ADVERTISEMENT

ಶಾಸಕ ರಾಮದಾಸ್‌ ಅವರಿಂದ ದಿಕ್ಕು ತಪ್ಪಿಸುವ ಹೇಳಿಕೆ; ಆರೋಪ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 10:34 IST
Last Updated 13 ಜೂನ್ 2020, 10:34 IST
ಎಂ.ಲಕ್ಷ್ಮಣ
ಎಂ.ಲಕ್ಷ್ಮಣ   

ಮೈಸೂರು: ಇಲ್ಲಿನ ಕುರುಬಾರಹಳ್ಳಿ ಸರ್ವೇ ನಂಬರ್ 4ಕ್ಕೆ ಸೇರಿದ 350 ಎಕರೆ ಪ್ರದೇಶವನ್ನು ‘ಬಿ’ ಖರಾಬು ಮುಕ್ತಗೊಳಿಸಿ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿಳಿಸಿದರು.

‌ಈ ವಿಷಯದಲ್ಲಿ ಶಾಸಕ ಎಸ್.ಎ.ರಾಮದಾಸ್ ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಂಚಿಕೆ ಮಾಡಿರುವ ಭೂಮಿ ಇನ್ನೂ ‘ಬಿ’ ಖರಾಬಿನಲ್ಲೇ ಇದೆ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಬಿ’ ಖರಾಬಿನಿಂದ ಮುಕ್ತಗೊಳಿಸುವಂತೆ ಸರ್ಕಾರಕ್ಕೆ ಕಂದಾಯ ಇಲಾಖೆ ಟಿಪ್ಪಣಿಯೊಂದನ್ನು ಕಳುಹಿಸಿದೆ. ಇದೇ ಟಿಪ್ಪಣಿ ಆಧರಿಸಿ ಶಾಸಕ ರಾಮದಾಸ್ ಆದೇಶವೇ ಬಂತು ಎಂಬಂತೆ ಹೇಳುತ್ತಿದ್ದಾರೆ ಎಂದರು.

ADVERTISEMENT

‘ನಾವು ಕೂಡಾ ಉದ್ದೇಶಿತ ಜಾಗವು ‘ಬಿ’ ಖರಾಬಿನಿಂದ ಮುಕ್ತಗೊಳ್ಳಬೇಕು ಎನ್ನುವುದರ ಪರವಾಗಿದ್ದೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಸಂಪುಟದ ತೀರ್ಮಾನವಾಗಿತ್ತು. ಅಧಿಕೃತ ಘೋಷಣೆ ಮಾತ್ರವೇ ಬಾಕಿ ಉಳಿದಿತ್ತು. ಆದರೆ, ಈವರೆಗೂ ಸರ್ಕಾರ ಸಂಬಂಧಿಸಿದ ಕಡತವನ್ನು ಪರಿಶೀಲಿಸಿಯೇ ಇಲ್ಲ’ ಎಂದು ದೂರಿದರು.

ಉದ್ದೇಶಿತ ಜಾಗದಲ್ಲಿ ರಾಮದಾಸ್ ಅವರ ಸೋದರರ ಜಮೀನು ಇದೆ. ಇದಕ್ಕಾಗಿಯೇ ಇವರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಕುರಿತು ದನಿ ಎತ್ತಿದ್ದ ಬಿಜೆಪಿಯ ಗೋ.ಮಧುಸೂದನ್ ಕಾಣೆಯಾಗಿದ್ದಾರೆ. ಇವರು ಇನ್ನಾದರೂ ಜನರಿಗೆ ಸತ್ಯಾಂಶ ತಿಳಿಸಬೇಕು. ಈ ವಿಚಾರದಲ್ಲಿ ಬಹಿರಂಗವಾದ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದರು.

ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಕೇವಲ 18 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಿದೆ. ಆದರೆ, ಕಾವೇರಿ ನೀರು ನಿರ್ವಹಣಾ ಮಂಡಳಿ ಕರ್ನಾಟಕದಿಂದ ತಮಿಳುನಾಡಿಗೆ 41 ಟಿಎಂಸಿ ಅಡಿ ನೀರು ಬಿಡುಗಡೆ ಮಾಡುವಂತೆ ಆದೇಶಿಸಿರುವುದು ಅವೈಜ್ಞಾನಿಕ. ಶುಕ್ರವಾರದಿಂದಲೇ ನೀರು ಬಿಡಲು ಆರಂಭಿಸಲಾಗಿದೆ. ಇದು ಸರಿಯಲ್ಲ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.