ADVERTISEMENT

ಮೈಸೂರು | ಸಾಹಿತ್ಯ- ಸಿನಿಮಾ ನಡುವಿನ ಸಂಬಂಧ ತೀವ್ರ: ಪ್ರೊ.ರಾಜಪ್ಪ ದಳವಾಯಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 4:13 IST
Last Updated 15 ಫೆಬ್ರುವರಿ 2026, 4:13 IST
<div class="paragraphs"><p>&nbsp;ಪ್ರೊ.ರಾಜಪ್ಪ ದಳವಾಯಿ </p></div>

 ಪ್ರೊ.ರಾಜಪ್ಪ ದಳವಾಯಿ

   

ಮೈಸೂರು: ‘ಸಾಹಿತ್ಯ ಮತ್ತು ಸಿನಿಮಾ ನಡುವಿನ ಸಂಬಂಧ ತೀವ್ರ ಮತ್ತು ನಿರಂತರ’ ಎಂದು ವಿದ್ವಾಂಸ ಪ್ರೊ.ರಾಜಪ್ಪ ದಳವಾಯಿ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಮತ್ತು ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ‘ಸಾಹಿತ್ಯ ಮತ್ತು ಸಿನಿಮಾ’ ಕುರಿತು ಮಾತನಾಡಿದರು.

ADVERTISEMENT

‘ಸಾಹಿತ್ಯವು ಶಬ್ದಗಳ ಮೂಲಕ ಓದುಗರ ಕಲ್ಪನಾ ಲೋಕ ವಿಸ್ತರಿಸಿದರೆ, ಸಿನಿಮಾ ಸಂಗೀತ, ಧ್ವನಿ ಮತ್ತು ದೃಶ್ಯಗಳ ಮೂಲಕ ಕಥೆ ಜೀವಂತಗೊಳಿಸುತ್ತದೆ. ಸಾಹಿತ್ಯವು ಸಿನಿಮಾಗಳಿಗೆ ಮೂಲ ಕಥಾವಸ್ತು ಒದಗಿಸುತ್ತದೆ. ಸಾಹಿತ್ಯ ಕೃತಿ ಆಧರಿಸಿ ಸಿನಿಮಾ ಮಾಡುವಾಗ, ಮೂಲ ಕೃತಿಯ ಸಾರ ಉಳಿಸಿಕೊಳ್ಳುವುದು ಒಂದು ಸವಾಲಿನ ಪ್ರಕ್ರಿಯೆ. ಕನ್ನಡ ಚಿತ್ರರಂಗದಲ್ಲಿ ಸಾಹಿತ್ಯ ಕೃತಿಗಳು ಮತ್ತು ಕಾದಂಬರಿ ಆಧರಿಸಿದ ಚಲನಚಿತ್ರಗಳು ವಿಶೇಷ ಸ್ಥಾನ ಪಡೆದಿದೆ’ ಎಂದರು.

‘ಇಂದು ಪ್ರತಿಯೊಬ್ಬರೂ ಮೊಬೈಲ್ ರೀಲ್ಸ್‌ ಹಿಂದೆ ಬಿದ್ದಿದ್ದಾರೆ. ಹಾಗಾಗಿ ಯಾರಿಗೂ ಸಿನಿಮಾ ಪೂರ್ತಿಯಾಗಿ ನೋಡುವ ವ್ಯವಧಾನ ಇಲ್ಲ. ಸಿನಿಮಾದ ಒಂದೆರಡು ದೃಶ್ಯ ನೋಡಿ ಸಿನಿಮಾ ಚೆನ್ನಾಗಿಲ್ಲ ಎಂಬ ನಿರ್ಧಾರಕ್ಕೆ ಬರುತ್ತಾರೆ. ಕೆಲವರು ಸಿನಿಮಾದ ಪೋಸ್ಟರ್ ನೋಡಿಯೇ ಚೆನ್ನಾಗಿಲ್ಲ ಎಂಬ ಅಭಿಪ್ರಾಯಕ್ಕೆ ಬರುತ್ತಾರೆ. ನಮ್ಮಲ್ಲಿ ಸಿನಿಮಾ ನೋಡುವ ದೃಷ್ಟಿಕೋನ ಬದಲಾಗಬೇಕು’ ಎಂದು ತಿಳಿಸಿದರು.

‘ತಂತ್ರಜ್ಞಾನದ ಆವಿಷ್ಕಾರದಿಂದ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಈ ಹಿಂದೆ ಚಿತ್ರಗಳನ್ನೇ ಬಳಸಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿತ್ತು. ಆ ನಂತರ ಮೂಕಿ ಚಿತ್ರಗಳ ಕಾಲ ಪ್ರಾರಂಭವಾಯಿತು. ಇದೀಗ ಎಐ ಬಳಕೆ ಮಾಡಿಕೊಂಡು ಸಿನಿಮಾ ನಿರ್ಮಾಣ ಮಾಡುವ ಹಂತಕ್ಕೆ ತಂತ್ರಜ್ಞಾನ ಬೆಳೆದಿದೆ’ ಎಂದರು.

ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು, ಪ್ರಾಂಶುಪಾಲ ಪಿ.ಬೆಟ್ಟೇಗೌಡ, ಕನ್ನಡ ವಿಭಾಗದ ಮುಖ್ಯಸ್ಥ ಆರ್.ಗುರುಸ್ವಾಮಿ, ಪ್ರಾಧ್ಯಾಪಕಿ ರುಕ್ಮಿಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.