ADVERTISEMENT

ವಿಶ್ವನಾಥ್ ಚಾಮುಂಡೇಶ್ವರಿ ಎದುರು ಪ್ರಮಾಣ ಮಾಡಿದರೆ ಕ್ಷಮೆ ಯಾಚಿಸುವೆ–ಸಾ.ರಾ ಮಹೇಶ್

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 7:14 IST
Last Updated 16 ಅಕ್ಟೋಬರ್ 2019, 7:14 IST
ಪತ್ರಿಕಾಗೋಷ್ಠಿಯಲ್ಲಿ ಸಾ.ರಾ. ಮಹೇಶ್‌ ಮಾತನಾಡಿದರು
ಪತ್ರಿಕಾಗೋಷ್ಠಿಯಲ್ಲಿ ಸಾ.ರಾ. ಮಹೇಶ್‌ ಮಾತನಾಡಿದರು   

ಮೈಸೂರು:'ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್ ಅವರು ತಾವು ಮತ್ತು ತಮ್ಮ ಕುಟುಂಬ ಯಾರಿಂದಲೂ ಹಣ ಪಡೆದಿಲ್ಲ, ಆಮಿಷಗಳಿಗೆ ಒಳಗಾಗಿಲ್ಲ ಎಂದು ಚಾಮುಂಡೇಶ್ವರಿ ಎದುರು ಪ್ರಮಾಣ ಮಾಡಿದರೆ ನಾನು ಬೇಷರತ್ ಕ್ಷಮೆ ಯಾಚಿಸುವೆ' ಎಂದು ಶಾಸಕ ಸಾ.ರಾ.ಮಹೇಶ್ ಸವಾಲು ಹಾಕಿದರು.

'ಅ.17ರಂದು ಚಾಮುಂಡಿ ಬೆಟ್ಟಕ್ಕೆ ಬಂದು ನಾನು 25 ಕೋಟಿ ರೂಪಾಯಿಗೆ ಮಾರಾಟವಾಗಿದ್ದೇನೆ ಎಂಬುದನ್ನು ಸಾಬೀತು ಮಾಡಿರಿ' ಎಂದು ಅಡಗೂರು ಎಚ್.ವಿಶ್ವನಾಥ್ ಅವರು ಪಂಥಾಹ್ವಾನ ನೀಡಿರುವುದಕ್ಕೆ ಬುಧವಾರ ಒಪ್ಪಿಗೆ ಸೂಚಿಸಿದ ಮಹೇಶ್, ಸುದ್ದಿಗೋಷ್ಠಿಯಲ್ಲಿ ಮರು ಸವಾಲು ಹಾಕಿದರು.

'ಅಂತೆಯೇ, ರಿಯಲ್‌ ಎಸ್ಟೇಟ್ ಉದ್ಯಮವನ್ನು ಬಿಟ್ಟು ನನ್ನ ವಿರುದ್ಧ ಮಾಡಿರುವ ಬೇರೆಲ್ಲಾ ಆರೋಪಗಳು ನಿಜ ಎಂದು ಚಾಮುಂಡಿ ಎದುರು ಪ್ರಮಾಣ ಮಾಡಲಿ' ಎಂದೂ ಸವಾಲು ಹಾಕಿದರು.

ADVERTISEMENT

'ಸರ್ಕಾರವನ್ನು ಬೀಳಿಸಬಾರದು ಎಂದರೆ ಎಷ್ಟು ಹಣ ಕೊಡಬೇಕು ಎಂದು ಎಚ್.ಡಿ‌. ಕುಮಾರಸ್ವಾಮಿ ಅವರ ಬಳಿ ಬೇಡಿಕೆ ಇಟ್ಟಿದ್ದನ್ನೂ ನಾಳೆ ಬಹಿರಂಗಪಡಿಸುವೆ. ಪ್ರತಿ ತಿಂಗಳೂ ಕಂತಿನಲ್ಲಿ ಹಣ ನೀಡುವುದಾಗಿ ನಾನು ಭರವಸೆ ನೀಡಿದ್ದನ್ನೂ ತಿಳಿಸುವೆ. ಅದನ್ನು ವಿಶ್ವನಾಥ್ ಸುಳ್ಳು ಎಂದು ಆಣೆ ಮಾಡಲಿ' ಎಂದರು.

ಹುಣಸೂರಿಗೆ ಟಿಕೆಟ್ ಸಿಗದು:ಹುಣಸೂರು ಕ್ಷೇತ್ರಕ್ಕೆ ವಿಶ್ವನಾಥ್ ಹಾಗೂ ಅವರ ಕುಟುಂಬ ಸದಸ್ಯರಾರಿಗೂ ಟಿಕೆಟ್ ಸಿಗುವುದಿಲ್ಲ. ಬದಲಿಗೆ ಬಿಜೆಪಿಯಿಂದ ಬೆಂಗಳೂರು ಮೂಲದ ಅಭ್ಯರ್ಥಿಗೆ ಟಿಕೆಟ್‌ ಸಿಗಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.