ಯ: ಸಿಎಂ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 5:48 IST
Last Updated 2 ಮಾರ್ಚ್ 2024, 5:48 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: 'ರಾಮೇಶ್ವರಂ ಕೆಫೆಗೆ ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡು ಬಂದ ವ್ಯಕ್ತಿ ಸ್ಫೋಟಕ್ಕೆ ಕಾರಣವಾಗಿದ್ದಾನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ರಾಮೇಶ್ವರಂ ಕೆಫೆಗೆ ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡು ಬಂದ ವ್ಯಕ್ತಿ 

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೋಟೆಲ್‌ನಲ್ಲಿ ತಿಂಡಿಯ ಟೋಕನ್ ತೆಗೆದುಕೊಂಡು, ಅಲ್ಲೇ ಕುಳಿತು ಟೈಮರ್ ಫಿಕ್ಸ್ ಮಾಡಿ ಬ್ಲಾಸ್ಟ್ ಮಾಡಿ ನಂತರ ಹೋಗಿದ್ದಾನೆ. ಅವನು ಬಸ್ಸಿನಿಂದ ಇಳಿಯುವುದು, ಹೋಟೆಲ್‌ಗೆ ಬರುವ ದೃಶ್ಯವೆಲ್ಲವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ' ಎಂದು ಹೇಳಿದರು.

ADVERTISEMENT

'ಇದು ಒಬ್ಬ ವ್ಯಕ್ತಿಯ ಕೃತ್ಯವಾ ಅಥವಾ ಸಂಘಟನೆಯದ್ದಾ ಎಂಬುದು ಗೊತ್ತಾಗಿಲ್ಲ. ಇದು ಭಯೋತ್ಪಾದಕರ ಕೃತ್ಯವಾ ಎಂಬುದೂ ಸ್ಪಷ್ಟವಾಗಿಲ್ಲ. ಎಲ್ಲವೂ ಇನ್ನೂ ತನಿಖೆಯ ಹಂತದಲ್ಲಿದೆ' ಎಂದರು.

'ನಾನು ಕೂಡ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡುತ್ತೇನೆ, ಗಾಯಗೊಂಡವರ ಆರೋಗ್ಯ ವಿಚಾರಿಸಲು ಹೋಗುತ್ತೇನೆ. ಒಟ್ಟು 9 ಮಂದಿ ಗಾಯಗೊಂಡಿದ್ದಾರೆ. ಎಲ್ಲರೂ ಪ್ರಾಣಯಪಾಯದಿಂದ ಪಾರಾಗಿದ್ದಾರೆ' ಎಂದು ಹೇಳಿದರು.

ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೂ ಈ ಸ್ಫೋಟಕ್ಕೂ ಸಾಮ್ಯತೆ ಇಲ್ಲ. ಇಲ್ಲಿ ಯಾವ ಕುಕ್ಕರ್ ಕೂಡ ಸ್ಫೋಟವಾಗಿಲ್ಲ ಎಂದರು.

ಅಲ್ಪಸಂಖ್ಯಾತರ ತುಷ್ಟೀಕರಣದಿಂದ ಇಂತಹ ಕೃತ್ಯ ನಡೆದಿದೆ ಎಂಬ ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲಿ ಆದ ಬಾಂಬ್ ಸ್ಫೋಟ ಪ್ರಕರಣಗಳಿಗೆ ಏನು ಕಾರಣ? ಅದು ಅಲ್ಪಸಂಖ್ಯಾತರ ತುಷ್ಟೀಕರಣವಾ? ಬಿಜೆಪಿಯವರು ರಾಜಕೀಯಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅಲ್ಪಸಂಖ್ಯಾತರ ಪರ ಇರುವುದಕ್ಕೂ ಇದಕ್ಕೂ ಏನು ಸಂಬಂಧ? ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.