ADVERTISEMENT

ಮೈಸೂರು: ವಿವಿಧ ಕಾಮಗಾರಿಗಳಿಗೆ ಚಾಲನೆ

ನೀರಿನ ಸಮಸ್ಯೆ ನಿವಾರಣೆಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ: ಜಿ.ಟಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 15:55 IST
Last Updated 23 ಜೂನ್ 2019, 15:55 IST
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರಟಿಕ್ಯಾತನಹಳ್ಳಿ ಗ್ರಾಮದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸಂಸದ ಪ್ರತಾಪ್ ಸಿಂಹ, ಜಿಲ್ಲಾ‌ ಪಂಚಾಯಿತಿ ಸದಸ್ಯ ಬೀರೀಹುಂಡಿ ಬಸವಣ್ಣ ಇದ್ದಾರೆ
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರಟಿಕ್ಯಾತನಹಳ್ಳಿ ಗ್ರಾಮದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸಂಸದ ಪ್ರತಾಪ್ ಸಿಂಹ, ಜಿಲ್ಲಾ‌ ಪಂಚಾಯಿತಿ ಸದಸ್ಯ ಬೀರೀಹುಂಡಿ ಬಸವಣ್ಣ ಇದ್ದಾರೆ   

ಮೈಸೂರು: ‘ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ‌ನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ‌ಸ್ಥಾಪಿಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಕ್ಷೇತ್ರ ವ್ಯಾಪ್ತಿಯ ಮರಟಿಕ್ಯಾತನಹಳ್ಳಿ ಗ್ರಾಮದಲ್ಲಿ ಭಾನುವಾರ ₹ 12 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಸಚಿವರು, ‘ಈಗಾಗಲೇ ಅಭಿವೃದ್ಧಿಗೆ ಸಾಕಷ್ಟು ‌ಅನುದಾನ‌ ನೀಡಿದ್ದೇನೆ. ರಸ್ತೆ, ಚರಂಡಿ ಇನ್ನಿತರೆ ಕಾಮಗಾರಿಗಳಿಗೆ ಹಾಗೂ ಕ್ಷೇತ್ರದಲ್ಲಿ ಯಾರೂ ಕೂಡ ಕುಡಿಯುವ ನೀರಿಗೆ ಸಮಸ್ಯೆ ಎನ್ನಬಾರದು ಎಂದು ಹಲವು ಕ್ರಮ ಕೈಗೊಂಡಿರುವೆ’ ಎಂದರು.

ಇದೇ ಸಂದರ್ಭ ಗ್ರಾಮದಲ್ಲಿ ₹ 46 ಲಕ್ಷ ವೆಚ್ಚದ ಗ್ರಾಮ ಪಂಚಾಯಿತಿ ಭವನ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿದರು. ರಾಜೀವ್‌ ಗಾಂಧಿ ಸೇವಾ ಕೇಂದ್ರದ ಕಟ್ಟಡ ಕಾಮಗಾರಿಗೂ ಚಾಲನೆ ನೀಡಿದರು. ಪರಿಶಿಷ್ಟ ಜಾತಿಯವರ ಬೀದಿಗಳಲ್ಲಿ ಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿ, ಶೀಘ್ರದಲ್ಲೇ ಕೆಲಸ ಮುಗಿಸಬೇಕು‌ ಎಂದು‌ ಪಿ.ಡಬ್ಲ್ಯೂ.ಡಿ ಎಂಜಿನಿಯರ್‌ಗೆ ಸೂಚಿಸಿದರು.

ADVERTISEMENT

ಜಯಪುರ ಹೋಬಳಿಯ ಮದ್ದೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಿದರು. ಸೋಲಾರ್ ವಾಟರ್ ಪಂಪ್ಸ್ ಕುಡಿಯುವ ನೀರಿನ ಸರಬರಾಜು ಯೋಜನೆಗೂ ಚಾಲನೆ ನೀಡಿದರು.

ಸಂಸದ ಪ್ರತಾಪ್ ಸಿಂಹ, ಜಿಲ್ಲಾ‌ ಪಂಚಾಯಿತಿ ಸದಸ್ಯ ಬೀರೀಹುಂಡಿ ಬಸವಣ್ಣ, ಮೈಸೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ‌ಅಧಿಕಾರಿ ಲಿಂಗರಾಜಯ್ಯ, ತಹಶೀಲ್ದಾರ್ ಜೆ.ಮಹೇಶ್, ತಾಲ್ಲೂಕು ಮಟ್ಟದ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.