ADVERTISEMENT

ಆರ್‌ಎಂಪಿ ಕ್ವಾಟರ್ಸ್‌: ₹ 29.20 ಲಕ್ಷ ಮೊತ್ತದ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 12:46 IST
Last Updated 16 ಡಿಸೆಂಬರ್ 2018, 12:46 IST

ಮೈಸೂರು: ನಗರದ ಆರ್‌ಎಂಪಿ ಕ್ವಾಟರ್ಸಿನ ಎರಡು ಮನೆಗಳಲ್ಲಿ ₹ 29,20,400 ಮೊತ್ತದ ಚಿನ್ನಾಭರಣ ಕಳವಾಗಿದೆ.

ಕ್ವಾಟರ್ಸಿನ ಬ್ರಹ್ಮಪುತ್ರ ಕಟ್ಟಡದ ಸಾಧನಾ ಪ್ರಸಾದ್ ಎಂಬವರ ಮನೆಯಲ್ಲಿ ₹ 19,10,400 ಮೌಲ್ಯದ ಚಿನ್ನಾಭರಣ ಹಾಗೂ ₹ 2 ಲಕ್ಷ ನಗದು, ಹಾಗೂ ರಾವ್‌ ಎಂಬವರ ಮನೆಯಲ್ಲಿ ₹ 10,10,000 ಮೌಲ್ಯದ ಚಿನ್ನಾಭರಣ ಹಾಗೂ ₹ 60 ಸಾವಿರ ನಗದನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ಸಾಧನಾ ‍ಪ್ರಸಾದ್ ಅವರು ಡಿ. 13ರಂದು ಬೆಂಗಳೂರಿಗೆ ಹೋಗಿದ್ದರು. ಡಿ. 14ರಂದು ಮನೆಯಲ್ಲಿ ಕಳ್ಳತನವಾಗಿದೆ ಎಂದು ನೆರೆಮನೆಯ ನಿವಾಸಿಗಳು ಕರೆ ಮಾಡಿ ತಿಳಿಸಿದ್ದು, ಮನೆಗೆ ಬಂದು ನೋಡಿದಾಗ ಮನೆಯಲ್ಲಿನ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ಮನೆಯಲ್ಲಿದ್ದ 597 ಗ್ರಾಂ ತೂಕದ ಚಿನ್ನಾಭರಣ ಹಾಗೂ 200 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳು ಹಾಗೂ ₹ 2 ಲಕ್ಷ ಹಣ ಕಾಣೆಯಾಗಿರುವುದು ತಿಳಿದುಬಂದಿದೆ.

ADVERTISEMENT

ಇದೇ ಮಾದರಿಯಲ್ಲಿ ಇದೇ ಕಟ್ಟಡದ ನಿವಾಸಿ ರಾವ್‌ ಅವರ ಮನೆಯಲ್ಲೂ ಕಳ್ಳತನವಾಗಿದೆ. ರಾವ್‌ ಅವರು ಡಿ. 13ರಂದು ತಿರುಪತಿಗೆ ಹೋಗಿದ್ದರು. ಮನೆಯಲ್ಲಿ ಕಳ್ಳತನವಾಗಿರುವುದಾಗಿ ನೆರೆಮನೆಯವರು ಡಿ. 14ರಂದು ತಿಳಿಸಿದ್ದು, ಮನೆಗೆ ಬಂದು ನೋಡಿದಾಗ 158 ಗ್ರಾಂ ತೂಕದ ಚಿನ್ನಾಭರಣ, 5.7 ಕೆ.ಜಿ ತೂಕದ ಬೆಳ್ಳಿ ಪದಾರ್ಥ ಹಾಗೂ ₹ 60 ಸಾವಿರ ನಗದು ಕಳವಾಗಿರುವುದು ಕಂಡುಬಂದಿದೆ.

ಎರಡೂ ಮನೆಗಳ ಮುಖ್ಯ ಬಾಗಿಲನ್ನು ಮುರಿದು ಒಂದೇ ಮಾದರಿಯಲ್ಲಿ ಕಳ್ಳತನ ಮಾಡಲಾಗಿದೆ. ಅಲ್ಲದೇ, ಮನೆಯ ಮೂಲ ದಾಖಲೆಗಳನ್ನೂ ಕಳ್ಳರು ಚಲ್ಲಾಪಿಲ್ಲಿಯಾಗಿ ಹರಡಿದ್ದಾರೆ. ಎರಡೂ ಪ್ರಕರಣಗಳಲ್ಲೂ ಒಂದೇ ಕಳ್ಳರ ತಂಡದ ಕೈವಾಡ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಶೋಕಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.