ಪ್ರಜಾವಾಣಿ ವಾರ್ತೆ
ಮೈಸೂರು: ಇಲ್ಲಿನ ರಾಮಾನುಜ ರಸ್ತೆಯಲ್ಲಿ ಕಲಾವಿದ ಹಾಗೂ ಶಿಲ್ಪಿ ಎಲ್.ಶಿವಲಿಂಗಪ್ಪ ಅವರು ರೂಪಿಸಿರುವ ‘ಮೈಸೂರು ಆರ್ಟ್ ಗ್ಯಾಲರಿ’ಯಲ್ಲಿ ಆಯೋಜಿಸಲಾಗುವ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದ ನೂರರ ನೆನಪು ಇಲ್ಲಿ ಹೊನಲಾಗಿ ಹರಿಯಿತು.
ಜೆಎಸ್‌ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ಬುಧವಾರ ಕನ್ನಡ ಸಾಹಿತ್ಯ ಕಲಾಕೂಟದ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ, 2016ರಿಂದ 2024ರವರೆಗೆ ಜರುಗಿದ ನೂರು ಸಂವಾದ ಕಾರ್ಯಕ್ರಮಗಳ ಸಾಧಕರನ್ನೂ ನೆನಪಿಗೆ ತಂದಿತು. ಪ್ರತಿ ತಿಂಗಳೂ ನಡೆಯುವ ಈ ಚಟುವಟಿಕೆಯ ಕಿರುಹೊತ್ತಗೆ ‘ನೂರರ ನೆನಪು’ ಬಿಡುಗಡೆಯೂ ನೆರವೇರಿತು.
ಬಿಡುಗಡೆ ಮಾಡಿದ ಸಾಹಿತಿ ಪ್ರೊ.ಸಿ. ನಾಗಣ್ಣ ಮಾತನಾಡಿ, ‘ಲೋಕದಲ್ಲಿ ಎಲ್ಲರೂ ಸೇವೆಯಲ್ಲಿ ತೊಡಗಬೇಕು’ ಎಂದು ಆಶಿಸಿದರು.
‘ಮೈಸೂರು ಆರ್ಟ್ ಗ್ಯಾಲರಿಯು ಸರ್ಕಾರದ ಆರ್ಥಿಕ ನೆರವಿಲ್ಲದೆ, ಶ್ರಮದಿಂದ, ಯಾವ ಬೇಡಿಕೆಯೂ ಇಲ್ಲದೇ ಸ್ವಾಭಿಮಾನದಿಂದ ಬೆಳೆದು ಬಂದಿರುವುದು ನಿಜಕ್ಕೂ ಸಂತೋಷದ ಸಂಗತಿ. ಶಿವಲಿಂಗಪ್ಪ ಅವರು ಕಲಾವಿದರನ್ನು ಪರಿಚಯಿಸಿ, ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇವರ ಸಹನೆ ಹಾಗೂ ಔದಾರ್ಯ ಶ್ಲಾಘನೀಯವಾದುದು’ ಎಂದರು.
‘ಎಲ್ಲ ಸಾಧಕರನ್ನೂ ಗುರುತಿಸಿ ಗೌರವಿಸುವುದು ಸರ್ಕಾರದಿಂದಲೂ ಕಷ್ಟದ ಕೆಲಸವಾಗಿದೆ. ಹೀಗಿರುವಾಗ, ಶಿವಲಿಂಗಪ್ಪ ಅಂತಹ ಔದಾರ್ಯ ವ್ಯಕ್ತಿತ್ವವುಳ್ಳವರು ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿದ್ದಾರೆ. ಸಮಾಜದ ಪರವಾಗಿ ಜವಾಬ್ದಾರಿಯುತ ಕೆಲಸವನ್ನು ಪ್ರೀತಿಯಿಂದ, ಸ್ವಾಭಿಮಾನದಿಂದ ಮಾಡುತ್ತಿದ್ದಾರೆ’ ಎಂದು ಹೇಳಿದರು.
‘ಮೈಸೂರು ಆರ್ಟ್ ಗ್ಯಾಲರಿ ಕಿರಿದಾದರೂ ಅದರ ಕೆಲಸ ಅತಿ ಹಿರಿದಾಗಿದೆ. ಸಮಾಜಕ್ಕೆ ಶಿವಲಿಂಗಪ್ಪ ಅವರ ಕೊಡುಗೆ ಅಪಾರವಾದುದು’ ಎಂದು ಮೆಚ್ಚುಗೆ ಸೂಚಿಸಿದರು.
ಶಾರದಾವಿಲಾಸ ಕಾಲೇಜಿನ ಪ್ರಾಂಶುಪಾಲೆ ಎಂ.ದೇವಿಕಾ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಮೈಸೂರು ಆರ್ಟ್ ಗ್ಯಾಲರಿ ಸಂಸ್ಥಾಪಕ ಅಧ್ಯಕ್ಷ ಎಲ್.ಶಿವಲಿಂಗಪ್ಪ, ಪ್ರಧಾನ ಸಂಚಾಲಕ ಶ್ರೀಕಂಠ ಮೂರ್ತಿ, ಕಾರ್ಯದರ್ಶಿ ಜಮುನಾ ರಾಣಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮನೋಹರ್, ಮೋಹನ, ಶೋಭಾರಾಣಿ, ಗೋವಿಂದಾಚಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.