ADVERTISEMENT

ಮೈಸೂರು | ಲಾಕ್‌ಡೌನ್‌ಗೂ ಸಿದ್ಧ: ಸಹಕಾರಕ್ಕೂ ಬದ್ಧ

ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮುಸ್ಲಿಂ ಮುಖಂಡರ ಸಭೆಯಲ್ಲಿ ಒಕ್ಕೊರಲ ನಿರ್ಧಾರ

ಡಿ.ಬಿ, ನಾಗರಾಜ
Published 12 ಜುಲೈ 2020, 15:51 IST
Last Updated 12 ಜುಲೈ 2020, 15:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟಲಿಕ್ಕಾಗಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮುಸ್ಲಿಂ ಮುಖಂಡರು ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್‌ಗೆ ಸಜ್ಜಾಗಿದ್ದಾರೆ.

ಗುರುವಾರವೇ ಈ ಕುರಿತಂತೆ ಸ್ಥಳೀಯ ಮುಖಂಡರು ಸಭೆ ನಡೆಸಿದ್ದರು. ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಶನಿವಾರ ಲಾಕ್‌ಡೌನ್‌ ಪ್ರಸ್ತಾವ ಮಾಡಿದ ಬೆನ್ನಿಗೆ, ಭಾನುವಾರ ಮುಸ್ಸಂಜೆ ಮತ್ತೊಮ್ಮೆ ಉದಯಗಿರಿಯ ಕುಬಾ ಮಸೀದಿಯಲ್ಲಿ ಸಭೆ ನಡೆಸಿ ಒಕ್ಕೊರಲ ತೀರ್ಮಾನ ತೆಗೆದುಕೊಂಡಿದ್ದಾರೆ.

ಉದಯಗಿರಿ ವಾರ್ಡ್‌ನ ಪಾಲಿಕೆ ಸದಸ್ಯ, ಕಾಂಗ್ರೆಸ್‌ ಮುಖಂಡ ಅಯೂಬ್‌ಖಾನ್‌ ಹಾಗೂ ಸ್ಥಳೀಯ ಮುಖಂಡ ಚಾಂದ್ ಸಾಬ್‌ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಪಾಲಿಕೆಯ 10ಕ್ಕೂ ಹೆಚ್ಚು ಸದಸ್ಯರು, ಮಸೀದಿಗಳ ಮೌಲ್ವಿಗಳು, ಧಾರ್ಮಿಕ ಮುಖಂಡರು ಸೇರಿದಂತೆ ಮುಸ್ಲಿಂ ಸಮುದಾಯದ 200ಕ್ಕೂ ಹೆಚ್ಚು ಪ್ರಮುಖರು ಭಾಗಿಯಾಗಿದ್ದರು ಎಂಬುದು ಗೊತ್ತಾಗಿದೆ.

ADVERTISEMENT

ಕೋವಿಡ್ ಆಸ್ಪತ್ರೆಯ ವೈದ್ಯ ನಯಾಜ್, ಆರೋಗ್ಯ ಇಲಾಖೆಯ ಪ್ರತಿನಿಧಿಯಾಗಿ ಡಾ.ಸಿರಾಜ್ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಈ ಭಾಗದ ವೈದ್ಯರು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದ್ದಾರೆ.

ಸಭೆಯ ನಿರ್ಧಾರ: ’ಸರ್ಕಾರ, ಜಿಲ್ಲಾಡಳಿತ ಘೋಷಿಸುವ ಲಾಕ್‌ಡೌನ್‌ಗೆ ಸಂಪೂರ್ಣ ಸಹಕಾರ ನೀಡುವುದು. ಮನೆ–ಮನೆಗೆ ತೆರಳಿ ಎಲ್ಲರೂ ಕೋವಿಡ್‌ ತಪಾಸಣೆಗೆ ಒಳಗಾಗುವಂತೆ ನೋಡಿಕೊಳ್ಳುವುದು. ಜಿಲ್ಲಾಡಳಿತದ ಸಹಕಾರದೊಂದಿಗೆ ಸೋಮವಾರದಿಂದಲೇ ರಾಜೀವ್‌ ನಗರದ ಆ್ಯಂಡೊಲಸ್ ಶಾಲೆಯನ್ನು ಆಸ್ಪತ್ರೆಯಾಗಿ ಪರಿವರ್ತಿಸಿ, ಚಿಕಿತ್ಸೆ ಆರಂಭಿಸಲು ಬೇಕಾದ ಸಹಕಾರ ಒದಗಿಸುವ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು‘ ಎಂದು ಪಾಲಿಕೆ ಸದಸ್ಯ ಅಯೂಬ್ ಖಾನ್ ’ಪ್ರಜಾವಾಣಿ‘ಗೆ ತಿಳಿಸಿದರು.

’ಜನರು ಕೋವಿಡ್‌ ಪರೀಕ್ಷೆಗೆ ಒಳಗಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಎನ್‌.ಆರ್.ಕ್ಷೇತ್ರದ ಪಾಲಿಕೆ ಸದಸ್ಯರೇ ಹೊತ್ತುಕೊಂಡರು. ಫರೂಖಿಯಾ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ತಾಜ್ ಮೊಹಮದ್ ಖಾನ್ ತಮ್ಮ ಸಂಸ್ಥೆಯ ಕಟ್ಟಡ ಬಳಸಿಕೊಳ್ಳುವ ಜೊತೆ, ಸ್ವಯಂಸೇವಕರಾಗಿ ಸಿಬ್ಬಂದಿಯನ್ನು ಬಳಸಿಕೊಳ್ಳುವಂತೆ ಸಭೆಗೆ ತಿಳಿಸಿದರು‘ ಎಂದು ಹೇಳಿದರು.

ನಿರ್ಲಕ್ಷ್ಯದ ಪರಮಾವಧಿ: ’ನಿರ್ಲಕ್ಷ್ಯದಿಂದ ಈಗಾಗಲೇ ಸೋಂಕು ಹಲವರಿಗೆ ಹಬ್ಬಿದೆ. ಸಾವು ಸಂಭವಿಸಿದೆ. ಇನ್ಮುಂದೆ ಅದಕ್ಕೆ ಆಸ್ಪದ ಕೊಡಬಾರದು‘ ಎಂದು ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಯಿತು ಎಂಬುದು ಮೂಲಗಳಿಂದ ತಿಳಿದು ಬಂದಿದೆ.

’ಆಶಾ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ನಮ್ಮ ಆರೋಗ್ಯ ರಕ್ಷಣೆಗಾಗಿಯೇ ಮನೆ ಬಾಗಿಲಿಗೆ ಬರುತ್ತಾರೆ. ಆ ಸಂದರ್ಭ ಅನಗತ್ಯ ಗೊಂದಲ ಸೃಷ್ಟಿಸಬೇಡಿ. ಅವರಿಗೆ ಸಹಕಾರ ಕೊಡಿ. ಇದರ ಜವಾಬ್ದಾರಿಯನ್ನು ಸ್ಥಳೀಯ ಮುಖಂಡರೇ ಹೊತ್ತು ಸುಸೂತ್ರವಾಗಿ ನಿಭಾಯಿಸಬೇಕು ಎಂಬ ಸೂಚನೆಯನ್ನು ಸಭೆಯಲ್ಲಿ ನೀಡಲಾಯಿತು‘ ಎಂದು ಅಯೂಬ್‌ಖಾನ್ ಹೇಳಿದರು.

ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಯಾಗಲಿ: ’ನಮ್ಮ ವಾರ್ಡ್‌ನಲ್ಲಿ ಕೊಳೆಗೇರಿ ಹೆಚ್ಚಿದೆ. ಚಿಕ್ಕ ಮನೆಗಳ ಸಂಖ್ಯೆಯೇ ಹೆಚ್ಚು. ಜನಸಾಂದ್ರತೆಯೂ ಹೆಚ್ಚಿದೆ. ಈಗಾಗಲೇ ಸುಭಾಷ್‌ನಗರದಲ್ಲಿ ಸೋಂಕು ಹೆಚ್ಚಾಗಿದೆ. ತುರ್ತಾಗಿ ಲಾಕ್‌ಡೌನ್‌ ಘೋಷಣೆಯಾಗಬೇಕಿದೆ. ಅದೂ ಕಟ್ಟುನಿಟ್ಟಗಿ ಜಾರಿಯಾಗಬೇಕಿದೆ‘ ಎನ್ನುತ್ತಾರೆ ಪಾಲಿಕೆಯ ಸದಸ್ಯ ಆರೀಫ್ ಹುಸೇನ್.

’ಸೋಂಕು ಹರಡುವಿಕೆ ಹೆಚ್ಚುತ್ತಿದ್ದಂತೆ ಮಿರಾಜ್ ಮಸೀದಿ, ಅಬೂಬಕರ್ ಮಸೀದಿಯನ್ನು ಭಾನುವಾರದಿಂದಲೇ ಬಂದ್ ಮಾಡಿದ್ದೇವೆ. ಉಳಿದ ಮಸೀದಿಗಳನ್ನು ಸೋಮವಾರ ಬಂದ್ ಮಾಡುತ್ತೇವೆ. ಜಿಲ್ಲಾಡಳಿತ, ಸರ್ಕಾರ ಘೋಷಿಸುವ ಲಾಕ್‌ಡೌನ್‌ಗೆ ಸಂಪೂರ್ಣ ಸಹಕಾರ ನೀಡುತ್ತೇವೆ‘ ಎಂದು ತಿಳಿಸಿದರು.

ಲಾಕ್‌ಡೌನ್ ಅನಿವಾರ್ಯ. ಸ್ಥಳೀಯರಿಗೂ ಮನವರಿಕೆ ಮಾಡಿಕೊಟ್ಟಿದ್ದೇವೆ. ಜಿಲ್ಲಾಧಿಕಾರಿಯೂ ಸ್ಪಂದಿಸಿದ್ದಾರೆ. ನಾವೂ ಸಹ ಸಹಕರಿಸುವಂತೆ ಜನರಿಗೆ ತಿಳಿ ಹೇಳುತ್ತಿದ್ದೇವೆ - ತಸ್ನೀಂ, ಮೇಯರ್

ಲಾಕ್‌ಡೌನ್ ಘೋಷಣೆ ಚರ್ಚೆಯ ಹಂತದಲ್ಲಿದೆ. ಜಿಲ್ಲಾಡಳಿತ, ಸರ್ಕಾರ ನಿರ್ಧಾರ ಪ್ರಕಟಿಸಿದರೆ ಕಂಟೈನ್‌ಮೆಂಟ್‌ ಜೋನ್, ಸೋಂಕು ನಿವಾರಕ ಸಿಂಪಡಣೆಯ ಕ್ರಮ ಜರುಗಿಸುತ್ತೇವೆ- ಗುರುದತ್ತ ಹೆಗಡೆ, ಪಾಲಿಕೆ ಆಯುಕ್ತ

ಸೀಲ್‌ಡೌನ್‌ಗೆ ಸಿದ್ಧತೆ ನಡೆದಿದೆ. ಜನರೂ ಸಿದ್ಧರಾಗಿದ್ದಾರೆ. ಆದೇಶ ಬಂದೊಡನೆ ಕಾರ್ಯಗತಗೊಳ್ಳಲಿದೆ. ಅಗತ್ಯ ಸಿಬ್ಬಂದಿಯೂ ನಮ್ಮಲ್ಲಿದೆ- ಡಾ.ಎ.ಎನ್.ಪ್ರಕಾಶ್‌ಗೌಡ, ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.