ಸರಗೂರು: ‘ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಒಂದೇ ಸೂರಿನಡಿ ಎಲ್ಲ ಇಲಾಖೆಗಳು ಬರುವಂತೆ ‘ಪ್ರಜಾಸೌಧ’ ಕಟ್ಟಡ ವಿನ್ಯಾಸಗೊಳಿಸಲಾಗಿದೆ’ ಎಂದು ಶಾಸಕರು ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ₹ 8.60 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ‘ಪ್ರಜಾಸೌಧ’ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರದ ಈ ಸೌಲಭ್ಯ ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಾಜಿ ಶಾಸಕ ದಿ.ಎಸ್.ಚಿಕ್ಕಮಾದು, ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ್ ಅವರ ಸತತ ಪರಿಶ್ರಮದಿಂದಾಗಿ ಹೋಬಳಿ ಕೇಂದ್ರವಾಗಿದ್ದ ಸರಗೂರು, ಎಚ್.ಡಿ.ಕೋಟೆ ತಾಲ್ಲೂಕುನಿಂದ ಬೇರ್ಪಟ್ಟು ನೂತನ ತಾಲೂಕಾಗಿ ಘೋಷಣೆಯಾಗಿ 8 ವರ್ಷ ಕಳೆದಿದೆ. ಸದ್ಯ ನೀರಾವರಿ ಇಲಾಖೆ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿಕೊಂಡು ಸಿಎಂ ಸಿದ್ದರಾಮಯ್ಯ ಅವರಿಂದ ಅನುದಾನ ಬಿಡುಗಡೆ ಮಾಡಿಸಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಇಲ್ಲಿ 32 ಇಲಾಖೆಗಳೂ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
ಪ್ರವೇಶಾತಿ ಕೊರತೆ: ಪಟ್ಟಣದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಕ್ಕಳ ಪ್ರವೇಶಾತಿ ಕೊರತೆ ಇದ್ದು, ಮುಚ್ಚುವ ಭೀತಿಯಿಲ್ಲಿದೆ. ಕಾಲೇಜು ಮುಚ್ಚವುದು ಸುಲಭ. ಆದರೆ, ಮಂಜೂರು ಮಾಡಿಸಿಕೊಂಡು ಬರುವುದು ಬಹಳ ಕಷ್ಟ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಕಾಲೇಜಿಗೆ ಸೇರಿಸಬೇಕು. ಆ ಮೂಲಕ ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕು ಎಂದರು.
ಬಿಡುಗಲು 3.20 ಎಕರೆ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಬಾಕಿ ಇರುವ ಸಾಗುವಳಿ ಚೀಟಿ ನೀಡುವ ಬಗ್ಗೆ ಕ್ರಮ ವಹಿಸಲಾಗುವುದು. ಪ್ರತಿ ವಾರ್ಡ್ ಗಳಿಗೆ ಪ್ರತ್ಯೇಕವಾಗಿ ಅನುದಾನ ಬಿಡುಗಡೆ, ಒಂದನೇ ಮುಖ್ಯ ರಸ್ತೆಯಲ್ಲಿ ಬಾಕಿ ಇರುವ ರಸ್ತೆ ಕಾಮಗಾರಿ ಪೂರ್ಣ, 2ನೇ ಮುಖ್ಯ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ, ಕ್ರೀಡಾಂಗಣದ ಅಭಿವೃದ್ಧಿಗೆ ಕ್ರಮ, ಹ್ಯಾಂಡ್ ಪೋಸ್ಟ್-ಸರಗೂರು ಡಬಲ್ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಸರಗೂರು ಪಟ್ಟಣ ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಾಣಕ್ಕೂ ಮುಂದಾಗಲಾಗುವುದು ಎಂದರು.
ತಹಶೀಲ್ದಾರ್ ಮೋಹನಕುಮಾರಿ, ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಮಾತನಾಡಿದರು.
ಪಟ್ಟಣ ಪಂಚಾಯತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ಶಿವಕುಮಾರ್, ಸದಸ್ಯರಾದ ಚಲುವಕೃಷ್ಣ, ವಿನಾಯಕ್ ಪ್ರಸಾದ್, ನವೀನ್ ಕಮಾರ್, ರಮೇಶ್, ಸ್ವಾಮಿ, ಮುಖ್ಯಾಧಿಕಾರಿ ಎಸ್.ಕೆ.ಸಂತೋಷ್‌ಕುಮಾರ್, ಮುಖಂಡರಾದ ಚಿಕ್ಕವೀರನಾಯಕ, ಶಂಭುಲಿಂಗನಾಯಕ, ಅಣ್ಣಯ್ಯಸ್ವಾಮಿ, ಎಂ.ಬಿ.ಆನಂದ್, ಕಂದೇಗಾಲ ಶಿವರಾಜು, ನವೀನ್, ಸಿದ್ದರಾಜು, ಚಿನ್ನಸ್ವಾಮಿ, ಗುರುಸ್ವಾಮಿ, ಬಸವರಾಜು, ಶಾಸಕರ ಆಪ್ತ ಕಾರ್ಯದರ್ಶಿ ಮಂಜುನಾಥ್, ಎಂಜನಿಯರ್ ಕೃಷ್ಣಪ್ಪ ಇದ್ದರು.
‘ತಾಲ್ಲೂಕಿನ ಅಭಿವೃದ್ಧಿಗೆ ಕ್ರಮ’ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಪದವಿ ಕಾಲೇಜು ಮಂಜೂರಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣ ₹32 ಕೋಟಿ ವೆಚ್ಚದಲ್ಲಿ 100 ಹಾಸಿಗೆಯುಳ್ಳ ದೊಡ್ಡ ಆಸ್ಪತ್ರೆ ನೀರಾವರಿ ಇಲಾಖೆಯ ಜಾಗದಲ್ಲಿಯೇ ನ್ಯಾಯಾಲಯ 2 ಎಕರೆ ಜಾಗದಲ್ಲಿ ಜಾಗದಲ್ಲಿ ಅಗ್ನಿಶಾಮಕದಳ ಕಟ್ಟಡ ನಿರ್ಮಾಣಕ್ಕೆ ₹4 ಕೋಟಿ ಅನುದಾನ ಬಂದಿದೆ. ಹಂತ-ಹಂತವಾಗಿ ಇಲಾಖೆಗಳ ಕಟ್ಟಡಗಳ ನಿರ್ಮಿಸಲಾಗುವುದು. ಹಳ್ಳಿಗಳಿಂದ ಕೂಡಿದ ಸರಗೂರು ತಾಲ್ಲೂಕಿನ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು’ ಎಂದು ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.