ADVERTISEMENT

ಕನ್ನಡ ನುಡಿ ಹಬ್ಬಕ್ಕೆ ಹೊಮ್ಮರಗಳ್ಳಿ ಸಜ್ಜು

ಎಚ್.ಡಿ.ಕೋಟೆ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 10:29 IST
Last Updated 30 ಡಿಸೆಂಬರ್ 2019, 10:29 IST
ಹೊಮ್ಮರಗಳ್ಳಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುವ ಸಮ್ಮೇಳನದ ಸಿದ್ಧತಾ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು
ಹೊಮ್ಮರಗಳ್ಳಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುವ ಸಮ್ಮೇಳನದ ಸಿದ್ಧತಾ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು   

ಹಂಪಾಪುರ: ಎಚ್.ಡಿ.ಕೋಟೆ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾಲ್ಲೂಕಿನ ಹೊಮ್ಮರಗಳ್ಳಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಡಿ.30ರಂದು ನಡೆಯಲಿದೆ.

ಸಮ್ಮೇಳನದ ಅಧ್ಯಕ್ಷರಾಗಿ ಕಣಿಯನಹುಂಡಿ ಗ್ರಾಮದ ಪ್ರೊ.ನೀ.ಗಿರಿಗೌಡ ಆಯ್ಕೆಯಾಗಿದ್ದಾರೆ.

ಪಂಡಿತ್ ನಾಗರಾಜಯ್ಯ ಸಭಾಂಗಣದಲ್ಲಿ ಎಚ್.ಕೆ.ತಿಮ್ಮಯ್ಯ ವೇದಿಕೆ ನಿರ್ಮಾಣ ಮಾಡಲಾಗಿದೆ. ಮಹಾದ್ವಾರಕ್ಕೆ ವಿ.ಶ್ರೀಕೃಷ್ಣ ಆಲನಹಳ್ಳಿ ಅವರ ಹೆಸರನ್ನು ಇಡಲಾಗಿದೆ. ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಸಿ.ಅನಿಲ್‌ ಕುಮಾರ್‌ ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ. ತಹಶೀಲ್ದಾರ್ ಆರ್. ಮಂಜುನಾಥ್ ನಾಡ ಧ್ವಜಾರೋಹಣ ನಡೆಸುವರು. ಕನ್ನಡ ಸಾಹಿತ್ಯ ಪರಿಷತ್‌ನ ಧ್ವಜಾರೋಹಣವನ್ನು ತಾಲ್ಲೂಕು ಘಟಕದ ಅಧ್ಯಕ್ಷ ಕನ್ನಡ ಪ್ರಮೋದ್ ನೆರವೇರಿಸುವರು.

ADVERTISEMENT

ಬೆಳಿಗ್ಗೆ 9.30ಕ್ಕೆ ಹೊಮ್ಮರಗಳ್ಳಿ ಗ್ರಾಮದ ಬಳಿ ಇರುವ ಮಹದೇವ ತಾತ ಮಹಾದ್ವಾರದ ಮುಂಭಾಗದಿಂದ ಸಮ್ಮೇಳನಾಧ್ಯಕ್ಷ ಪ್ರೊ.ನೀ.ಗಿರಿಗೌಡರನ್ನು ಮೆರವಣಿಗೆ ಮೂಲಕ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನಕ್ಕೆ ಕರೆ ತರಲಾಗುತ್ತದೆ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ದೇವಣ್ಣ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾ.ಪಂ ಉಪಾಧ್ಯಕ್ಷೆ ಮಂಜುಳಾ ಚಂದ್ರೇಗೌಡ, ಸದಸ್ಯರಾದ ಸಣ್ಣಮ್ಮ ಶಿವಯ್ಯ, ಸಿದ್ದರಾಜು, ಎಚ್.ಎಂ.ಗೀತಾ, ವಿಜಯಲಕ್ಷ್ಮಿ, ವಿವಿಧ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಎಂ.ಕೃಷ್ಣಮೂರ್ತಿ, ಮಂಜುಳಾ ಮತ್ತು ಪೂರ್ಣಿಮಾ ಹಾಜರಿರುವರು.

ಬೆಳಿಗ್ಗೆ 10.30ಕ್ಕೆ ಉದ್ಘಾಟನೆ: ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಸಿ.ಅನಿಲ್‌ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕ್ಷೀರಸಾಗರ್ ಸಮ್ಮೇಳನದ ಬಗ್ಗೆ ಮಾತನಾಡುವರು. ನಂತರ, ಸಮ್ಮೇಳನಾಧ್ಯಕ್ಷ ಪ್ರೊ.ನೀ. ಗಿರಿಗೌಡ ಮಾತನಾಡಲಿದ್ದಾರೆ. ಬಿ.ಕೆ.ಮೀನಾಕ್ಷಿ ಅವರ ರಚನೆಯ ‘ಕನಸುಗಳ ಗರಡಿಯಲ್ಲಿ’ ಕೃತಿಯನ್ನು ಸಂಸದ ವಿ. ಶ್ರೀನಿವಾಸಪ್ರಸಾದ್‌ ಬಿಡುಗಡೆ ಮಾಡಲಿದ್ದಾರೆ. ಪ್ರದ್ಯುಮ್ನ ಶ್ರೀಕೃಷ್ಣ ಆಲನಹಳ್ಳಿ ಸಾಂಸೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಮಸುಂದರ್ ಪುಸ್ತಕ ಮಳಿಗೆ ಉದ್ಘಾಟಿಸುವರು. ಚಿತ್ರಕಲಾ ಪ್ರದರ್ಶನವನ್ನುಎಸ್. ರಾಮ ಪ್ರಸಾದ್ ಉದ್ಘಾಟಿಸಲಿದ್ದಾರೆ.

ಮಧ್ಯಾಹ್ನ 2.30ಕ್ಕೆ ವಿವಿಧ ಗೋಷ್ಠಿಗಳು ನಡೆಯಲಿವೆ. ಸಂಜೆ 4.20ಕ್ಕೆ ಕವಿಗೋಷ್ಠಿ, ಸಂಜೆ 5 ಗಂಟೆಗೆ ಅಭಿನಂದನಾ ಸಮಾರಂಭ ಜರುಗಲಿದೆ. ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಸಿ.ಅನಿಲ್‌ಕುಮಾರ್‌ ಹಾಜರಿರುವರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು. ಗುಬ್ಬಿಗೂಡು ರಮೇಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ಪ್ರೊ.ನೀ.ಗಿರಿಗೌಡ ಹಾಜರಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.