
ನಂಜನಗೂಡು: ಎಚ್.ಡಿ ಕೋಟೆ ರಸ್ತೆ ವಿಸ್ತರಣೆ ಮರ ಕಡಿಯದೇ ಮಾಡಲಾಗುತ್ತಿದೆ, ಇದೇ ಮಾದರಿಯನ್ನು ತಾಲ್ಲೂಕಿನ ಮುದ್ದನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 766ರಲ್ಲಿ ಅನುಸರಿಸಬೇಕು ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆಯ ಪರಶುರಾಮೇಗೌಡ ಹೇಳಿದರು. ತಾಲ್ಲೂಕಿನ ಮುದ್ದಹಳ್ಳಿಯಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಅವರು ಮಾತನಾಡಿದರು.
ಇರುವ ಮರಗಳನ್ನು ಉಳಿಸಿಕೊಂಡು, ಇನ್ನೂ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಮರಗಳನ್ನು ಉಳಿಸಲು ಆದ್ಯತೆ ಕೊಡಿ , ಮುದ್ದನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 766ರಲ್ಲಿ ರಸ್ತೆ ವಿಸ್ತರಣೆಯನ್ನು 98 ಮರ ಕಡಿದು ಮಾಡುವ ಬದಲಿಗೆ ಯೋಜನೆಯನ್ನೇ ರದ್ದುಮಾಡಿ ಎಂದು ಆಗ್ರಹಿಸಿದರು.
ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ ಮಾತನಾಡಿ, ನಗರೀಕರಣದ ಹೆಸರಿನಲ್ಲಿ ಪರಿಸರ ಹಾಳು ಮಾಡುವುದು ಸರಿಯಲ್ಲ. ರಸ್ತೆ ವಿಸ್ತರಣೆ ನೆಪದಲ್ಲಿ ಉಸಿರು ನೀಡುವ ಮರಗಳನ್ನು ತರಿದು ಜೀವಸಂಕುಲಕ್ಕೆ ವಿಷ ಉಣಿಸುವ ಕೆಲಸವನ್ನು ಕೈ ಬಿಟ್ಟು ಮರಗಳನ್ನು ಉಳಿಸಿ. ಸಾವಿರಾರು ಮರಗಳನ್ನು ನೆಟ್ಟು ಮಕ್ಕಳಂತೆ ಸಾಕಿದ ಸಾಲುಮರದ ತಿಮ್ಮಕ್ಕನವರು ನಿಮಗೆ ಆದರ್ಶವಾಗಲಿ ಎಂದು ಹೇಳಿದರು.
ನಗರ್ಲೆ ವಿಜಯಕುಮಾರ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸರ್ವಿಸ್ ರಸ್ತೆ ಮಾಡದೇ ಟೋಲ್ ವಸೂಲಿ ಮಾಡುತ್ತಿದ್ದಾರೆ, ಈ ಹೆದ್ದಾರಿಯಲ್ಲಿ ಬೃಹತ್ ಲಾರಿಗಳಲ್ಲಿ ಅಧಿಕ ಎಂ. ಸ್ಯಾಂಡ್, ಜೆಲ್ಲಿ ಕಲ್ಲು ತುಂಬಿಕೊಂಡು ರಸ್ತೆಯಲ್ಲಿ ಹೋಗುತ್ತಿರುವುದರಿಂದ ಅಪಘಾತಗಳು ಹೆಚ್ಚಾಗಿ ಪ್ರಾಣಾಪಾಯ ಹೆಚ್ಚುತ್ತಿದೆ. ಹೆದ್ದಾರಿ ನಿರ್ಮಿಸಿ ರಸ್ತೆಗಳಲ್ಲಿ ಭಾರಿ ವಾಹನಗಳನ್ನು ನಿಯಂತ್ರಣ ಮಾಡಲು ವಿಫಲವಾಗಿದ್ದರೆ ಎಂದು ಆರೋಪಿಸಿದರು.
ಕೆಆರ್‌ಎಸ್ ಪಕ್ಷದ ಮುಖಂಡ ರವಿಕುಮಾರ್ ಮಾತನಾಡಿ, ಪರಿಸರವನ್ನು ರಕ್ಷಿಸುವುದು ಮತ್ತು ಅಭಿವೃದ್ಧಿ ಮಾಡುವುದು ಹಾಗೂ ದೇಶದ ಅರಣ್ಯ ಮತ್ತು ವನ್ಯಜೀವಿಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ. ಅರಣ್ಯ, ಸರೋವರ, ನದಿಗಳು ಮತ್ತು ವನ್ಯಜೀವಿಗಳೂ ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಹಾಗೂ ಅಭಿವೃದ್ಧಿಪಡಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಇಂದಿನ ಅಭಿವೃದ್ಧಿಗಾಗಿ ನಾವು ಮುಂದಿನ ಪೀಳಿಗೆಯ ಪರಿಸರ ಸಂಪತ್ತನ್ನು ನಾಶಮಾಡುವ ಹಕ್ಕನ್ನು ಹೊಂದಿಲ್ಲ. ಮರಗಳ ನಾಶದಿಂದ ಉಂಟಾಗುವ ತಾಪಮಾನ ಏರಿಕೆ, ಮಾಲಿನ್ಯವು ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಸಾರ್ವಜನಿಕ ಅಹವಾಲು ಸಭೆಯಲ್ಲಿ ಭಾಗವಹಿಸಿದ್ದ ಪರಿಸರ ಕಾರ್ಯಕರ್ತರು, ಡಿಎಸ್ಎಸ್ ಮತ್ತು ರೈತ ಸಂಘದ ಕಾರ್ಯಕರ್ತರು ಒಕ್ಕೊರಲಿನಿಂದ ಯೋಜನೆಯನ್ನು ರದ್ದುಪಡಿಸುವಂತೆ ಆಗ್ರಹಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾತನಾಡಿ, ಸಭೆಯ ತೀರ್ಮಾನವನ್ನು ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು. ಮರಗಳನ್ನು ಉಳಿಸಲು ಪ್ರಯತ್ನ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಪರಿಸರಕ್ಕಾಗಿ ನಾವು ಸಂಘಟನೆಯ ಬಾನು ಪ್ರಶಾಂತ್, ಭಾಗ್ಯ, ಸುಶೀಲಾ, ಸುಗುಣ, ಕಾಮಾಕ್ಷಿ ಗೌಡ, ಗಣೇಶ್, ಬಂಗಾರ ನಾಯಕ, ಸಾರ್ಥಕ್ ಆರ್.ಎಫ್.ಒ. ನಿತಿನ್ , ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.