
ಸರಗೂರು (ಮೈಸೂರು ಜಿಲ್ಲೆ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನ ನುಗು ವನ್ಯಜೀವಿ ವಲಯ ಅರಣ್ಯದಂಚಿನ ಬೆಣ್ಣೇಗೆರೆ ಗ್ರಾಮದ ರೈತ ರಾಜಶೇಖರ್(65) ಭಾನುವಾರ ಹುಲಿ ದಾಳಿಯಿಂದ ಮೃತಪಟ್ಟರು.
ಇದರಿಂದಾಗಿ, ಬೆಣ್ಣೇಗೆರೆ ಸೇರಿದಂತೆ ಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಲ್ಲಿ ಆತಂಕ ಮನೆ ಮಾಡಿದೆ.
ಬೆಣ್ಣೇಗೆರೆಯಿಂದ 3 ಕಿ.ಮೀ. ದೂರದ ಜಮೀನಿನಲ್ಲಿ ಮಧ್ಯಾಹ್ನ ದನ ಮೇಯಿಸುತ್ತಿದ್ದ ರಾಜಶೇಖರ್ ಅವರ ಮೇಲೆ ಹುಲಿ ದಾಳಿ ನಡೆಸಿ, ಕುತ್ತಿಗೆಗೆ ಬಲವಾಗಿ ಕಚ್ಚಿ ಸುಮಾರು 100 ಮೀಟರ್‌ವರೆಗೆ ಎಳೆದೊಯ್ದಿದೆ. ತೀವ್ರ ರಕ್ತಸ್ರಾವ ಉಂಟಾದ್ದರಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟರು. ಜೊತೆಯಲ್ಲಿದ್ದ ಅದೇ ಗ್ರಾಮದ ಪುಟ್ಟಸಿದ್ದೇಗೌಡ ಹುಲಿ ಬರುವುದನ್ನು ಕಂಡು ಕೂಗಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದರು.
ಮೃತರಿಗೆ ಪತ್ನಿ, ತಾಯಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
ಕೆಲವು ದಿನಗಳ ಹಿಂದೆ, ತಾಲ್ಲೂಕಿನ ಬಡಗಲಪುರದಲ್ಲಿ ಹುಲಿ ದಾಳಿಗೆ ಒಳಗಾದ ಮಹದೇವ (ಮಾದೇಗೌಡ) ಅವರು ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ದಾಳಿ ನಡೆದಿರುವುದು ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.
ಶಾಸಕರ ತರಾಟೆ: ಎಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸ್ಥಳಕ್ಕೆ ಬರಲು ವಿಳಂಬ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಯಲು ಶಾಶ್ವತ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ₹ 30 ಲಕ್ಷ ಪರಿಹಾರ ಕೊಡಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಸಚಿವರ ಸೂಚನೆ:
ಹುಲಿ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ, ‘ಕಾಡಿಗೆ ದನ ಮೇಯಿಸಲು ಹೋಗುವವರು, ಕಾಡಿನಂಚಿನ ಗ್ರಾಮಗಳವರು ಮತ್ತು ತೋಟದ ಕೆಲಸಗಾರರು ಹುಲಿ, ಚಿರತೆ, ಆನೆ ಇತ್ಯಾದಿ ವನ್ಯಜೀವಿಗಳ ಸಂಚಾರದ ಮಾಹಿತಿ ಇದ್ದಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು’ ಎಂದು ಕೋರಿದ್ದಾರೆ.
‘ಹುಲಿ ದಾಳಿ ನಡೆದಿರುವ ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕು, ಮಾನವನ ರಕ್ತದ ರುಚಿ ಕಂಡಿರುವ ಹುಲಿಯ ಸೆರೆಗೆ ತುರ್ತು ಕ್ರಮ ಕೈಗೊಳ್ಳಬೇಕು ಮತ್ತು ಮೃತರ ಕುಟುಂಬದವರಿಗೆ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.