ADVERTISEMENT

‘ಪುಷ್ಪ ಪಾರಿಜಾತ’ ಸಂಗೀತ ನಾಟಕ ಪ್ರದರ್ಶನ

ರಂಗಾಯಣ ಕಲಾವಿದರಿಂದ ಹೊಸ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 13:58 IST
Last Updated 18 ಅಕ್ಟೋಬರ್ 2019, 13:58 IST
ಮೈಸೂರಿನ ರಂಗಾಯಣ ಪ್ರಯೋಗಿಸಿರುವ ‘ಪುಷ್ಪ ಪಾರಿಜಾತ’ ನಾಟಕದ ‍ಪೋಸ್ಟರ್‌ನ್ನು ನಿರ್ದೇಶಕ ಸಂಜಯ್‌ ಉಪಾಧ್ಯಾಯ ಶುಕ್ರವಾರ ಬಿಡುಗಡೆಗೊಳಿಸಿದರು. ಅನುವಾದಕ ಸದಾಶಿವ ಗರುಡ (ಅಣ್ಣಯ್ಯ), ರಂಗಾಯಣ ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ರಂಗನಿರ್ದೇಶಕ ಚಿದಂಬರ ರಾವ್‌ ಜಂಬೆ, ಕಲಾವಿದ ಪ್ರಶಾಂತ್ ಹಿರೇಮಠ್ ಇದ್ದಾರೆ
ಮೈಸೂರಿನ ರಂಗಾಯಣ ಪ್ರಯೋಗಿಸಿರುವ ‘ಪುಷ್ಪ ಪಾರಿಜಾತ’ ನಾಟಕದ ‍ಪೋಸ್ಟರ್‌ನ್ನು ನಿರ್ದೇಶಕ ಸಂಜಯ್‌ ಉಪಾಧ್ಯಾಯ ಶುಕ್ರವಾರ ಬಿಡುಗಡೆಗೊಳಿಸಿದರು. ಅನುವಾದಕ ಸದಾಶಿವ ಗರುಡ (ಅಣ್ಣಯ್ಯ), ರಂಗಾಯಣ ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ರಂಗನಿರ್ದೇಶಕ ಚಿದಂಬರ ರಾವ್‌ ಜಂಬೆ, ಕಲಾವಿದ ಪ್ರಶಾಂತ್ ಹಿರೇಮಠ್ ಇದ್ದಾರೆ   

ಮೈಸೂರು: ರಂಗಾಯಣ ವತಿಯಿಂದ ಹಿಂದಿ ಮೂಲದ ‘ಹರ್‌ಸಿಂಗಾರ್‌’ ಕನ್ನಡ ಅನುವಾದದ ‘ಪುಷ್ಪ ಪಾರಿಜಾತ’ ಸಂಗೀತ ಪ್ರಧಾನ ವಾರಾಂತ್ಯ ನಾಟಕವನ್ನು ಪ್ರಯೋಗಿಸಲಾಗಿದ್ದು, ಪ್ರದರ್ಶನಕ್ಕೆ ಸಿದ್ಧವಾಗಿದೆ.

ಮೊದಲ ಪ್ರದರ್ಶನವು ಅ. 20ರಂದು ಸಂಜೆ 6.30ಕ್ಕೆ ಭೂಮಿಗೀತ ಸಭಾಂಗಣದಲ್ಲಿ ನಡೆಯಲಿದೆ. ನಾಟಕವನ್ನು ಉತ್ತರ ಭಾರತದ ಪ್ರಸಿದ್ಧ ರಂಗಕರ್ಮಿ ಸಂಜಯ್‌ ಉಪಾಧ್ಯಾಯ ನಿರ್ದೇಶಿಸಿದ್ದಾರೆ. ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಡಿಐಜಿ ಆಗಿ ಕಾರ್ಯನಿರ್ವಹಿಸಿದ್ದ ಶ್ರೀಕಾಂತ್ ಕಿಶೋರ್ ಅವರ ‘ಹರ್‌ಸಿಂಗಾರ್’ ನಾಟಕವನ್ನು ಸದಾಶಿವ ಗರುಡ (ಅಣ್ಣಯ್ಯ) ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

‘ಬಡದಂಪತಿಯನ್ನು ಕೇಂದ್ರೀಕರಿಸಿರುವ ನಾಟಕವು ಬಡತನ, ಬವಣೆ, ಮಾನವೀಯ ಮೌಲ್ಯಗಳ ಸುತ್ತಲೂ ಹೆಣೆದುಕೊಂಡಿದೆ. ಬದುಕಿನ ಕಷ್ಟಗಳನ್ನು ಒಂದೆಡೆ ಸಮೀಕರಿಸುವ ಕೆಲಸವನ್ನು ನಾಟಕದ ಮೂಲಕ ಮಾಡಲಾಗಿದೆ. ಇದು ಸಂಗೀತ ಪ್ರಧಾನ ನಾಟಕವಾಗಿದ್ದು, ರಂಗಪ್ರಿಯರ ಮನಗೆಲ್ಲಲಿದೆ’ ಎಂದು ನಿರ್ದೇಶಕ ಸಂಜಯ್‌ ಉಪಾಧ್ಯಾಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಇದು ರೂಪಾಂತರ ನಾಟಕವಲ್ಲ. ಇದು ಭಾಷಾಂತರ. ಎಲ್ಲ ಪಾತ್ರಗಳು, ಪ್ರದೇಶಗಳ ಹೆಸರುಗಳನ್ನು ಮೂಲದಲ್ಲಿ ಇರುವಂತೆಯೇ ಉಳಿಸಿಕೊಳ್ಳಲಾಗಿದೆ. ಉತ್ತರ ಕರ್ನಾಟಕದ ಕನ್ನಡ ಸೊಗಡನ್ನು ಬಳಸಿಕೊಳ್ಳಲಾಗಿದೆ ಎಂದರು.

ರಂಗಾಯಣದ ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ‘ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಐತ – ಪೀಂಚಲು ದಂಪತಿಯಂತೆ, ‘ಪುಷ್ಪ ಪಾರಿಜಾತ’ ನಾಟಕದ ಹರಬಿಸನ – ಹರಬಿಸನಿ ದಂಪತಿ ನಾಟಕದಲ್ಲಿ ಗಮನಸೆಳೆಯುತ್ತಾರೆ. ಸ್ತ್ರೀ – ಪುರುಷ ಸಂಬಂಧಗಳು ಯಾಂತ್ರೀಕೃತಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಂಬಂಧಗಳಿಗೆ ಗೌರವ ತಂದುಕೊಡುವಲ್ಲಿ ಯಶಸ್ವಿಯಾಗುತ್ತಾರೆ’ ಎಂದು ಹೇಳಿದರು.

ಟಿಕೆಟ್‌ಗೆ ₹ 50 ನಿಗದಿಪಡಿಸಲಾಗಿದೆ. ಆನ್‌ಲೈನ್ ಮೂಲಕವೂ ಟಿಕೆಟ್ ಕಾಯ್ದಿರಿಸಬಹುದು ಎಂದು ತಿಳಿಸಿದರು.

ಎಚ್.ಕೆ.ದ್ವಾರಕನಾಥ್ ನಾಟಕ ವಿನ್ಯಾಸ ಮಾಡಿದ್ದಾರೆ. ಸಿಗ್ಮಾ ಉಪಾಧ್ಯಾಯ ವಸ್ತ್ರವಿನ್ಯಾಸ, ಅಭಿಷೇಕ್ ಚೌಧರಿ ನೃತ್ಯ ಸಂಯೋಜನೆ, ಕೃಷ್ಣ ನಾರ್ಣಕಜೆ ಬೆಳಕಿನ ವಿನ್ಯಾಸ, ಎಂ.ಎಸ್.ಗೀತಾ ರಂಗ ನಿರ್ವಹಣೆ, ಕೆ.ಆರ್.ನಂದಿನಿ ಸಹ ನಿರ್ದೇಶನ, ಸಂಗೀತ ಸಾಂಗತ್ಯದಲ್ಲಿ ಡಿ.ರಾಮು ಕ್ಲಾರಿಯೋನೆಟ್, ಸಮೀರರಾವ್ ಕೊಳಲು, ರಾಮಚಂದ್ರ ಹಡಪದ, ಅರವಿಂದ ಕುಮಾರ್, ಆರ್.ಸಿ.ಧನಂಜಯ, ಸುಬ್ರಹ್ಮಣ್ಯ ಮೈಸೂರು, ಎಸ್‌.ಲಾಸ್ಯ ಇದ್ದಾರೆ ಎಂದು ಮಾಹಿತಿ ನೀಡಿದರು.

ಅನುವಾದಕ ಸದಾಶಿವ ಗರುಡ (ಅಣ್ಣಯ್ಯ), ರಂಗ ನಿರ್ದೇಶಕ ಚಿದಂಬರ ರಾವ್ ಜಂಬೆ, ರಂಗಾಯಣ ಕಲಾವಿದ ಪ್ರಶಾಂತ್ ಹಿರೇಮಠ್ ಹಾಗೂ ರಂಗಾಯಣ ಕಲಾವಿದರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.