
ಮೈಸೂರು: ಹೊಯ್ಸಳರ ಕಾಲದ ಬಹುಭಾಷಾ ಶಾಸನವನ್ನು ನಗರದ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಹಿರಿಯ ಸಂಶೋಧಕ ಸಿ.ಎ.ಶಶಿಧರ ಮತ್ತು ತಂಡ ಪತ್ತೆ ಹಚ್ಚಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕೆ.ಬೆಟ್ಟಹಳ್ಳಿಯಲ್ಲಿನ ಮಹಾಲಕ್ಷ್ಮಿ ದೇವಾಲಯದಲ್ಲಿ ಸಿಕ್ಕಿರುವ ಶಾಸನ ಕ್ರಿ.ಶ.12ನೇ ಶತಮಾನಕ್ಕೆ ಸೇರಿದ್ದು, ಹೊಯ್ಸಳ ದೊರೆ ಒಂದನೇ ನರಸಿಂಹನ ಕಾಲದಲ್ಲಿ ಕೆತ್ತಲಾಗಿದೆ.
‘2 ಅಡಿ ಅಗಲ, 2.5 ಅಡಿ ಉದ್ದವಿರುವ ಶಾಸನವು ಬಿಳಿಕಣಶಿಲೆಯದಾಗಿದ್ದು, ಕನ್ನಡ, ತಮಿಳು, ಸಂಸ್ಕೃತ ಭಾಷೆಯಲ್ಲಿ 9 ಸಾಲುಗಳನ್ನು ಬರೆಯಲಾಗಿದೆ. ಕನ್ನಡ– ತಮಿಳು ಭಾಷಾ ಬಾಂಧವ್ಯದ ಕುರುಹಾಗಿದೆ. ನಿವೃತ್ತ ಶಿಕ್ಷಕ ಮಹಾದೇವೇಗೌಡ ಅವರು ನೀಡಿದ ಮಾಹಿತಿ ಮೇರೆಗೆ ಸಂಶೋಧನೆ ನಡೆಸಲಾಯಿತು’ ಎಂದು ಸಂಶೋಧಕ ಸಿ.ಎ.ಶಶಿಧರ ‘ಪ್ರಜಾವಾಣಿ’ಗೆ ತಿಳಿಸಿದರು.
ನರಸಿಂಹನ ದಂಡನಾಯಕ ಕಾರಿಕುಡಿ ತಿಲ್ಲೈಕೂತಾಂಡಿ, ಶ್ರೀಯಾದವ ನಾರಾಯಣ ಚತುರ್ವೇದಿ ಮಂಗಲ ಎಂದು ಕರೆಯಲಾಗುತ್ತಿದ್ದ ಕೆರೆ ತೊಣ್ಣೂರಿನ ಕೃಷ್ಣ ದೇಗುಲದಲ್ಲಿ ನಡೆಯುವ ಉತ್ಸವ, ಆಚರಣೆಗಳಿಗೆ ಬೆಟ್ಟಹಳ್ಳಿ ಸೀಮೆಯನ್ನು ಕೊಡುಗೆಯಾಗಿ ನೀಡಲಾಗಿದೆಯೆಂದು ಹೇಳುತ್ತದೆ.
‘ತಮಿಳರೊಂದಿಗೆ ಕನ್ನಡಿಗರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದನ್ನು ಶಾಸನ ಸೂಚಿಸುತ್ತದೆ. ಹೊಯ್ಸಳರಿಗೆ ದಂಡನಾಯಕರು ತಮಿಳರೇ ಆಗಿದ್ದರು’ ಎಂದು ಶಶಿಧರ ಹೇಳಿದರು.
‘ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರಮೋಹನ್, ಕೇಂದ್ರದ ಯೋಜನಾ ನಿರ್ದೇಶಕರಾದ ಪ್ರೊ.ಎನ್.ಎಂ.ತಳವಾರ್ ಮಾರ್ಗದರ್ಶನದಲ್ಲಿ ಬಿ.ಪವಿತ್ರಾ, ಛಾಯಾಗ್ರಾಹಕರಾದ ರಮೇಶ್ ಪಟೇಲ್, ಶಶಿಕುಮಾರ್ ತಂಡವು ಶಾಸನದ ಪಡಿಯಚ್ಚನ್ನು ತೆಗೆದುಕೊಂಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.