ಸರಗೂರು: ‘ಗ್ರಾಮದ ಎಸ್.ಎಂ.ನಂಜೇಗೌಡ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಆರೋಪ ಸುಳ್ಳು. ಸರ್ಕಾರಿ ಖರಾಬು ಜಮೀನಿನಲ್ಲಿ ಅವರು ಮನೆ ನಿರ್ಮಿಸಿಕೊಂಡಿರುವುದು ಅಪರಾಧ’ ಎಂದು ತಹಶೀಲ್ದಾರ್ ಮೋಹನಕುಮಾರಿ ಹೇಳಿದರು.
ತಾಲ್ಲೂಕಿನ ಸಾಗರೆ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದರು.
ಗ್ರಾಮಸ್ಥರು ಹಾಗೂ ನಂಜೇಗೌಡ ಅವರ ಕುಟುಂಬದ ವಾದ ಆಲಿಸಿದ ಮೋಹನಕುಮಾರಿ, ‘ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆಯೇ ಎಂಬುದರ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು.
ನಂಜೇಗೌಡ ಕುಟುಂಬದ ಪರ ಸಕಾರಾತ್ಮಕ ಅಭಿಪ್ರಾಯ ಬಾರದ ಹಿನ್ನೆಲೆಯಲ್ಲಿ, ‘ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆ ರಕ್ಷಣೆಗಾಗಿ ಬಹಿಷ್ಕಾರ ಎಂದು ಹೇಳುವುದೂ ಅಪರಾಧವೇ. ಜಮೀನು ವಿಚಾರ ಸಂಬಂಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವರದಿ ನೀಡಿದ್ದು, ಸಮಗ್ರ ವರದಿ ತರಿಸಿಕೊಳ್ಳಲಾಗುವುದು. ಮನೆ ನಿರ್ಮಾಣದ ಸಂಬಂಧ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ವಹಿಸಲಾಗುವುದು’ ಎಂದರು.
‘ಗ್ರಾಮದ ದೊಡ್ಡತಾಯಮ್ಮ, ಎಸ್.ಎಂ.ನಂಜೇಗೌಡ ಅವರ ಸರ್ವೆ ನಂ.436ರ ಸರ್ಕಾರಿ ಖರಾಬು ಜಮೀನಿನಲ್ಲಿ ಅನಧಿಕೃತವಾಗಿ ವಾಸದ ಮನೆ ನಿರ್ಮಿಸಿಕೊಂಡಿರುವುದು ಸರ್ವೆ ಇಲಾಖೆ ನಡೆಸಲಾದ ಅಳತೆಯಲ್ಲಿ ಕಂಡುಬಂದಿದೆ. ಅಂಗನವಾಡಿ ಕಟ್ಟಡ ನಿರ್ಮಿಸಲು ಜಾಗ ಬೇಕಾಗಿರುವುದರಿಂದ ನಂಜೇಗೌಡ, ದೊಡ್ಡತಾಯಮ್ಮ ಅವರ ಗಮನಕ್ಕೆ ತಂದಾಗ 3 ತಿಂಗಳ ಕಾಲಾವಧಿ ನೀಡಿ ನಂತರ ಬಿಟ್ಟುಕೊಡುವುದಾಗಿ ಹೇಳಿದ್ದರು. 3 ತಿಂಗಳ ಬಳಿಕ ಮನೆ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದು, ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆ ರಕ್ಷಣೆಗಾಗಿ ಬಹಿಷ್ಕಾರ ಪದ ಬಳಕೆ ಮಾಡಿಕೊಂಡಿದ್ದಾರೆ’ ಎಂದು ಗ್ರಾಮಸ್ಥರು ತಹಶೀಲ್ದಾರ್ ಎದುರು ದೂರಿದರು.
ಬಳಿಕ ಗ್ರಾಮಸ್ಥರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳಲಾಯಿತು.
ಕರ್ನಾಟಕ ರಾಜ್ಯ ರೈತ ಪರ್ವ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವೈ.ಎಲ್.ನವೀನ್‌ಗೌಡ, ಆರ್‌ಐಗಳಾದ ನರಸಿಂಹ ಶೆಟ್ಟಿ, ಮುಜೀಬ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.