ADVERTISEMENT

ಮೈಸೂರು: ತೆರಿಗೆ ಪಾವತಿ; ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೊಂದಲ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 31 ಮೇ 2023, 20:30 IST
Last Updated 31 ಮೇ 2023, 20:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಎಂ.ಮಹೇಶ

ಮೈಸೂರು: ನಿವಾಸಿಗಳು ಕಾಲ ಕಾಲಕ್ಕೆ ತೆರಿಗೆಗಳನ್ನು ಪಾವತಿಸಬೇಕು, ಅಭಿವೃದ್ಧಿಗೆ ಕೈಜೋಡಿಬೇಕು, ದಂಡದಿಂದ ತಪ್ಪಿಸಿಕೊಳ್ಳಬೇಕು ಎಂದೆಲ್ಲಾ ಅಧಿಕಾರಿಗಳು ಹೇಳುವುದನ್ನು ಕೇಳಿದ್ದೇವೆ. ಇದಕ್ಕಾಗಿ ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸುತ್ತಾರೆ. ಇಂತಿಷ್ಟು ರಿಯಾಯಿತಿಯನ್ನೂ ನೀಡುವುದೂ ಉಂಟು. ಆದರೆ, ಇಲ್ಲೊಂದು ಬಡಾವಣೆಯಲ್ಲಿ ತೆರಿಗೆ ಕಟ್ಟಿಸಿಕೊಳ್ಳಲು ಅಧಿಕಾರಿಗಳೇ ಕ್ರಮ ಕೈಗೊಳ್ಳದಿರುವ ವಿದ್ಯಮಾನ ನಡೆದಿದೆ.

ಇದು ನಗರದ ಪೊಲೀಸ್ ಲೇಔಟ್ 2ನೇ ಹಂತ ಸರ್ದಾರ್‌ ವಲ್ಲಭಭಾಯಿ ಪಟೇಲ್ ನಗರದ ನಿವಾಸಿಗಳ ಕಥೆ.

ADVERTISEMENT

‘ಇಷ್ಟು ವರ್ಷ ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು (ಮುಡಾ) ಇನ್ಮುಂದೆ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಪಾವತಿಸಿ. ನೀವು ಆ ವ್ಯಾಪ್ತಿಯವರು ಎಂದು ಇತ್ತೀಚೆಗೆ ಹೇಳುತ್ತಿದ್ದಾರೆ. ನಿಮ್ಮ ಬಡಾವಣೆ ನಮಗೆ ಹಸ್ತಾಂತರವೇ ಆಗಿಲ್ಲ. ಹೀಗಾಗಿ ತೆರಿಗೆ ಕಟ್ಟಿಸಿಕೊಳ್ಳಲು ಬರುವುದಿಲ್ಲ ಎಂದು ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯವರು ತಿಳಿಸುತ್ತಿದ್ದಾರೆ. ಇದರಿಂದ ಗೊಂದಲ ನಿರ್ಮಾಣವಾಗಿದೆ’ ಎಂದು ನಿವಾಸಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಹೊರೆಯಾಗುತ್ತದೆ

‘23 ವರ್ಷಗಳಿಂದ ಮುಡಾದವರು ಮನೆ ಕಂದಾಯ ಪಡೆಯುತ್ತಿದ್ದರು. ಮೂರ್ನಾಲ್ಕು ತಿಂಗಳಿಂದ ಗೊಂದಲ ಉಂಟಾಗಿದೆ. ತೆರಿಗೆಯನ್ನು ನಿಗದಿತ ಸಮಯದಲ್ಲಿ ಪಾವತಿಸಿದರೆ ನಮಗೂ ಅನುಕೂಲ. ಬಾಕಿ ಉಳಿದರೆ ಮುಂದೆ ಸ್ಥಳೀಯ ಸಂಸ್ಥೆಯವರು ಬಡ್ಡಿ ಸಹಿತ ವಸೂಲಿ ಮಾಡಲು ಬಂದಾಗ ನಮಗೆ ಹೊರೆಯಾಗುತ್ತದೆ. ಇದಕ್ಕೆ ಅಧಿಕಾರಿಗಳು ಪರಿಹಾರ ಕಲ್ಪಿಸಬೇಕು’ ಎಂದು ನಿವಾಸಿ ಮನು ಒತ್ತಾಯಿಸಿದರು.

‘ಬಡಾವಣೆಗೆ ಕಸ ಸಂಗ್ರಹಿಸುವುದಕ್ಕೆ ಸ್ಥಳೀಯ ಸಂಸ್ಥೆಯ ವಾಹನವೂ ಬರುವುದಿಲ್ಲ. ಬಡಾವಣೆಯ ನಾವೇ ಸಮಾನ ಮನಸ್ಕರ ವೇದಿಕೆ ರಚಿಸಿಕೊಂಡು ಮನೆ ಮನೆಯಿಂದ ಹಣ ಸಂಗ್ರಹಿಸಿ, ಗುತ್ತಿಗೆದಾರರೊಬ್ಬರನ್ನು ಹಿಡಿದು ಅವರ ವಾಹನ ಬಳಸಿ ತ್ಯಾಜ್ಯ ವಿಲೇವಾರಿ ಮಾಡಿಸುತ್ತಿದ್ದೇವೆ. ಏನೇ ಅಭಿವೃದ್ಧಿ ಕಾರ್ಯವನ್ನು ಕೇಳಿದರೂ, ‘ನಿಮ್ಮದು ಖಾಸಗಿ ಬಡಾವಣೆ’ ಎಂದು ಅಧಿಕಾರಿಗಳು ಹೇಳುತ್ತಾರೆ. ಶಾಸಕ ಜಿ.ಟಿ.ದೇವೇಗೌಡ ಅವರಿಂದಲೂ ಸ್ಪಂದನೆ ದೊರೆಯುತ್ತಿಲ್ಲ. ನಮ್ಮಂತಹ ಬಡಾವಣೆಗಳಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಬೇಕು. ಅಲ್ಲಿ ಸಂಬಂಧಿಸಿದ ಅಧಿಕಾರಿಗಳೆಲ್ಲರೂ ಪಾಲ್ಗೊಳ್ಳಬೇಕು. ಆಗ, ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ’ ಎನ್ನುತ್ತಾರೆ ನಿವಾಸಿಗಳು.

ಹಣ ಸಂಗ್ರಹಿಸಿ

‘ಸಾವಿರಕ್ಕೂ ಹೆಚ್ಚು ಮನೆಗಳಿರುವ ಈ ಬಡಾವಣೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸಣ್ಣಪುಟ್ಟ ಕೆಲಸವನ್ನು ನಿವಾಸಿಗಳಿಂದ ಹಣ ಸಂಗ್ರಹಿಸಿ ವೇದಿಕೆಯಿಂದಲೇ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

‘ನಿಮ್ಮ ಬಡಾವಣೆಯನ್ನು ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ. ಈಗ ಮನೆ ಕಂದಾಯ ಕಟ್ಟದೇ ಇದ್ದರೂ ತೊಂದರೆ ಇಲ್ಲ. ಮುಂದೆ ಅವರೇ ಕಟ್ಟಿಸಿಕೊಳ್ಳುತ್ತಾರೆ ಬಿಡಿ ಎಂದು ಮುಡಾದವರು ಹೇಳುತ್ತಾರೆ! ಸರಿಯಾದ ಮಾಹಿತಿಯೇ ನಮಗೆ ಸಿಗುತ್ತಿಲ್ಲ’ ಎಂಬುದು ನಿವಾಸಿಗಳ ದೂರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿ.ಪುಷ್ಪಲತಾ, ‘ಆ ಬಡಾವಣೆಯಲ್ಲಿ ಎಸ್‌ಟಿಪಿ ಕೂಡ ಇಲ್ಲ. ರಸ್ತೆ, ಚರಂಡಿ, ಉದ್ಯಾನಗಳ ಅಭಿವೃದ್ಧಿ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಇದರಿಂದಾಗಿ ನಾವು ಹಸ್ತಾಂತರ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೂಲಸೌಲಭ್ಯಗಳನ್ನು ಕಲ್ಪಿಸಿದರೆ ಹಸ್ತಾಂತರ ಸಾಧ್ಯವಾಗಲಿದೆ. ಆಗ ತೆರಿಗೆ ಪಡೆದುಕೊಳ್ಳಬಹುದಾಗಿದೆ’ ಎಂದು ಹೇಳಿದರು.

ಪ್ರತಿಕ್ರಿಯೆಗೆ ‘ಮುಡಾ’ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್‌ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.