ತಿ.ನರಸೀಪುರ: ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳಿಗೆ ಇಲಾಖಾ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ, ಬಗೆಹರಿಸಬೇಕು. ಜನರನ್ನು ಪದೇ ಪದೇ ಅಲೆಸಬಾರದು. ಸಮಸ್ಯೆಗಳನ್ನು ಪರಿಶೀಲಿಸಿ, ಆದ್ಯತೆ ಮೇರೆ ಬಗೆಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.
ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅವರು ಜನ ಸಂಪರ್ಕ ಸಭೆ ನಡೆಸಿದರು. ಕೆಂಪಯ್ಯನಹುಂಡಿ, ಹೊಸ ಕೆಂಪಯ್ಯನಹುಂಡಿ, ರಾಯರ ಹುಂಡಿ, ಇಂಡವಾಳು ಗ್ರಾಮದಲ್ಲಿ ಕಂದಾಯ ಅದಾಲತ್, ಪೋಡಿ ಅದಾಲತ್ ಹಾಗೂ ಇ-ಸ್ವತ್ತು ಅದಾಲತ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
ಕೆಂಪಯ್ಯನಹುಂಡಿ ಗ್ರಾಮದಲ್ಲಿ 3 ಸರ್ವೆ ನಂಬರ್ ಬರಲಿದ್ದು, 6 ಜನರಿಗೆ ಆರ್‌ಟಿಸಿ ವಿತರಿಸಲಾಗುತ್ತಿದೆ. ಮತ್ತೊಂದು ಸರ್ವೆ ನಂಬರ್‌ನ ಪ್ರಕ್ರಿಯೆ ಮುಗಿದು ಪೋಡಿಗಾಗಿ ಸರ್ವೆ ವಿಭಾಗಕ್ಕೆ ಹೋಗಿದೆ. ಸ್ವಲ್ಪ ದಿನದಲ್ಲಿ ಅವರಿಗೂ ಆಟ್‌ಟಿಸಿ ಸಿಗಲಿದೆ ಎಂದು ಯತೀಂದ್ರ ತಿಳಿಸಿದರು.
ದರಖಾಸ್ತು ಜಮೀನಿನಲ್ಲಿ ಅರ್ಹರಿಗೆಲ್ಲರಿಗೂ ಪೋಡಿ ಮಾಡಿಕೊಡಲಾಗಿದೆ. ಕಂದಾಯ ಇಲಾಖೆಯಲ್ಲಿ ಸಮಸ್ಯೆಗಳಿದ್ದರೆ, ಅರ್ಜಿ ಸ್ವೀಕರಿಸಿ, ಪರಿಶೀಲಿಸಿ ಅಗತ್ಯ ಕ್ರಮ ಆಗಲಿದೆ. ಆದರೆ ಆಯಾಯ ಗ್ರಾಮದ ಗ್ರಾಮಸ್ಥರು ಮಾತ್ರವೇ ಅರ್ಜಿ ಸಲ್ಲಿಸಬೇಕು ಎಂದರು.
ಇಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಜಿಲ್ಲಾ ಅಥವಾ ತಾಲ್ಲೂಕು ಮಟ್ಟದಲ್ಲಿ ಬಗೆಹರಿಸಲು ಕೂಡಲೇ ಕ್ರಮವಹಿಸಲಾಗುವುದು. ದೊಡ್ಡ ಸಮಸ್ಯೆಗಳಿದ್ದಲ್ಲಿ ಅಥವಾ ಸರ್ಕಾರದ ಅನುದಾನದ ಅಗತ್ಯವಿದ್ದಲ್ಲಿ ಅವುಗಳನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸಲು ಕಳುಹಿಸಿ ಕೊಡುವುದಾಗಿ ತಿಳಿಸಿದರು.
ನೂರಾರು ಮಂದಿ ಸಭೆಯಲ್ಲಿ ಹಾಜರಾಗಿ ತಮ್ಮ ಅಹವಾಲು ಸಲ್ಲಿಸಿದರು. ಸಾರ್ವಜನಿಕರ ಕುಂದುಕೊರತೆಗಳನ್ನು ಸಾವದಾನದಿಂದ ಆಲಿಸಿದ ಯತೀಂದ್ರ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮತ್ತೆ ಕೆಲವು ಅರ್ಜಿಗಳಿಗೆ ಕಾಲಮಿತಿಯಲ್ಲಿ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಹಶೀಲ್ದಾರ್ ಟಿ.ಜೆ.ಸುರೇಶಾಚಾರ್ ಮಾತನಾಡಿ, ಪೋಡಿ ದುರಸ್ತಿ ಪ್ರಕ್ರಿಯೆಯನ್ನು ಸರ್ಕಾರ ಸರಳೀಕರಣಗೊಳಿಸಿದೆ. ಈಗ ಸುಮಾರು 303 ಸರ್ವೆ ನಂಬರ್ ಅನ್ನು ತಾಲೂಕಿನಲ್ಲಿ ದುರಸ್ತಿ ಮಾಡಲಾಗುತ್ತಿದೆ. ಆ ಪೈಕಿ ಹೊಸಕೋಟೆ ವ್ಯಾಪ್ತಿಯ ಕೆಂಪಯ್ಯನಹುಂಡಿ ಸರ್ವೆ ನಂ 147ಕ್ಕೆ ಸಂಬಂಧಿಸಿ ದುರಸ್ತಿ ಮಾಡಿ ಆರ್‌ಟಿಸಿ ವಿತರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಟಾಪರ್ ಆದ ಮೂವರು ವಿದ್ಯಾರ್ಥಿನಿಯರಿಗೆ ತಲಾ 10 ಸಾವಿರ ರೂ.ಗಳ ಪ್ರೋತ್ಸಾಹ ಧನವನ್ನು ಯತೀಂದ್ರ ವಿತರಿಸಿದರು.
ಪಿ ಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆಂಪಯ್ಯನಹುಂಡಿ ಮಹದೇವಣ್ಣ, ಜಿ.ಪಂ ಮಾಜಿ ಸದಸ್ಯ ಕೆ.ಮಹದೇವ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರಕಾಶ್, ಕೆಪಿಸಿಸಿ ಕಾರ್ಯದರ್ಶಿ ವರುಣಾ ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ದೇಗೌಡ, ಹೊಸಕೋಟೆ ಗ್ರಾ.ಪಂ ಅಧ್ಯಕ್ಷೆ ನಂದಿನಿ ರಾಜೇಂದ್ರ, ಮಾಜಿ ಅಧ್ಯಕ್ಷ ಆನಂದ್, ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಕಾರ್ಯದರ್ಶಿ ಪುಟ್ಟರಾಜು, ಕುರುಬರ ಸಂಘದ ಅಧ್ಯಕ್ಷ ಮನ್ನೇ ಹುಂಡಿ ಮಹೇಶ್, ತುಂಬಲ ಪ್ರಶಾಂತ್ ಬಾಬು, ಎನ್. ಅನಿಲ್ ಕುಮಾರ್, ಅಂದಾನಿ, ಮಾಧು, ಸೋಮು, ಮಲ್ಲಿಕಾರ್ಜುನಸ್ವಾಮಿ, ಎಂ.ರಮೇಶ್, ನಂಜುಂಡಸ್ವಾಮಿ, ಅಮ್ಜದ್ ಖಾನ್, ಗುರುಸ್ವಾಮಿ, ಚೇತನ್, ಬಸವರಾಜು, ಕಿರಗಸೂರು ಆರ್. ಮಹದೇವ್, ಇಂಡವಾಳು ಲೋಕೇಶ್, ಬಸವರಾಜು, ಆರ್.ಪಿ.ಹುಂಡಿ ನಾಗರಾಜು ಇನ್ನಿತರರು ಹಾಜರಿದ್ದರು.
ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲು ಸೂಚನೆ
ಕೆಂಪಯ್ಯನಹುಂಡಿ ಗ್ರಾಮದ ಜೆಕೆಎಂ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ಪೂರೈಕೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಯತೀಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಾಗ ಯತೀಂದ್ರ ಈ ಸೂಚನೆ ನೀಡಿದರು. ಅಲ್ಲದೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ₹60 ಲಕ್ಷ ಅನುದಾನ ನೀಡಲಾಗಿದೆ. ಮತ್ತೆ ₹60 ಲಕ್ಷ ಅನುದಾನಕ್ಕೆ ಬೇಡಿಕೆ ಬಂದಿದೆ. ಅಭಿವೃದ್ಧಿಗೆ ಬೇಕಾದಷ್ಟು ಅನುದಾನಕೊಡಿಸುವುದಾಗಿ ಅವರು ಭರವಸೆ ನೀಡಿದರು. ಹಳೇ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಸರ್ಕಾರಿ ಬಸ್‌ಗಳು ನಿಲುಗಡೆ ಮಾಡದಿರುವ ಬಗ್ಗೆ ವಿದ್ಯಾರ್ಥಿಗಳು ದೂರು ನೀಡಿರುವುದಕ್ಕೆ ಸ್ಪಂದಿಸಿ ಬಸ್ ನಿಲುಗಡೆ ಮಾಡಲು ಚಾಲಕರಿಗೆ ನಿರ್ದೇಶನ ನೀಡುವಂತೆ ಕೆಎಸ್ಆರ್‌ಟಿಸಿ ಅಧಿಕಾರಿ ಶಿವಶಂಕರಪ್ಪ ಅವರಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.