ADVERTISEMENT

ಸರಗೂರು | ರೈತನ ಮೇಲೆ ದಾಳಿ ಮಾಡಿದ್ದ ಹುಲಿ ಸೆರೆ

ಸರಗೂರು ತಾಲ್ಲೂಕಿನ ಯಡಿಯಾಲ ಸಮೀಪದ ಜಮೀನಿನಲ್ಲಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 5:50 IST
Last Updated 19 ಅಕ್ಟೋಬರ್ 2025, 5:50 IST
ಹುಲಿ ಸೆರೆ ಆಗಿರುವುದು
ಹುಲಿ ಸೆರೆ ಆಗಿರುವುದು   

ಸರಗೂರು: ತಾಲ್ಲೂಕಿನ ಬಡಗಲಪುರ ಗ್ರಾಮದ ರೈತನ ಮೇಲೆ ದಾಳಿ ನಡೆಸಿ ಕಾಡಿನತ್ತ ಓಡಿದ್ದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಸೆರೆ ಹಿಡಿದಿದ್ದಾರೆ.

ಶನಿವಾರ ಬೆಳಿಗ್ಗೆ ‘ಮಹೇಂದ್ರ’, ‘ಅಭಿಮನ್ಯು’, ‘ಭೀಮ’, ‘ಭಗೀರಥ’ ಸಾಕಾನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಯಡಿಯಾಲ ಸಮೀಪದ ಜಮೀನೊಂದರಲ್ಲಿ ಎರಡು ಡ್ರೋನ್‌ ನೆರವಿನಿಂದ ಹುಲಿ ಇರುವ ಸ್ಥಳ ಪತ್ತೆ ಹಚ್ಚಿದರು. ಬಳಿಕ ಪಶುವೈದ್ಯ ಡಾ.ವಸೀಂ ಮಿರ್ಜಾ, ಡಾ.ರಮೇಶ್, ಶಾರ್ಪ್ ಶೂಟರ್ ರಂಜನ್ ಅವರು ಹುಲಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

ಕಳೆದ ಕೆಲ ದಿನಗಳಿಂದಲೂ ಹುಲಿ ಸೆರೆಗಾಗಿ ಅರಣ್ಯ ಇಲಾಖೆಯು ವಿವಿಧ ತಂಡಗಳನ್ನು ರಚಿಸಿಕೊಂಡು ಮೂರು ಕಡೆ ಬೋನು ಇರಿಸಿ ಸೆರೆ ಕಾರ್ಯಾಚರಣೆ ಆರಂಭಿಸಿತ್ತು. ಸೆರೆಯಾಗದ ವ್ಯಾಘ್ರ ಪತ್ತೆಗೆ ಇಲಾಖೆ ಕ್ಯಾಮೆರಾ ಅಳವಡಿಸಿತ್ತು. ಶನಿವಾರ ಮಧ್ಯಾಹ್ನದ ವೇಳೆಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ ಹುಲಿ ಸೆರೆ ಹಿಡಿದಿದ್ದಾರೆ.

ADVERTISEMENT

ಇದು ಮೂರು ವರ್ಷದ ಹೆಣ್ಣು ಹುಲಿಯಾಗಿದ್ದು, ಗಾಯಗೊಂಡಿದೆ. ಸುಮಾರು 70 ಸಿಬ್ಬಂದಿ, ಡ್ರೋನ್ ಕ್ಯಾಮೆರಾ ತಂಡ ಹಾಗೂ ಪಶುವೈದ್ಯರು ಜತೆಗೆ ಸ್ಥಳೀಯ ಜನರ ಸಹಕಾರದಿಂದ ಸೆರೆ ಹಿಡಿಯಲಾಗಿದ್ದು, ಹುಲಿಯ ಆರೈಕೆಗಾಗಿ ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ನುಗು ಅರಣ್ಯ ಇಲಾಖೆ ಅಧಿಕಾರಿ ವಿವೇಕ್ ತಿಳಿಸಿದರು.

ಕಳೆದ ಒಂದು ವಾರದಿಂದ ಬಡಗಲಪುರ, ಹಾದನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡು ಜನರ ಆತಂಕಕ್ಕೆ ಕಾರಣವಾಗಿ ಉಪಟಳ ನೀಡುತ್ತಿದ್ದ ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು. ಅರಣ್ಯ ಇಲಾಖೆ, ಶುಕ್ರವಾರ ಕಾಡಾನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಆನೆಗಳನ್ನು ಕಂಡು ಗಾಬರಿಯಿಂದ ಕಾಡಿನತ್ತ ಓಡಿದ್ದ ಹುಲಿ, ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ರೈತ ಮಹದೇವ ಎಂಬುವರ ಮೇಲೆ ದಾಳಿ ಮಾಡಿ ಗಂಭೀರ ಗಾಯ ಮಾಡಿತ್ತು. 

‘ಎರಡು ತಿಂಗಳಿನಿಂದ ಹುಲಿ ಜಾನುವಾರು ಕೊಂದು ರೈತರು ಜಮೀನುಗಳಿಗೆ ಹೋಗದಂತೆ ಮಾಡಿತ್ತು. ಸದ್ಯ ಅರಣ್ಯ ಇಲಾಖೆಯವರು ಹುಲಿ ಸೆರೆ ಹಿಡಿದಿದ್ದು, ಗ್ರಾಮಸ್ಥರಿಗೆ ಸಮಾಧಾನವಾಗಿದೆ. ಹುಲಿ ದಾಳಿಯಿಂದ ಗಾಯಗೊಂಡ ರೈತ ಮಹದೇವ ಅವರಿಗೆ ಇಲಾಖೆ ಸೂಕ್ತ ಪರಿಹಾರ ನೀಡಬೇಕು’ ಎಂದು ಬಡಗಲಪುರ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ್ ಒತ್ತಾಯಿಸಿದರು.

ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಎಸಿಎಫ್ ಕೆ.ವಿ.ಸತೀಶ್, ಆರ್‌ಎಫ್‌ಒಗಳಾದ ವೈರಮುಡಿ, ರಾಜೇಶ್, ಅಮೃತೇಶ್‌, ರಾಮಾಂಜನೇಯ, ಅಮೃತಾ, ಮುನಿರಾಜು, ವಿವೇಕ್, ಬಿ.ಎಸ್. ಗಂಗಾಧರ್, ಬಿ.ಆರ್.ನಟರಾಜು, ಬಿ.ಕೆ.ಶಿವರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.