ADVERTISEMENT

ಆಯಮ್ಮ ಕ್ಯಾನ್ಸರ್ ಇದ್ದಂತೆ, ಎಲ್ಲರನ್ನೂ ಬುಟ್ಟಿಗೆ ಹಾಕೊಳ್ತಾಳೆ: ಡಿ.ರೂಪಾ ಆಡಿಯೊ

ಸಿಂಧೂರಿ ವಿರುದ್ಧ ರೂಪಾ ಮಾಡಿರುವ ಆರೋಪದ ಆಡಿಯೊ ಬಿಡುಗಡೆ ಮಾಡಿದ ಆರ್‌ಟಿಐ ಕಾರ್ಯಕರ್ತ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 12:23 IST
Last Updated 22 ಫೆಬ್ರುವರಿ 2023, 12:23 IST
   

ಮೈಸೂರು: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ಹಲವು ಆರೋಪಗಳನ್ನು ಮಾಡಿರುವ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಲ್ಲಿನ ಆರ್‌ಟಿಐ ಕಾರ್ಯಕರ್ತ ಎನ್.ಗಂಗರಾಜು ತಮ್ಮೊಂದಿಗೆ ರೂಪಾ ಜ.30ರಂದು ಮತ್ತು ಫೆ.1ರಂದು ನಡೆಸಿದ ಸಂಭಾಷಣೆಯ ಆಡಿಯೊ ಇವಾಗಿವೆ.

ಅವುಗಳನ್ನು ಗಂಗರಾಜು ಇಲ್ಲಿ ಬಿಡುಗಡೆ ಮಾಡಿದ್ದಾರೆ.

‘ಫೆ.1ರಂದು ರೂಪಾ ನನಗೆ ಕರೆ ಮಾಡಿ ಧಮಕಿ ಹಾಕಿದ್ದಾರೆ. ಈ ಬಗ್ಗೆ ವಕೀಲರೊಂದಿಗ ಚರ್ಚಿಸಿದ್ದು, ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಸಿದ್ಧತೆ ನಡೆಸುತ್ತಿದ್ದೇನೆ. ಅವರಿಂದ ನನಗೆ ಜೀವ ಬೆದರಿಕೆ ಇದೆ’ ಎಂದು ಗಂಗರಾಜು ದೂರಿದ್ದಾರೆ.

ADVERTISEMENT

‘ತಮ್ಮ ಕೆಲಸ ಬಿಟ್ಟು ಪತಿಯ ಕಚೇರಿಯಲ್ಲಿ ಏನಾಗುತ್ತಿದೆ ಎನ್ನುವುದನ್ನು ನೋಡುತ್ತಾ ಕುಳಿತಿದ್ದಾರೆಯೇ? ಅವರ ಕೆಲಸ ಬಿಟ್ಟು ಬೇರೆ ಕೆಲಸ ಮಾಡುತ್ತಿದ್ದಾರೆಯೇ. ಬೇಹುಗಾರಿಕೆ ಮಾಡುತ್ತಿದ್ದಾರೆಯೇ?’ ಎಂದು ಕೇಳಿದರು.

‘ರೂಪಾ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಎಲ್ಲ ಪೋಟೊಗಳನ್ನು, ಚಾಟ್‌ಗಳನ್ನು ನನಗೂ ಕಳಿಸಿದ್ದರು. ಅಧಿಕಾರದ ವ್ಯಾಪ್ತಿ ಮೀರಿ ನನ್ನನ್ನು ಪ್ರಶ್ನಿಸಿದರು. ಫೋಟೊಗಳನ್ನೆನ್ನಾ ಮಾಧ್ಯಮಕ್ಕೆ ಬಿಡುಗಡೆ ಮಾಡು, ರೋಹಿಣಿ ವಿರುದ್ಧ ಹೋರಾಡು ಎಂದೆಲ್ಲಾ ಒತ್ತಡವನ್ನೂ ಹಾಕಿದ್ದರು’ ಎಂದು ದೂರಿದರು.

25 ನಿಮಿಷಗಳ ಆಡಿಯೊದಲ್ಲಿ ಏನಿದೆ?

ಪ್ರಕರಣವೊಂದರ ಬಗ್ಗೆ ಹೇಳಿರುವ ಗಂಗರಾಜು, ‘ಭೂಅಕ್ರಮದ ತನಿಖೆಯ ಕುರಿತು ಇಲ್ಲಿನ ಸರ್ವೇ ಇಲಾಖೆಯವರು, ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲಿಲ್ಲವಾದ್ದರಿಂದ ಮುಂದಿನ ಹಂತಕ್ಕೆ ಅಂದರೆ ಸರ್ವೇ ಕಮಿಷನರ್‌ಗೆ ಹೋಗಿ ದೂರು ಕೊಟ್ಟಿದ್ದೇನೆ’ ಎಂದು ಹೇಳಿದ್ದಾರೆ.

‘ಸರ್ಕಾರಿ ಆಸ್ತಿಯನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದೇನೆಯೇ ಹೊರತು, ವೈಯಕ್ತಿಕ ಕೆಲಸಗಳಿಗೆ ಹೋಗಿಲ್ಲ’ ಎಂದು ಗಂಗರಾಜು ಹೇಳಿದ್ದಾರೆ.

ಪ್ರತಿಕ್ರಿಯಿಸಿದ ರೂಪಾ, ‘ಆ ಯಮ್ಮ ಸಾ.ರಾ.ಮಹೇಶ್‌ ಹತ್ತಿರ ಹೋಗಿ, ಪ್ರಕರಣ ವಾಪಸ್ ಪಡೆದುಕೊಳ್ಳುವಂತೆ ಬೆಗ್ ಮಾಡಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ, ದೇವೇಗೌಡರ ಬಳಿ ಹೋಗಿ ಬೇಡಿಕೊಂಡಿದ್ದಾರೆ. ಐಎಎಸ್‌ ಅಧಿಕಾರಿಗಳ ಮೂಲಕವೂ ಹೇಳಿಸಿದ್ದಾರೆ. ಸಾ.ರಾ.ಮಹೇಶ್ ವಾಪಸ್ ತಗೊಂಡಿಲ್ಲ. ಆಕೆ, ಜಾಲಹಳ್ಳಿಯಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ಬಾಗಿಲಿನ ಹಿಂದೆ ಹಾಕುವ ಹಿಂಜಿಗೆ ಒಂದು ₹ 6 ಲಕ್ಷ ವೆಚ್ಚ ಮಾಡುತ್ತಾರೆಂದರೆ ದುಡ್ಡು ಎಲ್ಲಿಂದ ಬರುತ್ತಿದೆ? ₹ 26 ಲಕ್ಷ ಕಿಚನ್‌ ಅಪ್ಲೈಯನ್ಸ್‌ ಜರ್ಮನಿಯಿಂದ ತರಿಸುತ್ತಿದ್ದಾರೆ. ಡ್ಯೂಟಿ ಫ್ರೀ ಮಾಡಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಚಾಟ್‌ ಮಾಡಿರುವುದು ಸಿಕ್ಕಿದೆ. ಫರ್ನಿಚರ್‌ ಕೋಟ್ಯಂತರ ರೂಪಾಯಿಯದ್ದು ಹಾಕಿಸುತ್ತಿದ್ದಾರೆ. ಆ ಚಾಟ್ಸ್‌ ಎಲ್ಲವನ್ನೂ ಕಳುಹಿಸುತ್ತೇನೆ. ಅದನ್ನು ನೋಡಿ, ನೀವು ಯಾರ ಪರ ನಿಂತಿದ್ದೀರಾ ನಿರ್ಧರಿಸಿ ಗಂಗರಾಜು’ ಎಂದು ಕೇಳಿದ್ದಾರೆ.

‘ಅವರು ಸಂಧಾನ ಮಾಡಿಕೊಂಡರು ಎಂದು ನಾನು ಸುಮ್ಮನೆ ಬಿಡುವುದಿಲ್ಲ. ನನ್ನ ಹೋರಾಟ ಮುಂದುವರಿಸುತ್ತೇನೆ’ ಎಂದು ಗಂಗರಾಜು ಹೇಳಿರುವುದು ಆಡಿಯೊದಲ್ಲಿದೆ.

ರೂಪಾ: ಪತಿಯ ಅಣ್ಣನನ್ನು ರಾಜಕೀಯಕ್ಕೆ ತರಲು ಯತ್ನಿಸುತ್ತಿದ್ದಾರೆ. ಜಿಎನ್‌ಆರ್‌ ಪ್ರತಿಷ್ಠಾನ ಮಾಡಿಕೊಂಡು ನಿರ್ಮಲಾನಂದನಾಥ ಸ್ವಾಮೀಜಿ, ಚಕ್ರವರ್ತಿ ಸೂಲಿಬೆಲೆ ಕರೆದು ಕಾರ್ಯಕ್ರಮ ಮಾಡಿದ್ದಾರೆ. ನಾನೇ ಸ್ವಾಮೀಜಿ, ಚಕ್ರವರ್ತಿಯನ್ನೆಲ್ಲಾ ಕರೆಸಿದ್ದು ಎಂದು ಚಾಟ್‌ನಲ್ಲಿ ಹೇಳಿಕೊಂಡಿದ್ದಾಳೆ. ‘ಕಾರ್ಯಕ್ರಮಕ್ಕೆ ಹಾಜರಾಗಬೇಕಾ?’ ಎಂದು ನಮ್ಮ ಮನೆಯವರನ್ನು ಕೇಳಿದ್ದಳು. ಫೌಂಡೇಶನ್‌ ಉದ್ದೇಶ ಸದ್ಯಕ್ಕೆ ಚಾರಿಟಿ, ಅಂತಿಮವಾಗಿ ರಾಜಕೀಯಕ್ಕೆ ಬರಬೇಕು; ಬಿಜೆಪಿ ಟಿಕೆಟ್‌ ತೆಗೆದುಕೊಳ್ಳಬೇಕು ಎನ್ನುವುದೇ ಆಗಿದೆ ಎಂದು ಹೇಳಿದ್ದಾಳೆ. ಇಂಥ ಡೋಂಗಿಗಳು, ಊಸರವಳ್ಳಿಗಳನ್ನು ನೀವೇಕೆ ಸಪೋರ್ಟ್‌ ಮಾಡುತ್ತೀರಿ?

ಗಂಗರಾಜು: ನಾನು ಸಪೋರ್ಟ್ ಮಾಡುತ್ತಿಲ್ಲ. ದಾಖಲೆ ಸಿಕ್ಕರೆ ಅವರ ವಿರುದ್ಧವೂ ಮಾತನಾಡುತ್ತೇನೆ.

ರೂಪಾ: ನಮ್ಮ ಮನೆಯವರು ಭೂ ದಾಖಲೆಗಳ ಆಯುಕ್ತರಾದ್ದರಿಂದ ಭೂಮಿಗೆ ಸಂಬಂಧಿಸಿದ ಮಾಹಿತಿ ಕೇಳುತ್ತಲೇ ಇರುತ್ತಾಳೆ. ಕಬಿನಿಯ 4 ಪಹಣಿ ಹಾಕಿದ್ದಾರೆ, ಇದನ್ನು ತಗೊಬಹುದಾ, ಈ ಲ್ಯಾಂಡ್ ಸರಿ ಇದೆಯೇ ಎಂದು ಕೇಳಿದ್ದಾರೆ. ಇನ್ನೊಂದರಲ್ಲಿ ಪೋಡಿ ಆಗಬೇಕು ಎಂದು ಕಳುಹಿಸಿದ್ದಾರೆ. ಈ ರೀತಿ ಹಲವು ಭೂಮಿ ತೆಗೆದುಕೊಳ್ಳುವ ಬಗ್ಗೆ ಕೇಳಿದ್ದಾರೆ. ವ್ಯಾಜ್ಯವಿರುವ ಭೂಮಿಯನ್ನೂ ತಗೊಂಡಿದ್ದಾರೆ. ನಮ್ಮ ಮನೆಯವರನ್ನು ಅಲ್ಲಿಂದ ವರ್ಗಾಯಿಸುವಂತೆ ಕೇಳಿಕೊಂಡಿದ್ದೇನೆ. ಆ ಕಚೇರಿಯಿಂದ ಎದ್ದು ಹೋಗು.

ಅವಳು ಕಳುಹಿಸುತ್ತಾಳೆ. ಇವರ ಹತ್ತಿರ ಬಂದು ನೀವು ಕೆಲಸ ಮಾಡಿಸಿಕೊಳ್ತಿರಾ ಪಿಂಪ್‌ ಥರ. ಬೇಕಿದ್ದರೆ ಇದನ್ನೆಲ್ಲಾ ರೆಕಾರ್ಡೂ ಮಾಡ್ಕೊಳಿ. ಸಾರ್ವಜನಿಕವಾಗಿಯೂ ಹಾಕ್ಕೊಳಿ. ಸಿಂಧೂರಿ ಎನ್ನುವವಳು ಎಷ್ಟು ಮನೆ ಕೆಡಿಸಿದ್ದಾಳೆ, ಗಂಡನ ರಿಯಲ್‌ ಎಸ್ಟೇಟ್‌ ಬ್ಯುಸಿನೆಸ್‌ ಪ್ರಮೋಟ್ ಮಾಡೋಕೆ ಎಷ್ಟು ಭೂ ದಾಖಲಾತಿಗಳಿಗೆ ಸಂಬಂಧಿಸಿದಂತೆ ಇವರಿಂದ ಎಷ್ಟು ಮಾಹಿತಿ ಕಲೆಕ್ಟ್‌ ಮಾಡಿದ್ದಾಳೆ ಎನ್ನುವುದು ಗೊತ್ತಾಗಲಿ. ನೀವೂ ಸಹಕರಿಸಿದ್ದೀರಾ, ದುಡ್ಡು ಮಾಡ್ಕೊಂಡಿದ್ದೀರಿ ಎಂದು ನಾನೂ ಹೇಳುತ್ತೇನೆ.

‘ಆ ಯಮ್ಮನ ದೆಸೆಯಿಂದಾಗಿ ನಮ್ಮ ಕುಟುಂಬ ಚೆನ್ನಾಗಿಲ್ಲವಲ್ಲ ಈಗ?. ಆ ಯಮ್ಮ ಕ್ಯಾನ್ಸರ್‌ ಇದ್ದಂಗೆ. ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತಾಳೆ. ಡಿ.ಕೆ.ರವಿ ವಿಷಯದಲ್ಲಿ ಆಗಿದ್ದೂ ಹಾಗೆನೇ. ನಮ್ಮವರ ಹಿಂದೆಯೇ ಬಿದ್ದಿದ್ದಾಳೆ. ಲೋಕಾಯುಕ್ತ ಕೇಸ್ ರಿಪ್ಲೈನೂ ಇವರತ್ತಿರಾನೇ ಬರೆಸ್ಕೊಳ್ತಾಳೆ. ನಮ್ಮ ಮನೆಯವರು, ಮನೆಯವರಿಗೆ ಗಮನವನ್ನೇ ಕೊಡುತ್ತಿಲ್ಲ.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.