ADVERTISEMENT

ಕೆ.ಆರ್.ನಗರ | ಕ್ಷೇತ್ರ ಬದಲಾಯಿಸುವುದಿಲ್ಲ: ಸಾ.ರಾ.ಮಹೇಶ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 3:18 IST
Last Updated 28 ಜನವರಿ 2026, 3:18 IST
ಕೆ.ಆರ್.ನಗರ 12ನೇ ವಾರ್ಡ್‌ನಲ್ಲಿ ಸೋಮವಾರ ಸಂಜೆ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಸಮ್ಮುಖದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಗೀತಾ ಮಹೇಶ್ ಅವರು ಪತಿ ಮಹೇಶ್ ಅವರೊಂದಿಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು
ಕೆ.ಆರ್.ನಗರ 12ನೇ ವಾರ್ಡ್‌ನಲ್ಲಿ ಸೋಮವಾರ ಸಂಜೆ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಸಮ್ಮುಖದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಗೀತಾ ಮಹೇಶ್ ಅವರು ಪತಿ ಮಹೇಶ್ ಅವರೊಂದಿಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು   

ಕೆ.ಆರ್.ನಗರ: ‘ನಾನು ಕ್ಷೇತ್ರ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ನನ್ನ ಎರಡೂ ಕಾಲುಗಳು ಇಲ್ಲಿಯೇ ಇವೆ’ ಎಂದು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಹೇಳಿದರು.

ಇಲ್ಲಿನ 12ನೇ ವಾರ್ಡ್‌ನಲ್ಲಿ ಸೋಮವಾರ ಸಂಜೆ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ಪಕ್ಷದ ಒಬ್ಬ ನಾಯಕರು ಪ್ರತಿ ಐದು ವರ್ಷಕ್ಕೊಮ್ಮೆ ಒಂದೊಂದು ಮಾತನ್ನು ಆಡುತ್ತಾರೆ. ಅವರನ್ನು ಉದ್ದೇಶಿಸಿ, ಹೈಕಮಾಂಡ್ ತೀರ್ಮಾಸಿದರೆ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಸಿದ್ಧ ಎಂದು ಹೇಳಿದ್ದೆ. ಆಗಿನಿಂದ ಅವರೂ ಸ್ವಲ್ಪ ಬದಲಾವಣೆಯಾಗಿದ್ದಾರೆ. ನಾನು ಎಲ್ಲಿಗೂ ಹೋಗುವುದಿಲ್ಲ’ ಎಂದರು.

‘ಡಿ.ದೇವರಾಜ ಅರಸು ಅವರಿಗಿಂತ ಹೆಚ್ಚು ಅವಧಿ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿರುವ ಸಿದ್ದರಾಮಯ್ಯ ಅವರು ₹7ಲಕ್ಷ ಕೋಟಿ ಸಾಲ ಮಾಡಿದ್ದು, ಇದರಿಂದ ರಾಜ್ಯದ ಪ್ರತಿಯೊಬ್ಬರ ತಲೆಯ ಮೇಲೆ ₹1 ಲಕ್ಷ ಸಾಲದ ಹೊರೆ ಬೀಳಲಿದೆ. ಇನ್ನೂ ಎರಡು ವರ್ಷ ಅಧಿಕಾರದಲ್ಲಿ ಅದೆಷ್ಟು ಸಾಲ ಮಾಡುತ್ತಾರೋ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಹಿಂದಿನ ಮುಖ್ಯಮಂತ್ರಿಗಳು ರಸ್ತೆ, ಚರಂಡಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗಾಗಿ ಸಾಲ ಮಾಡುತ್ತಿದ್ದರು. ಆದರೆ ಸಿದ್ದರಾಮಯ್ಯ ಅವರು ದಲಿತರಿಗೆ ಮೀಸಲಾಗಿದ್ದ ₹45 ಸಾವಿರ ಕೋಟಿ ಅಲ್ಲದೇ ಸಾಲದ ಹಣವನ್ನೂ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರ ಆಸ್ತಿ ದಿವಾಳಿಯಾಗಲಿದೆ’ ಎಂದು ಎಚ್ಚರಿಸಿದರು.

‘2028ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದರೂ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದಿಲ್ಲ ಎಂದಿರುವ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಅವರ ಕುರಿತು ಈಗಿನಿಂದಲೇ ಭಯ ಶುರುವಾಗಿದೆ. ರೈತ ಉಳಿಯಬೇಕು ಎಂದರೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರಬೇಕು’ ಎಂದರು.

ಪುರಸಭೆ ಮಾಜಿ ಅಧ್ಯಕ್ಷೆ ಗೀತಾ ಮಹೇಶ್ ಮಾತನಾಡಿ, ‘ನಾನು ಈ ಹಿಂದೆ ಜೆಡಿಎಸ್‌ನಲ್ಲಿ ಇದ್ದೆ, ಕೆಲವೊಂದು ವಿಷಯದಲ್ಲಿ ಬೇಸರ ಮಾಡಿಕೊಂಡು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದೆ. ಸಾ.ರಾ.ಮಹೇಶ್ ಅವರ ಕಾರ್ಯವೈಖರಿ, ಜನಪ್ರಿಯತೆ ಗಮನಿಸಿ ಮತ್ತೆ ಮೂಲ ಪಕ್ಷಕ್ಕೆ ಆಗಮಿಸಿದ್ದೇನೆ’ ಎಂದರು.

ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಮುಖಂಡರಾದ ಅಚ್ಯುತಾನಂದ, ಅಮಿತ್ ವಿ.ದೇವರಹಟ್ಟಿ, ಹನಸೋಗೆ ನಾಗರಾಜು ಮಾತನಾಡಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ತಾಲ್ಲೂಕು ಘಟಕದ ಅಧ್ಯಕ್ಷ ಹಂಮಾಫುರ ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ನಗರ ಘಟಕದ ಅಧ್ಯಕ್ಷ ಸಂತೋಷಗೌಡ, ಮಹೇಶ್, ವಕ್ತಾರ ಕೆ.ಎಲ್.ರಮೇಶ್, ಮುಖಂಡರಾದ ಡಿ.ಕಾಂತರಾಜು, ಉಮೇಶ್, ಎಂ.ತಮ್ಮಣ್ಣ, ಹಂಪಾಪುರ ಸುರೇಶ್, ವಕೀಲ ಅಂಕನಹಳ್ಳಿ ತಿಮ್ಮಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.