ADVERTISEMENT

ಮೈಸೂರು: ಚೇತರಿಕೆ ಹಾದಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ

ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ವಸ್ತುಗಳ ಬೆಲೆ ಏರಿಕೆ; ವಿಲ್ಲಾಗಳಿಗೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 9:39 IST
Last Updated 13 ಏಪ್ರಿಲ್ 2022, 9:39 IST
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣಗೊಂಡಿರುವ ಖಾಸಗಿ ಬಡಾವಣೆ
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣಗೊಂಡಿರುವ ಖಾಸಗಿ ಬಡಾವಣೆ   

ಮೈಸೂರು: ಕೋವಿಡ್‌ನಿಂದಾಗಿ ಎರಡು ವರ್ಷಗಳಿಂದ ನಲುಗಿದ್ದ ರಿಯಲ್‌ ಎಸ್ಟೇಟ್‌ ಉದ್ಯಮ ಈಗ ಚೇತರಿಕೆ ಹಾದಿಯಲ್ಲಿ ಸಾಗುತ್ತಿದೆ. ಆದರೆ, ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಹಾಗೂ ಬಿಲ್ಡರ್‌ಗಳು ತತ್ತರಿಸಿದ್ದಾರೆ.

ರಾಜಧಾನಿ ಬೆಂಗಳೂರು ನಂತರದ ಮಹಾನಗರಗಳ ಪೈಕಿ ಮೈಸೂರು ಪ್ರಮುಖ ಸ್ಥಾನದಲ್ಲಿದ್ದು, ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣವಿದೆ. ಹೀಗಾಗಿ, ಮೈಸೂರು ಸುತ್ತಲಿನ ಪ್ರದೇಶಗಳಲ್ಲಿ ಖಾಸಗಿ ಬಡಾವಣೆಗಳು ನಾಯಿಕೊಡೆಗಳಂತೆ ತಲೆಎತ್ತುತ್ತಿವೆ.

ಮುಡಾದಿಂದಲೂ ಬಡಾವಣೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ನಗರದ ಹೊರ ವರ್ತುಲ ರಸ್ತೆಯನ್ನು ದಾಟಿ ಮುಂದಕ್ಕೂ ಬಡಾವಣೆಗಳು ನಿರ್ಮಾಣಗೊಂಡಿವೆ. ಹುಣಸೂರು ರಸ್ತೆ, ಬನ್ನೂರು ರಸ್ತೆ, ನಂಜನಗೂಡು ರಸ್ತೆ, ಮಾನಂದವಾಡಿ ರಸ್ತೆ, ಬೆಂಗಳೂರು ರಸ್ತೆ ವ್ಯಾಪ್ತಿಯಲ್ಲಿ ನೂರಾರು ಖಾಸಗಿ ಬಡಾವಣೆಗಳು ನಿರ್ಮಾಣಗೊಂಡಿವೆ, ನಿರ್ಮಾಣಗೊಳ್ಳುತ್ತಿವೆ.

ADVERTISEMENT

ಖಾಸಗಿ ಸಂಸ್ಥೆಗಳು ಹತ್ತಾರು ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಿ ಮಾರಾಟ ಮಾಡುತ್ತಿವೆ. ವಿಲ್ಲಾಗಳಿಗೂ ಜನರಿಂದ ಬೇಡಿಕೆ ಬರುತ್ತಿದೆ. ಆದರೆ, ಅಪಾರ್ಟ್‌ಮೆಂಟ್ ನಿರ್ಮಾಣ, ಫ್ಲ್ಯಾಟ್ ಖರೀದಿ ಪ್ರಮಾಣ ಮೈಸೂರಿನಲ್ಲಿ ಕಡಿಮೆ.

ಹೊರವರ್ತುಲ ರಸ್ತೆ ಭಾಗದಲ್ಲಿ ಬರುವ ಸಾತಗಳ್ಳಿ, ಅಂಚೆ ಸಾತಗಳ್ಳಿ, ಪೊಲೀಸ್ ನಗರ, ಸರ್ದಾರ್ ವಲ್ಲಭಬಾಯಿ ನಗರ, ಲಾಲ್‌ ಬಹದ್ದೂರ್ ಶಾಸ್ತ್ರಿ ನಗರ, ಲಲಿತಾದ್ರಿಪುರ, ದಡದಹಳ್ಳಿ, ವಿಮಾನನಗರ, ಜ್ಞಾನಭಾರತಿ, ಜೆ.ಪಿ.ನಗರ, ದಟ್ಟಗಳ್ಳಿ, ಶ್ರೀರಾಂಪುರ, ಹಿನಕಲ್, ಬೆಳವಾಡಿ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿವೆ.

ಶ್ರೀರಾಂಪುರ ಹಾಗೂ ಬೋಗಾದಿ ಪಟ್ಟಣ ಪಂಚಾಯಿತಿ, ಹೂಟಗಳ್ಳಿ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದರಿಂದ ಈ ಭಾಗದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ಮತ್ತಷ್ಟು ಬೆಳವಣಿಗೆ ಕಾಣುವ ಸಾಧ್ಯತೆ ಇದೆ. ಈಗಾಗಲೇ ಇಲವಾಲ ವ್ಯಾಪ್ತಿಯಲ್ಲಿ ಅನೇಕ ಬಡಾವಣೆಗಳು ಅಭಿವೃದ್ಧಿಗೊಂಡಿವೆ.

‘ಕೋವಿಡ್ ಸಂದರ್ಭದಲ್ಲಿ ನಿವೇಶನ, ಮನೆ, ಫ್ಲ್ಯಾಟ್ ಖರೀದಿ ಪ್ರಕ್ರಿಯೆಗಳಿಗೆ ತಡೆಬಿದ್ದಿತ್ತು. ಲಾಕ್‌ಡೌನ್ ಸಡಿಲಿಕೆ ಬಳಿಕ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ದೊರೆತಿದ್ದರಿಂದ ಸ್ವಲ್ಪ ಚೇತರಿಕೆ ಕಂಡಿತ್ತು. ಎಲ್ಲ ಹಂತದ ಲಾಕ್‌ಡೌನ್‌ ತೆರವು ಬಳಿಕ ಉದ್ಯಮ ಸುಧಾರಣೆ ಕಾಣಲಾರಂಭಿಸಿತ್ತು. ಆದರೆ, ನಿರ್ಮಾಣ ಚಟುವಟಿಕೆಗೆ ಬೇಕಿರುವ ವಸ್ತುಗಳ ಬೆಲೆಗಳು ಹೆಚ್ಚಾಗಿದ್ದರಿಂದ ತೀವ್ರ ಸಮಸ್ಯೆ ಎದುರಿಸುವಂತಾಗಿದೆ’ ಎಂದು ಮೂನ್‌ ಬ್ರೈಟ್‌ ಪ್ರೈವೇಟ್‌ ಲಿಮಿಟೆಡ್‌ ಮಾಲೀಕ ಭರತ್‌ ಧನರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಮೆಂಟ್, ಕಬ್ಬಿಣದ ಬೆಲೆ ಹೆಚ್ಚಾಗಿದೆ. ಆಲ್ಟ್ರಾಟೆಕ್ ಸಿಮೆಂಟ್ ಮೂಟೆಗೆ ₹385ರಿಂದ ₹490ಕ್ಕೆ ಹೆಚ್ಚಾಗಿತ್ತು. ಈಗ ₹420ರಿಂದ ₹450 ಆಜುಬಾಜಿದೆ. ಗುಣಮಟ್ಟದ ಕಬ್ಬಿಣ ಟನ್‌ಗೆ ₹70 ಸಾವಿರದಿಂದ ₹95 ಸಾವಿರಕ್ಕೆ ಹೆಚ್ಚಾಗಿದೆ. ಈ ಹಿಂದೆ ಕಟ್ಟಡ ನಿರ್ಮಿಸಲು ಪ್ರತಿ ಚದರಡಿಗೆ ₹2 ಲಕ್ಷ ವಿಧಿಸುತ್ತಿದ್ದೆವು. ಈಗ ₹2.50 ಲಕ್ಷದಿಂದ ₹2.80ರವರೆಗೂ ದರ ನಿಗದಿಪಡಿಸಲಾಗಿದೆ. ಬೆಲೆಗಳು ಕಡಿಮೆ ಇದ್ದಾಗ ಮನೆ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡ ಬಿಲ್ಡರ್‌ಗಳಿಗೆ ಈಗ ಸಮಸ್ಯೆಯಾಗಿದೆ. ಕೈಯಿಂದ ಹಣ ಹಾಕಿ ಮನೆ ನಿರ್ಮಿಸುವಂತಾಗಿದೆ. ಏರಿಳಿತಗಳ ನಡುವೆ ಉದ್ಯಮ ಸಾಗುತ್ತಿದೆ’ ಎಂದರು.

‘ಬಹುತೇಕ ಖರೀದಿದಾರರು ಬ್ಯಾಂಕ್‌ ಮೂಲಕ ವ್ಯವಹಾರ ಮಾಡಲು ಬಯಸುತ್ತಾರೆ. ಹೀಗಾಗಿ, ಕಪ್ಪುಹಣದ ಹರಿವು ಕಡಿಮೆ’ ಎಂದು ತಿಳಿಸಿದರು.

‘ಜೆ.ಪಿ.ನಗರ ಭಾಗದಲ್ಲಿ 4–5 ವರ್ಷಗಳ ಹಿಂದೆ ₹50 ಲಕ್ಷ ಇದ್ದ ನಿವೇಶನದ ದರ ಈಗ ₹75 ಲಕ್ಷಕ್ಕೆ ಏರಿಕೆಯಾಗಿದೆ. ಹೊರವರ್ತುಲ ರಸ್ತೆ ಆಚೆಗೆ ₹30 ಲಕ್ಷದಿಂದ ₹35 ಲಕ್ಷ ಇದ್ದ ನಿವೇಶನ ಈಗ ₹50 ಲಕ್ಷಕ್ಕೆ ಏರಿಕೆಯಾಗಿದೆ. ಹೀಗೆ ಬೆಲೆ ಹೆಚ್ಚಲು ಬಿಲ್ಡರ್‌ಗಳೇ ಕಾರಣ’ ಎಂದರು.

‘ಬಿಲ್ಡರ್‌ಗಳು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಹಣ ನೀಡಿ ನಿವೇಶನ ಖರೀದಿಸಿ ಮನೆ ನಿರ್ಮಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ನಿವೇಶನದ ಹೆಚ್ಚುವರಿ ಹಣವನ್ನು ಈ ಮೂಲಕ ವಸೂಲಿ ಮಾಡುತ್ತಾರೆ. ಇದರಿಂದ ನಿವೇಶನಗಳ ದರ ಗಗನಕ್ಕೇರುತ್ತಿದ್ದು, ಮಧ್ಯಮ ವರ್ಗದವರು ನಿವೇಶನ ಖರೀದಿಸಲಾರದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ರೇರಾ ಕಾಯ್ದೆ; ಅಕ್ರಮಕ್ಕೆ ಕಡಿವಾಣ: ಸ್ಥಿರಾಸ್ತಿಗಳ ಮೇಲೆ ಹಣ ಹೂಡುವ ವರ ಹಾಗೂ ಕೊಳ್ಳುವವರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ ಜಾರಿಗೊಳಿಸಿದ್ದು, ವಾಣಿಜ್ಯ ಸಂಬಂಧಿ ಅಥವಾ ಜನವಾಸ ಸಂಬಂಧಿ ಕಟ್ಟಡ ನಿರ್ಮಾಣ ಯೋಜನೆಗಳನ್ನು ರೇರಾ ಪ್ರಾಧಿಕಾರದಲ್ಲಿ ನೋಂದಾಯಿ ಸಬೇಕು. ನಿಯಮಾನುಸಾರ ಬಡಾವಣೆ ನಿರ್ಮಿಸಿದ್ದರೆ ಮಾತ್ರ ನೋಂದಣಿ ಮಾಡಲಾಗುತ್ತದೆ. ಹೀಗಾಗಿ, ರೇರಾ ಕಾಯ್ದೆ ಅನುಸಾರ ನೋಂದಣಿಯಾದ ಬಡಾವಣೆಗಳಲ್ಲಿ ಆಸ್ತಿ ಖರೀದಿಸುವುದು ಒಳಿತು. ಈ ಕಾಯ್ದೆ ಜಾರಿಗೊಂಡ ಬಳಿಕ ಅಕ್ರಮ, ಮೋಸ ಮಾಡುವುದಕ್ಕೆ ಸ್ವಲ್ಪ ಮಟ್ಟಿಗೆ ಕಡಿವಾಣ ಬಿದ್ದಿದೆ.

ನಿವೇಶನ ಖರೀದಿಸುವ ಮುನ್ನ ಗಮನಿಸಬೇಕಾದ ಅಂಶಗಳು: ಮುಡಾ ಬಡಾವಣೆ ಅಥವಾ ಸೊಸೈಟಿ ಬಡಾವಣೆಗಳಲ್ಲಿ ನಿವೇಶನ ಖರೀದಿಸುವಾಗ ಹಂಚಿಕೆ, ಪೊಜಿಷನ್ ಸರ್ಟಿಫಿಕೇಟ್, ಟೈಟಲ್ ಡೀಡ್, ಖಾತೆ, ಋಣಭಾರ ಪತ್ರ (ಇಸಿ) ಇದೆಯೇ ಎಂಬುದನ್ನು ಗಮನಿಸಬೇಕು. ಖಾಸಗಿ ಬಡಾವಣೆಗಳಲ್ಲಿ ನಿವೇಶನ ಖರೀದಿಸುವಾಗ, ಬಡಾವಣೆಗೆ ಮುಡಾದಿಂದ ಅನುಮತಿ ಸಿಕ್ಕಿರುವ ಪತ್ರ, ಭೂಪರಿವರ್ತನೆ ಪತ್ರ, ಬಡಾವಣೆಯ ಕಂಪ್ಲೀಟ್ ಡೈಮೆನ್ಶನ್ ರಿಪೋರ್ಟ್ (ಬಡಾವಣೆಯಲ್ಲಿ ಮೂಲಸೌಕರ್ಯ ಕಲ್ಪಿಸಿರುವುದನ್ನು ಗಮನಿಸಿ ಮುಡಾ ನೀಡುವ ಪತ್ರ) ಹಾಗೂ ದಾಖಲೆಗಳನ್ನು ವಕೀಲರ ಬಳಿ ಕೊಟ್ಟು ಪರಿಶೀಲಿಸುವುದು ಮುಖ್ಯ.

‘ನಿರೀಕ್ಷಿಸಿದಷ್ಟು ಚೇತರಿಕೆ ಕಂಡಿಲ್ಲ’: ‘ಕೋವಿಡ್‌ ಬಳಿಕ ನಾವು ನಿರೀಕ್ಷಿಸಿದಷ್ಟು ರಿಯಲ್‌ ಎಸ್ಟೇಟ್‌ ಉದ್ಯಮ ಚೇತರಿಕೆ ಕಂಡಿಲ್ಲ. ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ವಸ್ತುಗಳ ಬೆಲೆಗಳು ಶೇ 30ರಿಂದ 40ರಷ್ಟು ಹೆಚ್ಚಳವಾಗಿದೆ. ಡೀಸೆಲ್‌, ಪೆಟ್ರೋಲ್‌ ಬೆಲೆ ಏರಿಕೆಯಿಂದಲೂ ರಿಯಲ್‌ ಎಸ್ಟೇಟ್‌ ಉದ್ಯಮದ ಮೇಲೆ ಪರಿಣಾಮ ಬೀರಿದೆ’ ಎಂದು ಬಿಲ್ಡರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಮೈಸೂರು ಕೇಂದ್ರದ ಅಧ್ಯಕ್ಷ ಆರ್‌.ರಘುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರವು ಮಾರ್ಚ್‌ವರೆಗೆ ಸ್ಟ್ಯಾಂಪ್‌ ಡ್ಯುಟಿಯನ್ನು ಶೇ 10ರಷ್ಟು ಕಡಿಮೆ ಮಾಡಿತ್ತು. ಅದನ್ನು ಏಪ್ರಿಲ್‌, ಮೇ ತಿಂಗಳವರೆಗೂ ವಿಸ್ತರಿಸಿರುವುದರಿಂದ ಆಸ್ತಿಗಳ ನೋಂದಣಿ ಮತ್ತಷ್ಟು ಹೆಚ್ಚಲಿದೆ. ಉದ್ಯಮ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಂಘ ಹಾಗೂ ಕ್ರೆಡಾಯ್‌ ಪದಾಧಿಕಾರಿಗಳ ಜತೆ ಚರ್ಚಿಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದರು.

‘ಮನೆ ನಿರ್ಮಾಣ: ಶೀಘ್ರ ಪ್ರಸ್ತಾವ’: ‘ನಗರದ ಆಂದೋಲನ ವೃತ್ತ ಹಾಗೂ ವಿಜಯನಗರದಲ್ಲಿ ಎರಡು ಬೆಡ್‌ ರೂಂ ಒಳಗೊಂಡ ಮನೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಈ ಪ್ರಸ್ತಾವವನ್ನು ಶೀಘ್ರದಲ್ಲೇ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗುವುದು’ ಎಂದು ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಂದೋಲನ ವೃತ್ತದ ಬಳಿ 3 ಎಕರೆ 20 ಗುಂಟೆ ಹಾಗೂ ವಿಜಯನಗರದಲ್ಲಿ 4 ಎಕರೆ 20 ಗುಂಟೆ ಜಾಗದಲ್ಲಿ ಸುಮಾರು 950 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರತಿ ಮನೆಗೆ ₹ 38 ಲಕ್ಷ ನಿಗದಿಪಡಿಸಲಾಗಿದೆ’ ಎಂದರು.

‘ಒಂದು ಬೆಡ್‌ ರೂಂ ಒಳಗೊಂಡ ಸಾವಿರ ಮನೆಗಳನ್ನು ಸಾತಗಳ್ಳಿ ಬಳಿ ನಿರ್ಮಿಸಲು ಮುಂದಾಗಿದ್ದೆವು. ಪ್ರತಿ ಮನೆಗೆ ₹16.5 ಲಕ್ಷ ನಿಗದಿಪಡಿಸಿದ್ದೆವು. ಆದರೆ, ಆ ಜಾಗದಲ್ಲಿ ನಾಲೆ ಇರುವುದರಿಂದ ಆಕ್ಷೇಪ ವ್ಯಕ್ತವಾಗಿದೆ. ಬೇರೆಡೆ ಜಾಗ ಹುಡುಕುತ್ತಿದ್ದೇವೆ’ ಎಂದು ಹೇಳಿದರು.

‘ದಾರಿಪುರ, ವಾಜಮಂಗಲ ಹಾಗೂ ಬಸವನಹಳ್ಳಿಯಿಂದ 3 ಕಿ.ಮೀ ದೂರದಲ್ಲಿ ಬಡಾವಣೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದೇವೆ. 50:50 ಅನುಪಾತದಲ್ಲಿ ಬಡಾವಣೆ ನಿರ್ಮಿಸಲಾಗುತ್ತದೆ. ಆದರೆ, ಜನರು ಸಾಮೂಹಿಕವಾಗಿ ಭೂಮಿ ನೀಡಲು ಮುಂದೆ ಬರುತ್ತಿಲ್ಲ. ಕನಿಷ್ಠ 100 ಎಕರೆ ಜಾಗ ಸಿಕ್ಕರೆ ಒಳ್ಳೆಯ ಬಡಾವಣೆ ನಿರ್ಮಿಸುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.