ADVERTISEMENT

ಮೈಸೂರು: ಈ ಬಾರಿ ‘ಜನಪದ ರಂಗಪ್ರಾಕಾರ ಉತ್ಸವ’

ರಂಗಾಯಣದಿಂದ ಆಯೋಜನೆ; ಹಲವು ತಂಡಗಳಿಗೆ ಅವಕಾಶ

ಎಂ.ಮಹೇಶ
Published 12 ಸೆಪ್ಟೆಂಬರ್ 2024, 5:32 IST
Last Updated 12 ಸೆಪ್ಟೆಂಬರ್ 2024, 5:32 IST
‘ಸಂಗ್ಯಾ ಬಾಳ್ಯಾ’ ಸಣ್ಣಾಟದ ಕಾರ್ಯಕ್ರಮ (ಸಾಂಕೇತಿಕ ಚಿತ್ರ)
‘ಸಂಗ್ಯಾ ಬಾಳ್ಯಾ’ ಸಣ್ಣಾಟದ ಕಾರ್ಯಕ್ರಮ (ಸಾಂಕೇತಿಕ ಚಿತ್ರ)   

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವೇಳೆ, ಮೂಲಕ ರಂಗಪ್ರಿಯರ ಮನಸೂರೆಗೊಳ್ಳುವ ವೈವಿಧ್ಯಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಕ್ಕೆ ಇಲ್ಲಿನ ರಂಗಾಯಣ ನಿರ್ಧರಿಸಿದೆ.

ಪ್ರತಿ ವರ್ಷ ‘ನವರಾತ್ರಿ ರಂಗೋತ್ಸವ’ ಎಂಬ ಶೀರ್ಷಿಕೆಯಲ್ಲಿ ರಂಗ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ನಿತ್ಯವೂ ಒಂದೊಂದು ನಾಟಕವನ್ನು ಪ್ರದರ್ಶಿಸಲಾಗುತ್ತಿತ್ತು. ಆದರೆ, ಈ ಬಾರಿ ಕೊಂಚ ಬದಲಾವಣೆ ಮಾಡಿಕೊಂಡು ರಂಗಭೂಮಿ ಇತರ ಪ್ರಾಕಾರಗಳ ಮೂಲಕ ರಸದೌತಣ ಉಣಬಡಿಸಲು ಯೋಜಿಸಲಾಗಿದೆ. ಇದಕ್ಕಾಗಿ ಅನುದಾನವನ್ನು ಒದಗಿಸುವಂತೆ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ದಸರಾ ಉದ್ಘಾಟನೆಯ ದಿನದಂದೇ ಸಂಜೆ ರಂಗಾಯಣದಲ್ಲೂ ರಂಗ ವೈಭವ ಕಳೆಕಟ್ಟಲಿದೆ. ಇದಕ್ಕಾಗಿ ಹಲವು ಸಭೆಗಳನ್ನು ನಡೆಸಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸಲಾಗುತ್ತಿದೆ.

ADVERTISEMENT

ಇನ್ನಷ್ಟು ಅರ್ಥಪೂರ್ಣವಾಗಿಸಲು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ವಾಸಿಸುವ ಜನರಿದ್ದಾರೆ. ಮೈಸೂರು ಸೀಮೆಯೊಂದಿಗೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಮೊದಲಾದ ಕಡೆಗಳ ಜನರೂ ವಾಸಿಸುತ್ತಿದ್ದಾರೆ. ಅವರಿಗೆ ಅವರ ತವರು ನೆಲದ ಜನಪದ ರಂಗಪ್ರಾಕಾರವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಒದಗಿಸುವುದಕ್ಕೆ ನಿರ್ಧರಿಸಲಾಗಿದೆ. ಇದರೊಂದಿಗೆ, ಈ ಬಾರಿಯ ನವರಾತ್ರಿಯನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ರಂಗಾಯಣ ಉದ್ದೇಶಿಸಿದೆ.

ಉತ್ಸವದಲ್ಲಿ ರಂಗಭೂಮಿಯ ಸಾಧಕರೊಬ್ಬರಿಗೆ ‘ರಂಗ ಗೌರವ ಪುರಸ್ಕಾರ’ ಪ್ರದಾನ ಮಾಡಲಾಗುತ್ತದೆ. ಯಾರಿಗೆ ಪುರಸ್ಕಾರ ನೀಡಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಏನೇನು ಕಾರ್ಯಕ್ರಮ?: ‘ನಗರದ ರಮಾಗೋವಿಂದ ರಂಗಮಂದಿರ, ಕಿರುರಂಗಮಂದಿರ ಹಾಗೂ ನಟನ ರಂಗಶಾಲೆಯಲ್ಲಿ ನಾಟಕೋತ್ಸವಗಳು ಆಯೋಜನೆಗೊಂಡಿವೆ. ಹೀಗಾಗಿ, ನಾವು ರಂಗಾಯಣದಿಂದ ಈ ಬಾರಿ ‘ಜನಪದ ರಂಗ ಪ್ರಾಕಾರದ ಉತ್ಸವ’ ನಡೆಸಲು ಯೋಜಿಸಿದ್ದೇವೆ. ಇದರಿಂದಾಗಿ ಈ ಬಾರಿಯ ಉತ್ಸವ ವಿಭನ್ನವಾಗಿರಲಿದೆ’ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ವಿಶೇಷ ಕಾರ್ಯಕ್ರಮಗಳಿಗೆ ಈ ಬಾರಿ ಆದ್ಯತೆ ಕೊಡಲಾಗುತ್ತಿದೆ. ದೊಡ್ಡಾಟ, ಶ್ರೀಕೃಷ್ಣಪಾರಿಜಾತ, ಸಂಗ್ಯಾಬಾಳ್ಯದಂತಹ ಸಣ್ಣಾಟ, ಮೂಡಲಪಾಯ ಯಕ್ಷಗಾನ ಪ್ರದರ್ಶನ, ತೊಗಲು ಬೊಂಬೆಯಾಟ, ನೀಲಗಾರರ ಮೇಳ (ಮಂಟೇಸ್ವಾಮಿ ಕುರಿತು ಗೀತೆಗಳ ಪ್ರಸ್ತುತಿ ಕಾರ್ಯಕ್ರಮ), ಕರಾವಳಿ ಯಕ್ಷಗಾನ ಮೊದಲಾದ ಕಾರ್ಯಕ್ರಮಗಳನ್ನು 9 ದಿನಗಳವರೆಗೆ ನಡೆಸಲಾಗುವುದು. ನಿತ್ಯ ಸಂಜೆ 6.30ರಿಂದ 9ರವರೆಗೆ ಭೂಮಿಗೀತ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

ಸತೀಶ್ ತಿಪಟೂರು
ರಂಗಾಯಣದಲ್ಲಿ 9 ದಿನಗಳ ಉತ್ಸವ ವಿವಿಧ ಭಾಗದ ತಂಡಗಳಿಗೆ ಅವಕಾಶ ಸಂಜೆ 6.30ರಿಂದ 9ರವರೆಗೆ ಕಾರ್ಯಕ್ರಮ
‘ಪ್ರಾದೇಶಿಕ ಪ್ರಾತಿನಿಧ್ಯ’
‘ಬಹಳ ವರ್ಷಗಳಿಂದಲೂ ಈ ಪ್ರಾಕಾರದಲ್ಲಿ ಸಾಧನೆ ಮಾಡಿರುವ ಖ್ಯಾತ ಪಾರಂಪರಿಕ ಕಲಾತಂಡಗಳನ್ನು ಇಲ್ಲಿಗೆ ಆಹ್ವಾನಿಸಲಾಗುವುದು. ಇವುಗಳಲ್ಲಿ ಕೆಲವು ಪ್ರಾಕಾರಗಳು ಕೆಲವು ಅಳಿವಿನ ಅಂಚಿನಲ್ಲಿವೆ. ಅವುಗಳಿಗೆ ಕಾರ್ಯಕ್ರಮ ನೀಡಿದರೆ ವೇದಿಕೆ ಒದಗಿಸಿದಂತೆಯೂ ಆಗುತ್ತದೆ; ಆ ಕಲಾವಿದರನ್ನು ಪ್ರೋತ್ಸಾಹಿಸಿದಂತೆಯೂ ಆಗುತ್ತದೆ. ಪ್ರಾದೇಶಿಕವಾಗಿ ಪ್ರಾತಿನಿಧ್ಯವನ್ನೂ ಕೊಡುತ್ತಿದ್ದೇವೆ. ಶೀಘ್ರದಲ್ಲೇ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಗುವುದು’ ಎಂದು ಸತೀಶ್ ತಿಪಟೂರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.