ಮೈಸೂರು: 2024ರಲ್ಲಿ ಸಾಂಸ್ಕೃತಿಕ ನಗರಿಯು ಅಪೂರ್ವ ಸಮಾವೇಶ, ಉತ್ಸವಗಳಿಗೆ ಸಾಕ್ಷಿಯಾಯಿತು. ಕೇಂದ್ರ ಸಂಸ್ಕೃತಿ ಸಚಿವಾಲಯವು ಇದೇ ಮೊದಲ ಬಾರಿಗೆ ‘ದಾಸ ಪರಂಪರೆಯ ಸಂಗೀತೋತ್ಸವ– ಮೈಸೂರು ಸಂಗೀತ ಸುಗಂಧ’ ಆಯೋಜಿಸಿದ್ದು ವಿಶೇಷ.
‘ಯುವ ದಸರಾ’ದಲ್ಲಿ ಸಂಗೀತ ದಂತಕಥೆಗಳಾದ ಎ.ಆರ್.ರೆಹಮಾನ್ ಹಾಗೂ ಇಳಯರಾಜ ಸಂಗೀತದ ಹೊನಲಿನಲ್ಲಿ ಮೈಸೂರು ಮಿಂಚಿತು. ಸಾಲು ಸಾಲು ರಂಗೋತ್ಸವಗಳು, ಸಂಗೀತ ಕಛೇರಿಗಳು ನಡೆದವು.
ಅ.3ರಿಂದ 12ರವರೆಗೆ ನಾಡಹಬ್ಬ ಮೈಸೂರು ದಸರಾ ಅದ್ದೂರಿಯಾಗಿ ನಡೆಯಿತು. ಸಂವಿಧಾನವನ್ನು ಬಿಂಬಿಸುವ ಕಾರ್ಯಕ್ರಮಗಳಿದ್ದವು. ‘ಡ್ರೋನ್ ಶೋ’ ವಿಶೇಷ ಆಕರ್ಷಣೆಯಾಗಿತ್ತು. ನಗರದೊಳಗೆ ನಡೆಯುತ್ತಿದ್ದ ದಸರಾ ಸಾಂಸ್ಕೃತಿಕ ಉತ್ಸವ ಉಳಿದೆಡೆಗೂ ಹಬ್ಬಿತು. ಯುವ ದಸರಾ ಹೊರವಲಯದ ಉತ್ತನಹಳ್ಳಿಯ ಬಯಲಿಯಲ್ಲಿ ಆಯೋಜನೆಗೊಂಡಿತು. ಅಲ್ಲಿನ ಸಂಗೀತದ ಸಿಹಿಗೆ ಇರುವೆಗಳಂತೆ ಜನರು ಮುತ್ತಿದ್ದರು. ಯುವ ಸಂಭ್ರಮ, ಜಾನಪದೋತ್ಸವ, ರೈತ ದಸರೆ ರಂಗನ್ನು ಹೆಚ್ಚಿಸಿದ್ದವು.
ಮೈಸೂರಿನ ರಾ.ವಿಶ್ವೇಶ್ವರನ್ ಹಾಗೂ ಸಹನಾ ವೇಣುಗೋಪಾಲ್ ಅವರಿಗೆ ಸಂಗೀತ ನಾಟಕ ಅಕಾಡೆಮಿ ಹಾಗೂ ಪಿರಿಯಾಪಟ್ಟಣದ ವಿಮರ್ಶಕ ಕೆ.ವಿ.ನಾರಾಯಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗರಿ ಮುಡಿಗೇರಿತು. ಐವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿತು.
ಸಂಕ್ರಾಂತಿಗೆ ನಡೆಯುತ್ತಿದ್ದ ರಂಗಾಯಣದ ‘ಬಹುರೂಪಿ’ ರಾಷ್ಟ್ರೀಯ ರಂಗೋತ್ಸವವು ಮಾರ್ಚ್‌ನಲ್ಲಿ ಜರುಗಿತು. ‘ರಂಗ ವಸಂತ’ವು ರಂಗೋತ್ಸವಗಳಿಗೆ ಮುನ್ನುಡಿ ಬರೆಯಿತು. ಅಲ್ಲದೆ, ಒಂದೂವರೆ ವರ್ಷದಿಂದ ಖಾಲಿಯಾಗಿದ್ದ ರಂಗಾಯಣ ನಿರ್ದೇಶಕರ ಹುದ್ದೆಗೆ ಸತೀಶ್ ತಿಪಟೂರು ನೇಮಕಗೊಂಡರು.
ಜೆಎಸ್‌ಎಸ್ ಸಂಗೀತ ಸಮ್ಮೇಳನ ಮೇಳೈಸಿದರೆ, ವಾಣಿವಿಲಾಸ ಮೊಹಲ್ಲಾದ ‘ಪಾರಂಪರಿಕ ಸಂಗೀತೋತ್ಸವ’ ಕಳೆಗಟ್ಟಿತ್ತು. ವರ್ಷದ ಕೊನೆಯಲ್ಲಿ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಪ್ರಯುಕ್ತ ಆಯೋಜಿಸಿದ್ದ ಸಂಗೀತ ಸಂಜೆ ಜನರನ್ನು ಆಕರ್ಷಿಸಿತು.
ನ.8: ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ‘ಮೈಸೂರು ಸಂಗೀತ ಸುಗಂಧ–2024’–ರಾಷ್ಟ್ರೀಯ ಸಂಗೀತ ಉತ್ಸವ ನ.8ರಿಂದ 10ರವರೆಗೆ ನಡೆಯಿತು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು. ಕರ್ನಾಟಕ ಶಾಸ್ತ್ರೀಯ ಸಂಗೀತದ ವಾಗ್ಗೇಯಕಾರರಾದ ಪುರಂದರದಾಸ ಕನಕದಾಸರ ಸಂಗೀತ ಕೃತಿಗಳು ಸೇರಿದಂತೆ ದಾಸ ಸಾಹಿತ್ಯ ಕೃತಿಗಳನ್ನು ನೂರಾರು ಸಂಗೀತಗಾರರು ಪ್ರಸ್ತುತಪಡಿಸಿದರು. ಆರ್.ಕೆ.ಪದ್ಮನಾಭ ಮಲ್ಲಾಡಿ ಸಹೋದರರು ಮೈಸೂರು ಮಂಜುನಾಥ್– ನಾಗರಾಜ್ ಸಂದೀಪ್ ನಾರಾಯಣನ್ ಪ್ರಮುಖ ಆಕರ್ಷಣೆಯಾಗಿದ್ದರು.
ಜುಲೈ 6: ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ 8ನೇ ಆವೃತ್ತಿಯ ‘ಮೈಸೂರು ಸಾಹಿತ್ಯ ಸಂಭ್ರಮ’ ನಡೆಯಿತು. ಚಿದಾನಂದ್ ಎಸ್.ನಾಯಕ್ ಅವರನ್ನು ಸನ್ಮಾನಿಸಲಾಯಿತು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರೆ ನಟ ರಮೇಶ್ ಅರವಿಂದ್ ಸುರೇಶ್ ಹೆಬ್ಳೀಕರ್ ಆಕರ್ಷಣೆಯಾಗಿದ್ದರು.
ನ.30 ಕಾವೇರಿ ಭೋರ್ಗರೆಯುತ್ತ ಧುಮ್ಮಿಕ್ಕುವ ಚುಂಚನಕಟ್ಟೆಯಲ್ಲಿ ನ.30 ಡಿ.1ರಂದು ಜಲಪಾತೋತ್ಸವ ನಡೆಯಿತು. ವರ್ಣರಂಜಿತ ಬೆಳಕಿನಲ್ಲಿ ಕಾವೇರಿ ಕಂಗೊಳಿಸಿದಳು. ಸಂಗೀತ ಕಾರ್ಯಕ್ರಮವೂ ನಡೆಯಿತು.
ಖ್ಯಾತ ಸರೋದ್ ವಾದಕ ರಾಜೀವ ತಾರನಾಥ ರಂಗಕರ್ಮಿ– ಆಯಿಷ್‌ನ ಮೊದಲ ನಿರ್ದೇಶಕ ನ.ರತ್ನ ಚಿಂತಕ ಮಹೇಶ್ ಚಂದ್ರಗುರು ಜಾನಪದ ಕಲಾವಿದ ಕಂಸಾಳೆ ಕುಮಾರಸ್ವಾಮಿ ಯೋಗ ಗುರು ಶರತ್ ಜೋಯಿಸ್ ಚಿಂತಕ ಎಂ.ಎಸ್.ವೇಣುಗೋಪಾಲ್ ಅರ್ಥಶಾಸ್ತ್ರಜ್ಞ ಪ್ರೊ.ವಿ.ಕೆ. ನಟರಾಜ್ ಮೃತಪಟ್ಟರು.
ಮಾರ್ಚ್ 6: ಮೈಸೂರಿನ ವೀಣಾವಾದಕ ರಾ.ವಿಶ್ವೇಶ್ವರನ್ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ ‘ರತ್ನ’ ಪ್ರಶಸ್ತಿಗೆ ಭಾಜನರಾದರು.
ಸಹನಾಗೆ ಯುವ ಪುರಸ್ಕಾರ: ಮೈಸೂರಿನ ವೀಣಾವಾದಕಿ ಎಸ್.ವಿ.ಸಹನಾ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ 2022ನೇ ಸಾಲಿನ ‘ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ’ ದೊರೆಯಿತು.
ಜ.11: ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ‘ಲಕ್ಷ್ಮಿನಾರಾಯಣ ವಿಶ್ವ ಸಂಗೀತ ಉತ್ಸವ’.
ಜ.21: ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ 5ನೇ ಆವೃತ್ತಿಯ ‘ಮೈಸೂರು ಸಾಹಿತ್ಯ ಉತ್ಸವ’.
ಜ.26: ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ‘ಮೈಸೂರು ಉತ್ಸವ.
ಫೆ.3: ‘ಮೈಸೂರು ಸಿನಿಮಾ ಸೊಸೈಟಿ ಹಾಗೂ ಭಾರತೀಯ ಚಿತ್ರ ಸಾಧನ ಸಂಸ್ಥೆಯು ಫೆ.3 ಮತ್ತು 4ರಂದು ಕೆಎಸ್‌ಒಯುನಲ್ಲಿ ‘ಪರಿದೃಶ್ಯ’ ಅಂತರರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳ ಪ್ರದರ್ಶನ.
ಫೆ.6: ಸುತ್ತೂರಿನಲ್ಲಿ ಫೆ.6ರಿಂದ 12ರವರೆಗೆ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವ.
ಫೆ.12ರಿಂದ 16: ಸಂಚಲನ ಮೈಸೂರು ವತಿಯಿಂದ ಕಿರುರಂಗಮಂದಿರದಲ್ಲಿ ಮಕ್ಕಳ ನಾಟಕೋತ್ಸವ.
ಫೆ.22: ಎಸ್‌ಜೆಸಿಇಯಲ್ಲಿ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ‘ಯುವಬಿಂಬ ಉತ್ಸವ’.
ಫೆ.28: ‘ಅಭಿಯಂತರರು’ ತಂಡದಿಂದ ರಾಷ್ಟ್ರೀಯ ರಂಗ ಉತ್ಸವ.
ಮಾರ್ಚ್ 7: ‘ಇವ ನಮ್ಮವ ಇವ ನಮ್ಮವ’ ಪರಿಕಲ್ಪನೆಯಲ್ಲಿ ರಂಗಾಯಣದಿಂದ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’.
ಜೂನ್ 20: ‘ಪರಿವರ್ತನ ರಂಗಸಮಾಜ’, ‘ಕಲಾಸುರುಚಿ ಮೈಸೂರು’, ‘ಕುತೂಹಲಿ’ ಹಾಗೂ ‘ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್’ ಸಹಯೋಗದಲ್ಲಿ ‘ಮೈಸೂರು ವಿಜ್ಞಾನ ನಾಟಕೋತ್ಸವ’.
ಆ.24: ‘ಬೋಧಿವೃಕ್ಷ ಅಭಿವೃದ್ಧಿ ಸಂಸ್ಥೆ’, ‘ರಾಜ್ಯ ಜಾನಪದ ಅಕಾಡೆಮಿ’ ‘ಪರಂಜ್ಯೋತಿ ಮಂಟೇಸ್ವಾಮಿ ಒಂದು ಮರುದರ್ಶನ’ ರಾಷ್ಟ್ರೀಯ ವಿಚಾರಸಂಕಿರಣ.
ಅ.3: ರಂಗಾಯಣದಲ್ಲಿ ನವರಾತ್ರಿ ಜನಪದ ರಂಗ ಉತ್ಸವ.
ಅ.26: ರಂಗಾಯಣದಿಂದ ರಂಗಭೂಮಿ ಸಾಧಕರೊಂದಿಗೆ ಸಂವಾದದ ‘ಮಾತಿನ ಮನೆ’ ಕಾರ್ಯಕ್ರಮ.
ಅ.30: ರಂಗಕರ್ಮಿಗಳಾದ ಎಚ್.ಜನಾರ್ಧನ್ (ಜನ್ನಿ), ಡಿ.ರಾಮು, ಶಿಲ್ಪಿ ಅರುಣ್ ಯೋಗಿರಾಜ್, ಡಾ.ಮೈಸೂರು ಸತ್ಯನಾರಾಯಣ, ನೃತ್ಯಗಾರ್ತಿ ಲಲಿತಾರಾವ್ ‘ರಾಜ್ಯೋತ್ಸವ ಪ್ರಶಸ್ತಿ’ಗೆ ಭಾಜನ. ‘ಸುವರ್ಣ ಮಹೋತ್ಸವ’ ಗೌರವಕ್ಕೆ ಈ. ರತಿ ರಾವ್, ಮಡ್ಡೀಕೆರೆ ಗೋಪಾಲ್, ಮೈಸೂರಿನ ಕೆಂಚಯ್ಯ, ಫಜ್ಲು ರೆಹಮಾನ್ ಖಾನ್, ಮಾಲತಿಶ್ರೀ ಪಾತ್ರ.
ನ.15: ವಸುಂಧರಾ ದೊರೆಸ್ವಾಮಿ ಅವರ 50 ವರ್ಷಗಳ ನೃತ್ಯ ಸೇವೆ ಹಾಗೂ 75ನೇ ಜನ್ಮದಿನದ ಪ್ರಯುಕ್ತ ವಸುಂಧರ ಪ್ರದರ್ಶಕ ಕಲೆಗಳ ಕೇಂದ್ರದಿಂದ ‘ವಸುಂಧರೋತ್ಸವ’
ಡಿ.2: ರಾ.ವಿಶ್ವೇಶ್ವರನ್ ಅಧ್ಯಕ್ಷತೆಯಲ್ಲಿ 29ನೇ ಜೆಎಸ್‌ಎಸ್ ಸಂಗೀತ ಸಮ್ಮೇಳನ ಡಿ.2ರಿಂದ 6ರವರೆಗೆ ನಡೆಯಿತು.
ಡಿ.15: ನಟ ಪ್ರಕಾಶ್ ರಾಜ್ ಅವರ ‘ನಿರ್ದಿಗಂತ’ ಸಂಸ್ಥೆಯ ಶಾಲಾರಂಗ ಮಕ್ಕಳ ಹಬ್ಬ’ ಹಾಗೂ ‘ನಿರ್ದಿಗಂತ ರಂಗಹಬ್ಬ’ ನಡೆಯಿತು.
ಡಿ.21: ಅರಮನೆ ಆವರಣದಲ್ಲಿ ‘ಫಲಪುಷ್ಪ ಪ್ರದರ್ಶನ’ಕ್ಕೆ ಚಾಲನೆ.
ಡಿ.26: ನಿರಂತರ ಫೌಂಡೇಶನ್’ ‘ನಿರಂತರ ರಂಗ ಉತ್ಸವ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.